ನವೆಂಬರ್‌ನಲ್ಲಿ ರಾಷ್ಟ್ರೀಯ ಮೀನುಗಾರಿಕಾ ಸಮೀಕ್ಷೆ

KannadaprabhaNewsNetwork |  
Published : Apr 24, 2025, 12:02 AM IST
32 | Kannada Prabha

ಸಾರಾಂಶ

ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5ನೇ ರಾಷ್ಟ್ರೀಯ ಮೀನುಗಾರಿಕಾ ಸಮೀಕ್ಷೆ ನವೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಮೀನುಗಾರರ ಮನೆಗಳ ಗಣತಿ ಕಾರ್ಯ ನಡೆಯಲಿದೆ.

ದೇಶದ ಮೀನುಗಾರಿಕಾ ನೀತಿ ರೂಪಿಸಲು, ಮೀನುಗಾರಿಕೆ ಮೂಲಸೌಕರ್ಯ ವೃದ್ಧಿ ಉದ್ದೇಶ

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5ನೇ ರಾಷ್ಟ್ರೀಯ ಮೀನುಗಾರಿಕಾ ಸಮೀಕ್ಷೆ ನವೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು, ಮೀನುಗಾರರ ಮನೆಗಳ ಗಣತಿ ಕಾರ್ಯ ನಡೆಯಲಿದೆ.ಈ ಸಮೀಕ್ಷೆಯು ರಾಷ್ಟ್ರಾದ್ಯಂತ ಮೀನುಗಾರರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ದಾಖಲಾತಿ ಮಾಡುವುದಲ್ಲದೆ, ರಾಷ್ಟ್ರೀಯ ಮೀನುಗಾರಿಕೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳ ನಕ್ಷೆಯನ್ನು ಚಿತ್ರಿಸುವ ಉದ್ದೇಶವನ್ನು ಹೊಂದಿದೆ.

ಮೀನುಗಾರರೇ ಎಣಿಕೆದಾರರು:

ಗಣತಿ ಎಣಿಕೆದಾರರನ್ನು ಸ್ಥಳೀಯ ಮೀನುಗಾರಿಕಾ ಸಮುದಾಯಗಳಿಂದ ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ 45 ದಿನಗಳ ಕಾಲ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ. ಎಣಿಕೆದಾರರು ಪ್ರತಿ ಮೀನುಗಾರರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಭಾರತೀಯ ಕೃಷಿ ಅನುಸಂಧಾನ ಪರಿಷದ್, ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಸ್ಥೆ ಕರಾವಳಿಯನ್ನು ಹೊಂದಿರುವ 9 ರಾಜ್ಯಗಳಲ್ಲಿನ ಸಮೀಕ್ಷೆಯ ಉಸ್ತುವಾರಿ ವಹಿಸಿದೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತೀಯ ಮೀನುಗಾರಿಕೆ ಸಮೀಕ್ಷಾ ಸಂಸ್ಥೆ (ಫಿಶರೀಸ್ ಸರ್ವೇ ಆಫ್ ಇಂಡಿಯಾ) ನೋಡಲ್ ಏಜೆನ್ಸಿಯಾಗಿ ನೇಮಕವಾಗಿದೆ.

ಈ ದಾಖಲಾತಿ ಕಾರ್ಯ ನಡೆಸುವ ಸಲುವಾಗಿ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ ಜಂಟಿ ಕಾರ್ಯದರ್ಶಿ ನೀತು ಕುಮಾರಿ ಪ್ರಸಾದ್ ಸಮ್ಮುಖದಲ್ಲಿ ಈಗಾಗಲೇ ಉನ್ನತ ಮಟ್ಟದ ಸಭೆ ನಡೆದಿದೆ. ಸಮೀಕ್ಷಾ ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಕ್ರಮಗಳು ಹಾಗೂ ಇನ್ನಿತರ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಮೀನುಗಾರಿಕಾ ಮಂಡಳಿಯ ಹಿರಿಯ ಅಧಿಕಾರಿಗಳು, ರಾಜ್ಯ- ಕೇಂದ್ರಾಡಳಿತ ಪ್ರದೇಶಗಳ ಮೀನುಗಾರಿಕಾ ಇಲಾಖೆ ಪ್ರತಿನಿಧಿಗಳು, ಮೀನುಗಾರಿಕಾ ಸಮೀಕ್ಷಾ ಸಂಸ್ಥೆ ಹಾಗು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಮೀನುಗಾರಿಕಾ ನೀತಿಗೆ ಪೂರಕ:

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಗ್ರಿನ್ಸನ್ ಜಾರ್ಜ್, ಈ ಸಮೀಕ್ಷೆಯು ದೇಶದ ಮೀನುಗಾರಿಕಾ ನಿರ್ವಹಣೆಯಲ್ಲಿ ಮುಖ್ಯವಾಗಿರುವ ನೀತಿಗಳನ್ನು ರೂಪಿಸುವಲ್ಲಿ ಅಗಾಧ ಪಾತ್ರ ವಹಿಸಲಿದೆ. ಮೀನುಗಾರಿಕೆಯ ಕಲ್ಯಾಣ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಜತೆಗೆ ಲಕ್ಷಾಂತರ ಮೀನುಗಾರರ ಏಳಿಗೆಗೆ ಸಹಾಯವಾಗಲಿದೆ ಎಂದು ತಿಳಿಸಿದರು.

ರಾಜ್ಯ ಮೀನುಗಾರಿಕೆ ಇಲಾಖೆ ಸಮೀಕ್ಷೆಗೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಅಗತ್ಯ ಸಂಪನ್ಮೂಲಗಳನ್ನು ನೀಡುವುದಾಗಿ ತಿಳಿಸಿದೆ................

ಸಮೀಕ್ಷೆಯಲ್ಲಿ ಏನೇನು ಮಾಹಿತಿ?

ಸಮೀಕ್ಷೆಯಲ್ಲಿ ಮೀನುಗಾರಿಕೆ ಸಮುದಾಯಗಳ ಜನಸಂಖ್ಯೆ, ಅವರ ಜೀವನೋಪಾಯಗಳನ್ನು ದಾಖಲಿಸುವುದಲ್ಲದೆ, ಮೀನುಗಾರಿಕಾ ಮೂಲಸೌಕರ್ಯಗಳಾದ ಮೀನುಗಾರಿಕಾ ದೋಣಿಗಳು, ಮೀನುಗಾರಿಕೆಯಲ್ಲಿ ಉಪಯೋಗಿಸುವ ಸಾಧನಗಳು, ಬಲೆಗಳ ವಿಧಗಳು, ಬಂದರುಗಳು, ಮೀನು ಸಂಸ್ಕರಣಾ ಘಟಕಗಳು ಮತ್ತು ಶೀತಲ ಶೇಖರಣಾ ಘಟಕಗಳ ಎಣಿಕೆ ಮಾಡಲಾಗುತ್ತದೆ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ