ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತಾಂಧನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದವು.

ಹುಬ್ಬಳ್ಳಿ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಮತಾಂಧನನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದವು.

ನೇಕಾರ ನಗರದ ದಾದಾಪೀರ ಹೆಬ್ಬಳ್ಳಿ ಎಂಬಾತ ದೇವಸ್ಥಾನವೊಂದರ ಬಳಿ ನಿಂತು ಹಿಂದೂ ದೇವರಿಗೆ ಅವಮಾನ ಮಾಡಿದ್ದ ವಿಡಿಯೋವನ್ನು ತನ್ನ ಮೊಬೈಲ್‌ ಸ್ಟೇಟಸ್‌ ಇಟ್ಟುಕೊಂಡಿದ್ದನು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಕುರಿತು ಗುರುವಾರ ಹಳೇ ಹುಬ್ಬಳ್ಳಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ದಾದಾಪೀರನನ್ನು ಬಂಧಿಸಿದ್ದರು.

ಈ ಸುದ್ದಿ ಹರಡುತ್ತಿದ್ದಂತೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಎದುರು ಸಮಾವೇಶಗೊಂಡ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಿಂದೂ ದೇವರಿಗೆ ಅವಮಾನ ಮಾಡಿರುವ ಮತಾಂಧನನ್ನು ಕೂಡಲೇ ಗಡಿಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈಗಾಗಲೇ ಆರೋಪಿಯ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದರು. ಅದಕ್ಕೊಪ್ಪದ ಪ್ರತಿಭಟನಾಕಾರರು ಅವನನ್ನು ಈ ಕೂಡಲೇ ಗಡಿಪಾರು ಮಾಡಿ ಇಲ್ಲವೇ ನಮ್ಮ ವಶಕ್ಕೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರೊಂದಿಗೆ ಕೆಲಕಾಲ ವಾಗ್ವಾದ ನಡೆಯಿತು. ಬಳಿಕ ಪರಿಸ್ಥಿತಿ ತಿಳಿಸಿಗೊಳಿಸಿದ ಪೊಲೀಸರು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಮಂಜು ಕಾಟ್ಕರ್‌, ರಘು ಯಲ್ಲಕ್ಕನವರ, ಬಸು ಗೌಡರ, ಮಂಜುನಾಥ ತೇರದಾಳ, ಬಸು ದುರ್ಗದ, ಅನ್ನಣ್ಣ ದಿವಟಗಿ, ಗುಣಧರ ದಡೌತಿ, ವೀರಯ್ಯ ಸಾಲಿಮಠ ಸೇರಿದಂತೆ ಹಲವರಿದ್ದರು.