ವೈದ್ಯರ ನಿರ್ಲಕ್ಷ್ಯ ಆರೋಪ: ಬಾಣಂತಿ ಸಾವು

KannadaprabhaNewsNetwork | Published : Apr 24, 2025 12:02 AM

ಸಾರಾಂಶ

ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ (ಎಂಎಸಿಎಚ್‌) ಆಸ್ಪತ್ರೆಯಲ್ಲಿ ಚೊಚ್ಚಲ ಹೆರಿಗೆಯಾಗಿದ್ದ ಬಾಣಂತಿ ಬುಧವಾರ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಏಪ್ರಿಲ್‌ 20ರಂದು ಸಿಜೇರಿಯನ್‌, ಆಸ್ಪತ್ರೆಯಲ್ಲಿ ಇದ್ದರೂ ನೋಡದ ವೈದ್ಯರು

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ತಾಯಿ ಮತ್ತು ಮಕ್ಕಳ ಸರ್ಕಾರಿ (ಎಂಎಸಿಎಚ್‌) ಆಸ್ಪತ್ರೆಯಲ್ಲಿ ಚೊಚ್ಚಲ ಹೆರಿಗೆಯಾಗಿದ್ದ ಬಾಣಂತಿ ಬುಧವಾರ ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ದಶಮಾಪುರ ಗ್ರಾಮದ ಶಾಂತಾ (25) ಮೃತ ಬಾಣಂತಿ. ಚೊಚ್ಚಲ ಹೆರಿಗೆ ಹಿನ್ನೆಲೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ತಾಯಿ ಮನೆಗೆ ಶಾಂತಾ ಬಂದಿದ್ದರು. ಇವರ ತಾಯಿ ರತ್ನಮ್ಮ ಆಶಾ ಕಾರ್ಯಕರ್ತೆಯಾಗಿದ್ದು, ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಗರದ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಏ. 20ರಂದು ಬೆಳಗ್ಗೆ 9.30ರ ಹೊತ್ತಿಗೆ ವೈದ್ಯೆ ಡಾ. ಸಿಂಧು ಷಾ ಸಿಜೇರಿಯನ್‌ ಹೆರಿಗೆ ಮಾಡಿಸಿದ್ದರು. ಬಳಿಕ ಡಾ. ಸಿಂಧು ಹಾಗೂ ಸ್ಟಾಫ್‌ ನರ್ಸ್‌ ರಘುನಾಥ ಎಸ್.ಜೆ. ತಪಾಸಣೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ರತ್ನಮ್ಮ ತಪಾಸಣೆ ನಡೆಸಲು ಗೊಗರೆದರೂ ನಿರ್ಲಕ್ಷ್ಯವಹಿಸಲಾಗಿದೆ. ಹೆರಿಗೆಯಾಗಿ ನಾಲ್ಕು ದಿನಗಳು ಕಳೆದರೂ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಹಾಗಾಗಿ ತನ್ನ ಪುತ್ರಿ ಶಾಂತಾ ಮೃತಪಟ್ಟಿದ್ದಾರೆ ಎಂದು ರತ್ನಮ್ಮ ಆಸ್ಪತ್ರೆ ಎದುರು ರೋದಿಸಿದರು. ನಾವು ಆಶಾ ಕಾರ್ಯಕರ್ತೆಯಾಗಿ ಹಲವು ಹೆರಿಗೆ ಮಾಡಿಸಿರುವೆ. ಆದರೆ, ಈ ರೀತಿ ವೈದ್ಯರು ಹಾಗು ಸ್ಟಾಫ್‌ ನರ್ಸ್‌ ನಿರ್ಲಕ್ಷ್ಯ ವಹಿಸಿದ್ದಾರೆ. ಕನಿಷ್ಠ ಬಿಪಿ ಕೂಡ ಚೆಕ್‌ ಮಾಡಲಿಲ್ಲ, ಕಾಲ ಕಾಲಕ್ಕೆ ಬಿಪಿ ಚೆಕ್‌ ಮಾಡಿದರೂ ನನ್ನ ಮಗಳು ಉಳಿದುಕೊಳ್ಳುತ್ತಿದ್ದಳು ಎಂದು ರೋದಿಸಿದರು.

ಹೆರಿಗೆ ಮಾಡಿಸಿ, ಐದು ಸಾವಿರ ರು. ತೆಗೆದುಕೊಂಡ್ರು:

"ನನ್ನ ಮಗಳಿಗೆ ಸಿಜೇರಿಯನ್‌ ಹೆರಿಗೆ ಮಾಡಿಸಲು ಐದು ಸಾವಿರ ರು. ತೆಗೆದುಕೊಂಡರು. ಸ್ವತಃ ಸಿಂಧು ಮೇಡಂ ಕೈಯಲ್ಲೇ ಕೊಟ್ಟಿರುವೆ. ನಾಲ್ಕು ಸಾವಿರ ರು. ಕೊಡಲು ಹೋದಾಗ ಬೇಡ ಎಂದ್ರು, ಹಾಗಾಗಿ ಐದು ಸಾವಿರ ರು. ಕೊಟ್ಟೆ, ಹಣ ಕೊಟ್ರೂ ಹೆರಿಗೆ ಆದ ಬಳಿಕ ಸಿಂಧು ಡಾಕ್ಟರ್‌, ಸ್ಟಾಫ್‌ ನರ್ಸ್‌ ರಘುನಾಥ ಬ್ರದರ್‌ ಒಮ್ಮೆಯೂ ಬಂದು ನೋಡಲಿಲ್ಲ. ಅವರು ಬಂದು ನೋಡಿದ್ದರೆ ನನ್ನ ಮಗಳು ಉಳಿಯುತ್ತಿದ್ದಳು " ಎಂದು ರತ್ನಮ್ಮ ದೂರಿದರು.

ಸರ್ಕಾರಿ ಆಸ್ಪತ್ರೆಗೆ ಯಾರೂ ಬರಬಾರ್ದು:

"ಈ ಆಸ್ಪತ್ರ್ಯಾಗ್‌ ದುಡ್ಡು ಕೊಟ್ರೂ, ನನ್ನ ಮಗಳನ್ನು ಉಳಿಸಲು ಆಗಲಿಲ್ಲ. ಒಮ್ಮೆಯೂ ಡಾಕ್ಟ್ರು ಬಂದು ನೋಡಲಿಲ್ಲ. ನನ್ನ ಮೊಮ್ಮಗಳಿಗೆ ಮಕ್ಕಳ ಡಾಕ್ಟ್ರು ಬಂದು ನೋಡುತ್ತಿದ್ರು. ಆದ್ರ್‌, ನನ್ನ ಮಗಳು ಶಾಂತಾಳಿಗೆ ನೋಡಲು ಸಿಂಧು ಡಾಕ್ಟರ್‌ ಬರಲೇ ಇಲ್ಲ. ಕೇಳಿದ್ರ ರಜೆಯಲ್ಲಿ ಇದ್ದಾರೆ ಎಂದು ಸ್ಟಾಫ್‌ ನರ್ಸ್‌ ಹೇಳಿದರು. ದುಡ್ಡು ಕೊಟ್ರೂ ನೋಡದ್‌ ಸರ್ಕಾರಿ ಆಸ್ಪತ್ರೆಯ್ಯಾಗ್‌ ಯಾರೂ ಬರಬಾರ್ದು. ನಾನು ಆಶಾ ಕಾರ್ಯಕರ್ತೆಯಾಗಿ ಹೇಳುತ್ತಿರುವೆ. ಖಂಡಿತ ಯಾರೂ ಬರಬಾರ್ದು " ಎಂದು ರತ್ನಮ್ಮ ಕಣ್ಣಿರಾದರು.

ಬಾಣಂತಿ ಶಾಂತಮ್ಮ ಸಾವಿನ ಮುನ್ನ ಎರಡು ಇಡ್ಲಿ ಸೇವಿಸಿದರು. ಸೇವಿಸಿದ ಬಳಿಕ ಸ್ವಲ್ಪ ಹೊತ್ತು ನಿದ್ರೆಗೂ ಜಾರಿದ್ದರು. ಎದ್ದ ಬಳಿಕ ನೀವು ನನಗೆ ಇಬ್ಬಿಬ್ಬರು ಕಾಣುತ್ತಿದ್ದೀರಿ ಎಂದು ಹೇಳಿದ ತಕ್ಷಣವೇ ಬಿಪಿ ಚೆಕ್‌ ಮಾಡಿ ಎಂದು ರತ್ನಮ್ಮ ಗೋಳಾಡಿದಾರೆ. ಆಗ ವೈದ್ಯರು ಹಾಗೂ ನರ್ಸ್‌ಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ರತ್ನಮ್ಮ ದೂರಿದ್ದಾರೆ.

ಬಾಣಂತಿ ಶಾಂತಾಗೆ ಏ.20ರಂದು ಸಿಜೇರಿಯನ್ ಹೆರಿಗೆಯನ್ನು ಡಾ. ಸಿಂಧು ಷಾ ಮಾಡಿಸಿದ್ದಾರೆ. ಆ ಬಳಿಕ ತಪಾಸಣೆ ನಡೆಸಿಲ್ಲ ಎಂಬ ಆರೋಪ ಇದೆ. ವೈದ್ಯೆ ಹಾಗೂ ಸ್ಟಾಫ್ ನರ್ಸ್ ರಘುನಾಥ ಎಸ್.ಜೆ. ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಹಾಗಾಗಿ ಈಗ ಇವರಿಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸಾವಿನ ಮುನ್ನ ಮೂರ್ಚೆ ಬಂದಿದ್ದು, ಪೋಸ್ಟ್ ಮಾರ್ಟಂ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಎಚ್‌ಒ ಡಾ. ಎಲ್.ಆರ್. ಶಂಕರ ನಾಯ್ಕ ತಿಳಿಸಿದ್ದಾರೆ.

ಬಾಣಂತಿ ಸಾವು-ವೈದ್ಯೆ, ಸ್ಟಾಫ್‌ ನರ್ಸ್‌ ವಜಾ:

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ತ್ರೀ ರೋಗ ತಜ್ಞೆ ಡಾ. ಸಿಂಧು ಷಾ ಹಾಗೂ ಶುಶ್ರೂಷಕ ರಘುನಾಥ ಎಸ್.ಜೆ. ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಡಿಎಚ್‌ಒ ಡಾ. ಎಲ್.ಆರ್. ಶಂಕರನಾಯ್ಕ ಆದೇಶ ಹೊರಡಿಸಿದ್ದಾರೆ.

ಡಾ. ಸಿಂಧು ಷಾ ಹೆರಿಗೆಯಾದ ಬಳಿಕ ಬಾಣಂತಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಕರ್ತವ್ಯ ಲೋಪವೆಸಗಿರುವುದರಿಂದ ಬಾಣಂತಿ ಮೃತಪಟ್ಟಿರುವ ಕಾರಣ ತಕ್ಷಣದಿಂದಲೇ ವಜಾಗೊಳಿಸಲಾಗಿದೆ. ಜತೆಗೆ ಶುಶ್ರೂಷಕ ರಘುನಾಥ ಹೆರಿಗೆಗೆ ಹಣ ಪಡೆದಿರುವುದಾಗಿ ಸಂಬಂಧಿಕರು ದೂರಿದ್ದು, ಬಾಣಂತಿಗೆ ಸರಿಯಾದ ಚಿಕಿತ್ಸೆಯೂ ನೀಡದೆ ಕರ್ತವ್ಯ ಲೋಪವೆಸಗಿದ ಪರಿಣಾಮ ಕೂಡಲೇ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.ಕಡಕ್ ಎಚ್ಚರಿಕೆ:

ಡಿಎಚ್‌ಒ ಡಾ. ಶಂಕರನಾಯ್ಕ, ಬಾಣಂತಿ ಸಾವಿನ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಉಳಿದ ಸಿಬ್ಬಂದಿ ಕೂಡ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಆಸ್ಪತ್ರೆಗೆ ಬರುವ ಜನರಿಗೆ ತೊಂದರೆ ಕೊಟ್ಟರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ತನಿಖೆಗೆ ತಂಡ: ಈ ಪ್ರಕರಣವನ್ನು ವಿಶೇಷ ತಂಡ ರಚಿಸಿ ತನಿಖೆ ಮಾಡಿಸಲಾಗುವುದು. ಮೂರು ದಿನಗಳಲ್ಲಿ ತನಿಖಾ ವರದಿ ಪಡೆದು ಮುಂದಿನ ಕ್ರಮ ವಹಿಸಲಾಗುವುದು. ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳು ಸಂಪೂರ್ಣ ಉಚಿತವಾಗಿವೆ. ಯಾರಾದರೂ ಹಣ ಪಡೆದಿರುವುದು ಸಾಬೀತಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯನಾಯಕ, ವೈದ್ಯಾಧಿಕಾರಿ ಡಾ. ಹರಿಪ್ರಸಾದ್ ಇದ್ದರು.

Share this article