ಮನುಸ್ಮೃತಿ ಸುಟ್ಟು ದಸಂಸದಿಂದ ಪ್ರತಿಭಟನೆ

KannadaprabhaNewsNetwork |  
Published : Dec 26, 2025, 01:00 AM IST
4 | Kannada Prabha

ಸಾರಾಂಶ

ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಸುಟ್ಟುಹಾಕಿ 98 ವರ್ಷಗಳಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಿ.ಆರ್. ಅಂಬೇಡ್ಕರ್ ಅವರು 1927ರ ಡಿ.25 ರಂದು ಮನುಸ್ಮೃತಿ ಸುಟ್ಟ ಐತಿಹಾಸಿಕ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿಯವರು ನಗರದ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಗುರುವಾರ ಸಾಂಕೇತಿಕವಾಗಿ ಮನುಸ್ಮೃತಿ ಸುಟ್ಟು ಪ್ರತಿಭಟಿಸಿದರು.

ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಸುಟ್ಟುಹಾಕಿ 98 ವರ್ಷಗಳಾಗಿವೆ. ಜಾತಿ ಅಸಮಾನತೆ, ಲಿಂಗ ತಾರತಮ್ಯ, ಮಹಿಳೆಯರ ಮೇಲಿನ ದಬ್ಬಾಳಿಕೆ, ಬಹುಜನರ ಮೇಲೆ ದೌರ್ಜನ್ಯ, ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ, ಬೆತ್ತಲೆ ಸೇವೆ, ದೇವದಾಸಿ ಪದ್ಧತಿ, ಶೂದ್ರಾತಿ ಶೂದ್ರರಿಗೆ ಅಕ್ಷರ ಜ್ಞಾನ ನಿಷಿದ್ದ ಮುಂತಾದ ಅನಿಷ್ಟ ಪದ್ಧತಿಗಳು ಶತಮಾನಗಳ ಕಾಲ ಮುಂದುವರಿಯಲು ಕಾರಣವಾದ ಮನುಸ್ಮೃತಿಯನ್ನು ಡಾ. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು ಎಂದರು.

ಸ್ವಾತಂತ್ರ್ಯ ಭಾರತಕ್ಕೆ ಸಂವಿಧಾನ ರೂಪಿಸುವ ಸಂದರ್ಭದಲ್ಲಿ ಸಮ ಸಮಾಜದ ನಿರ್ಮಾಣದ ಕನಸು ಹೊತ್ತು, ಸಮಾನತೆ, ಸಹೋದರತೆ, ಭಾತೃತ್ವದ ಆಶಯದೊಂದಿಗೆ ಸಂವಿಧಾನ ರೂಪಿಸಿಕೊಂಡೆವು. ಆದರೆ, ಸಂವಿಧಾನ ಸಮರ್ಪಣೆಯಾದ ಸಂದರ್ಭದಲ್ಲಿ ಆರ್‌ ಎಸ್‌ಎಸ್ ಮುಖವಾಣಿ ಆರ್ಗನೈಸರ್ ಪತ್ರಿಕೆ ಸಂವಿಧಾನದ ಮೇಲೆ ಅಸಹನೆ ಹೊರಹಾಕಿತ್ತು. ಈ ನಂವಿಧಾನದಲ್ಲಿ ಭಾರತೀಯತೆ ಇಲ್ಲ. ಸಂವಿಧಾನ ರಚನಾಕಾರರು ಮನುಸ್ಮೃತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮೂದಲಿಸಲಾಗಿತ್ತು ಎಂದು ಅವರು ಕಿಡಿಕಾರಿದರು.

ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಆರ್‌ ಎಸ್‌ಎಸ್ ಮತ್ತು ಅದರ ರಾಜಕೀಯ ಪಕ್ಷವಾದ ಬಿಜೆಪಿ ಅಂದಿನಿಂದ ಇಂದಿನವರೆಗೂ ಆಂತರಿಕ, ಬಹಿರಂಗವಾಗಿ ಅಂಬೇಡ್ಕರ್, ಸಂವಿಧಾನದ ಮೇಲೆ ಅಸಹಿಷ್ಣುತೆ ಹೊರಹಾಕುತ್ತಲೇ ಬಂದಿದೆ. ಮನು ಪ್ರಣೀತ ಭಾರತವನ್ನು ಬದಿಗೆ ಸರಿಸಿ, ಸಮಾನತೆ ಸಾರಿದ ಬೌದ್ಧತತ್ವ ಪ್ರದೇಶ, ಪ್ರಜಾತಾಂತ್ರಿಕ ಸಂವಿಧಾನ ರೂಪಿಸಿಕೊಂಡಿದ್ದನ್ನು ಸಹಿಸಿಕೊಳ್ಳದ ಶಕ್ತಿಗಳು ಇಂದು ಮತ್ತಷ್ಟು ಬಲಗೊಳ್ಳುತ್ತಿವೆ. ಡಾ. ಅಂಬೇಡ್ಕರ್, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಯುದ್ಧವನ್ನೇ ಸಾರಿವೆ. ಹೀಗಾಗಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಣೆ ಮಾಡಿಕೊಳ್ಳುವ ಕಾರಣಕ್ಕಾಗಿ ಹೋರಾಟ ಮುಂದುವರಿಸಬೇಕಿದೆ ಎಂದು ಅವರು ತಿಳಿಸಿದರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ, ಸೋಮಣ್ಣ ಕುಪ್ಪೇಗಾಲ, ಪ್ರಕಾಶ್, ತಿಮ್ಮೇಗೌಡ, ಕುಮಾರ್, ರಾಜಣ್ಣ, ದಿಲೀಪ್, ಶಿವು, ಮಹದೇವಮ್ಮ, ಕೃಷ್ಣಪ್ಪ, ರಮೇಶ್, ವಿಶ್ವನಾಥ್, ಶ್ಯಾಮಸುಂದರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್ ಬಿಹಾರಿ ವಾಜಪೇಯಿ ಮೌಲ್ಯಾಧಾರಿತ ರಾಜಕಾರಣಿ
ಮಾಗಡಿಯಲ್ಲಿ ಪತ್ರಕರ್ತರ ಭವನಕ್ಕೆ ಭೂಮಿಪೂಜೆ