ಕನ್ನಡಪ್ರಭ ವಾರ್ತೆ ನಾಲತವಾಡ
ನಿರ್ಗತಿಕರಿಗೆ ಆಶ್ರಯ ಮನೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಆಶ್ರಯ ಮನೆಗಳನ್ನು ನೀಡುತ್ತದೆ. ಈ ಕಾರ್ಯಕ್ರಮವನ್ನು ಯಶಸ್ವಿ ಮಾಡುವುದು ಗ್ರಾಪಂ ಸದಸ್ಯರ ಕೈಯಲ್ಲಿದೆ, ನೈಜ ನಿರ್ಗತಿಕರಿಗೆ ಯೋಜನೆಗಳ ಲಾಭ ತಲುಪಿಸಬೇಕು ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ವೀರೇಶನಗರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಾಕಷ್ಟು ಜನರು, ನಾವು ನಿರ್ಗತಿಕರಿದ್ದೇವೆ. ಇಲ್ಲಿಯವರೆಗೆ ಆಶ್ರಯ ಮನೆಗಳನ್ನು ಪಡೆದಿಲ್ಲ. ನಮಗೆ ಆಶ್ರಯ ಮನೆಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದಾಗ ಶಾಸಕರು ಮಾತನಾಡಿ, ಸರ್ಕಾರ ಯಾವುದೇ ಯೋಜನೆಗಳನ್ನು ತರಬೇಕಾದರೆ ಮೊದಲು ನಿರ್ಗತಿಕರಿಗಾಗಿಯೇ ರೂಪಿಸುತ್ತದೆ. ಆದ್ದರಿಂದ ವೀರೇಶನಗರದ ನಿರ್ಗತಿಕರಿಗೆ, ಬಡವರಿಗೆ ಮೊದಲು ಮನೆಗಳನ್ನು ಹಾಕಿ. ನಾಗಬೇನಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ವೀರೇಶನಗರ, ನಾಗಬೇನಾಳ, ಆರೇಶಂಕರ, ನಾಗಬೇನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯ ವಿಪರೀತವಾಗಿದೆ ಎಂದು ಸಾಕಷ್ಟು ಜನರು ದೂರು ಬಂದಿವೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು, ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಇನ್ನು ಸಾಕಷ್ಟು ಕೆಲಸ ಬಾಕಿ ಉಳಿದಿದೆ. ಗುತ್ತಿಗೆದಾರರು ಕಾಮಗಾರಿ ಮಾಡಲು ಮುಂದಾಗುತ್ತಿಲ್ಲ, ಗುತ್ತಿಗೆದಾರನ ಬಗ್ಗೆ ಮಾತನಾಡಿದರೆ ರಾಜಕೀಯ ಪ್ರಾರಂಭ ಮಾಡುತ್ತಾರೆ. ಅಲ್ಲದೇ, ಇದೇ ಸಂದರ್ಭದಲ್ಲಿ ಅಧಿಕಾರಿಗೆ ಕರೆ ಮಾಡಿ ಗುತ್ತಿಗೆದಾರನಿಗೆ 15 ದಿನಗಳಲ್ಲಿ ವೀರೇಶ ನಗರದಲ್ಲಿನ ಜೆಜೆಎಂ ಕಾಮಗಾರಿ ಪೂರ್ಣವಾಗಬೇಕು, ಇಲ್ಲವಾದರೆ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಖಡಕ್ಕಾಗಿ ತಾಕೀತು ಮಾಡಿದರು.
ಅಲ್ಲದೇ, ಪುನರ್ವಸತಿ ಗ್ರಾಮ ವೀರೇಶನಗರದಲ್ಲಿ ಸಾಕಷ್ಟು ಜನ ನಕಲಿ ಉತಾರಿಗಳನ್ನು ಸೃಷ್ಠಿ ಮಾಡಿದ್ದು, ನಿಜವಾದ ಹಕ್ಕುಪತ್ರ ಇರುವ ಜನರಿಗೆ ಉತಾರಿ ಪೂರೈಕೆಯಾಗುತ್ತಿಲ್ಲ. ರಸ್ತೆ ಮೇಲೆಯೇ ಗಿಡಗಂಟಿಗಳನ್ನು ಮುಚ್ಚಿದ್ದಾರೆ. ಶೀಘ್ರದಲ್ಲೆ ಅಧಿಕಾರಿಗೆ ಉತಾರಿ ನೀಡಲು ಮತ್ತು ಅತಿಕ್ರಮಣ ಮಾಡಿಕೊಂಡವರ ವಿರುದ್ದ ಕ್ರಮ ವಹಿಸಬೇಕು ಎಂದು ಶಾಸಕರ ಗಮನಕ್ಕೆ ತಂದಾಗ ಶಾಸಕರು ಗ್ರಾಪಂ ಅಭಿವೃಧ್ಧಿ ಅಧಿಕಾರಿಗೆ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದರು.ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಯಿಂದ ಸಾಕಷ್ಟು ಕುಟುಂಬಗಳು ನೆಮ್ಮದಿಯಾಗಿವೆ. ಅನ್ನಭಾಗ್ಯ ಯೋಜನೆ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದರು.
ಈ ವೇಳೆ ತಾಪಂ ಇಒ ನಿಂಗಪ್ಪ ಮಸಳಿ, ತಾಲೂಕಾ ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಸಿಡಿಪಿಒ ಶಿವಪೂರ್ತಿ ಕುಂಬಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಿ.ಜಿ.ಮಠ, ಕೃಷಿ ಇಲಾಖೆಯ ಸುರೇಶ ಭಾವಿಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಪಿಡಿಒ ಮುರಿಗೆಮ್ಮ ಪೀರಾಪೂರ, ತಾಪಂ ಸಿಬ್ಬಂದಿ ವೀರಯ್ಯ ನಾಗರಾಳಮಠ, ಬಾಬು ಪೋತೆಗೋಳ ಇತರರು ಇದ್ದರು.-----------ಬಾಕ್ಸ್
ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಪುನರ್ವಸತಿ ಗ್ರಾಮವಾದ ವೀರೇಶ ನಗರದ ದೇವಿ ಮಠದ ಹಿಂಬಾಗದಲ್ಲಿ ವಾಸಿಸುವ ಕುಟುಂಬವೊಂದು ನೆರೆಮನೆಯವರ ಕಿರುಕುಳದ ಬಗ್ಗೆ ದೂರು ನೀಡಿತು. ರಸ್ತೆಯ ಮೇಲೆ ಬಂಡೆ ಹಾಗೂ ಕಂಟಿಗಳನ್ನು ಹಾಕಿದ್ದು, ಓಡಾಡಲು ಆಗುತ್ತಿಲ್ಲ. ಈ ಬಗ್ಗೆ ಗ್ರಾಪಂಗೆ ಸಾಕಷ್ಟು ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ. ಮುಳ್ಳು ತುಳಿದುಕೊಂಡೆ ಶಾಲೆಗೆ ಹೋಗಬೇಕಾಗಿದೆ. ಕುಡಿಯುವ ನೀರು ತರಲು ಆಗುತ್ತಿಲ್ಲ, ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಶಾಸಕರ ಮುಂದೆ ಕ್ರಿಮಿನಾಶಕ ಔಷಧ ಪ್ರದರ್ಶಿಸಿ ಪರಿಹಾರ ಸಿಗದಿದ್ದರೆ ನಾವು ಸಾಯುತ್ತೇವೆ ಎಂದು ಅವಲತ್ತುಕೊಂಡರು. ಕೂಡಲೇ ಶಾಸಕರು ಪೊಲೀಸ್ ಅಧಿಕಾರಿ ಹಾಗೂ ಪಿಡಿಒಗೆ ಸಮಸ್ಯೆ ಬಗೆಹರಿಸುವಂತೆ ಶಾಸಕ ಸಿ.ಎಸ್.ನಾಡಗೌಡ ಸೂಚಿಸಿದರು.