ಕನ್ನಡಪ್ರಭ ವಾರ್ತೆ ಪಾಂಡವಪುರ
ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿ ಸಂವಿಧಾನದ ಮೂಲಕ ಮೂಲ ಹಕ್ಕು ಕೊಟ್ಟು ಜಾತಿ ನಿವಾರಣೆಗೆ ಶ್ರಮಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ವಿಷಾದನೀಯ ಎಂದು ಬೇಬಿಬೆಟ್ಟದ ಶ್ರೀಶಿವಬಸವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಬೇಬಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಮಾತನಾಡಿ, ವಿಶ್ವನಾಯಕರಾಗಿರುವ ಅಂಬೇಡ್ಕರ್ ಒಂದು ಜಾತಿಗೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ ಎಂದರು.
ನಾವು ಕುಡಿಯುವ ನೀರು, ಗಾಳಿ, ಬೆಳಕು ಯಾವುದರಲ್ಲೂ ಜಾತಿ ಇಲ್ಲ. ಆದರೆ, ಮನುಷ್ಯ ಮನುಷ್ಯರಲ್ಲಿ ಜಾತಿ ಏಕೆ, ನಾವು ಜಾತಿ ವ್ಯವಸ್ಥೆಯಿಂದ ಹೊರಬರಬೇಕು. ಮನುಷ್ಯರನ್ನು ಮನುಷ್ಯತ್ವದಿಂದ ಕಾಣಬೇಕು. ಪ್ರತಿಯೊಬ್ಬರು ಅಂಬೇಡ್ಕರ್ ಅವರ ತತ್ವ ಸಿದ್ಧಾಂತ, ಹೋರಾಟಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು ಎಂದರು.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದ ಮೂಲ ಹಕ್ಕು, ಮೀಸಲಾತಿಯಿಂದ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗಿವೆ. ಹಾಗಾಗಿ ಪ್ರತಿಯೊಬ್ಬರು ಅಂಬೇಡ್ಕರ್ ರನ್ನು ಜಾತಿಯ ಹೊರತಾಗಿ ಪೂಜ್ಯನೀಯ ಮನೋಭಾವದಿಂದ ನೋಡಬೇಕು ಎಂದರು.
ಭಾರತೀಯ ಪರಂಪರೆಯಲ್ಲಿ ದೇವಸ್ಥಾನ, ದೇವರು ನಂಬಿಕೆ, ಭಕ್ತಿಯ ಪ್ರತೀಕವಾಗಿದೆ. ಅಂಬೇಡ್ಕರ್ ಅವರು ಮಹಿಳೆಯರು ದೇವಸ್ಥಾನಕ್ಕೆ ಹೋಗುವುದನ್ನು ಕಡಿಮೆ ಮಾಡಿ ಗ್ರಂಥಾಲಯಗಳ ಕಡೆ ಬಂದೆ ದೇಶ ಉದ್ಧಾರವಾಗುತ್ತದೆ ಎಂಬುದಾಗಿ ಹೇಳಿದ್ದರು. ಅದರಂತೆ ನಾವುಗಳು ಪೂಜೆ, ಪುನಸ್ಕಾರಗಳನ್ನು ಮನಸ್ಸಿನ ನೆಮ್ಮದಿಗಾಗಿ ಮಾಡಬೇಕೆ ಹೊರತು ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳುವುದಕ್ಕಾಗಿ ಮಾಡಬಾರದು ಎಂದರು.ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಪುಸ್ತಕಗಳನ್ನು ಓದಿದರೆ ಮಾತ್ರ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ, ತತ್ವ, ಸಿದ್ದಾಂತಗಳ ಬಗ್ಗೆ ನಮಗೆ ಅರಿವು ಮೂಡುತ್ತದೆ ಎಂದರು.
ಇದೇ ವೇಳೆ ಅಂಬೇಡ್ಕರ್ ನಾಮಫಲಕವನ್ನು ಉದ್ಘಾಟಿಸಲಾಯಿತು. ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಬೈರಪ್ಪ, ಉಪನ್ಯಾಸಕ ಎಂ.ಕೆ.ಕೃಷ್ಣಯ್ಯ ಮಾತನಾಡಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು.ಸಮಾರಂಭದಲ್ಲಿ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶ್ರೀನಿವಾಸ್‌ಮೂರ್ತಿ, ಉಪಾಧ್ಯಕ್ಷ ರತ್ನೇಶ್, ಅಕ್ಷರ ಸೂರ್ಯ ಪತ್ರಿಕೆ ಸಂಪಾದಕ ಡಾ.ಮಹೇಶ್ ಎಂ.ಮುದ್ದೇನಹಟ್ಟಿ, ಉಪ ತಹಸೀಲ್ದಾರ್ ಪ್ರಕಾಶ್, ಶಿಕ್ಷಕ ಮಹದೇವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷರಾದ ಚಂದ್ರಶೇಖರಯ್ಯ, ಶಿವಣ್ಣ, ದಸಂಸ ಮುಖಂಡರಾದ ಬೊಮ್ಮರಾಜು, ಕಣಿವೆರಾಮು, ವಕೀಲ ಕಣಿವೆ ಯೋಗೇಶ್, ಬೇವಿನಕುಪ್ಪೆ ದೇವರಾಜು, ಬನ್ನಂಗಾಡಿ ಯೋಗೇಶ್, ಅರಳಕುಪ್ಪೆದೇವರಾಜು, ಇಳ್ಳೇನಹಳ್ಳಿ ದೇವರಾಜು, ವಿಜಯ್‌ಕುಮಾರ್, ಯಜಮಾನರಾದ ಚನ್ನನಿಂಗಯ್ಯ, ನಾಗೇಶ್, ಗಿರೀಶ್ ಹಾಗೂ ಯುವಕರ ಬಳದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.