20 ಕೋಟಿ ರು.ವೆಚ್ಚದ ಯೋಜನೆಗಳ ಜಾರಿ: ವಿಕ್ರಮ್‌ದತ್ತ

KannadaprabhaNewsNetwork | Published : Apr 24, 2025 12:02 AM

ಸಾರಾಂಶ

3181 ವಲಯದಲ್ಲಿ 9 ವರ್ಷದಲ್ಲಿ ಸುಮಾರು 20 ಕೋಟಿ ರು. ವೆಚ್ಚದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು 3181 ಜಿಲ್ಲಾ ಗವರ್ನರ್‌ ವಿಕ್ರಂ ದತ್ತ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗು, ದಕ್ಷಿಣ ಕನ್ನಡ , ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯನ್ನು ಒಳಗೊಂಡಿರುವ 3181 ವಲಯದಲ್ಲಿ 9 ವರ್ಷದಲ್ಲಿ ಸುಮಾರು 20 ಕೋಟಿ ರು.ವೆಚ್ಚದ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೋಟರಿ ಸಂಸ್ಥೆಯು ಸಂಧ್ಯಾಸುರಕ್ಷಾ, ಅಂಗನವಾಡಿ ಪುನಶ್ಚೇತನ ಕಾರ್ಯಕ್ರಮಗಳು ಮತ್ತು ಆರೋಗ್ಯ ಸುರಕ್ಷಾ ಯೋಜನೆಗೆ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು 3181 ಜಿಲ್ಲಾ ಗವರ್ನರ್ ವಿಕ್ರಮ್‌ದತ್ತ ಹೇಳಿದರು.

ಸೋಮವಾರಪೇಟೆ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ಇಡೀ ವಿಶ್ವದಾದ್ಯಂತ ಸಮಾಜಮುಖಿ ಸೇವೆಯ ಮೂಲಕವೇ ಜನಮಾನಸದಲ್ಲಿ ಗುರುತಿಸಿಕೊಂಡಿದೆ. 200 ದೇಶದಲ್ಲಿ 35000 ಕ್ಲಬ್ ಹೊಂದಿರುವ ರೋಟರಿ ಸಂಸ್ಥೆ ದೇಶದಲ್ಲಿ ಸುಮಾರು 35 ಕೋಟಿ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದೆ ಎಂದರು.

ಪ್ರಪಂಚಾದ್ಯಂತ ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದೆ. ಪಾಕಿಸ್ತಾನ, ಅಪಘಾನಿಸ್ಥಾನದಲ್ಲಿ ಒಂದರೆಡು ಪೊಲೀಯೋ ಪ್ರಕರಣ ಇದ್ದು, ಸಂಪೂರ್ಣ ನಿರ್ಮೂಲನೆಗೆ ರೋಟರಿ ಫೌಂಡೇಶನ್ ಹಣವನ್ನು ನೀಡಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ನಿರಾಶ್ರಿತರಿಗೆ ರೋಟರಿ ಫೌಂಡೇಶನ್ ವತಿಯಿಂದ 50 ಉಚಿತ ಮನೆಗಳು ನಿರ್ಮಿಸಿಕೊಟ್ಟಿದ್ದೇವೆ. ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆಗಳು, ಆಕ್ಸಿಜನ್ ಸೇರಿದಂತೆ ಮತ್ತಿತರ ವಸ್ತುಗಳನ್ನು ನೀಡುವ ಮೂಲಕ ಮಾನವೀಯತೆಯ ಸೇವೆ ಮಾಡಿದ್ದೇವೆ. ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನಲ್ಲಿ ವಿವೇಕಾನಂದ ಮೂವ್‌ಮೆಂಟ್‌ ಸಂಸ್ಥೆಯ ಸಹಯೋಗದೊಂದಿಗೆ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಸಹಾಯಕ ಪ್ರಾಂತ್ಯಪಾಲ ಡಾ. ಹರಿ ಎ.ಶೆಟ್ಟಿ ಮಾತನಾಡಿ, ಯಾವುದೇ ಮಗುವು ತಾಯಿಯ ಎದೆ ಹಾಲಿನಿಂದ ವಂಚಿತರಾಗಬಾರದೆಬ ಉದ್ದೇಶದಿಂದ ಅಮೃತಧಾರೆ ಎಂಬ ಹ್ಯೂಮನ್ ಮಿಲ್ಕ್ ಬ್ಯಾಂಕ್ ಸ್ಥಾಪಿಸಿ ತಾಯಂದಿರ ಎದೆ ಹಾಲು ಸಂಸ್ಕರಿಸುವ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು. ಆಸಕ್ತ ತಾಯಂದಿರು ನೋಂದಣಿ ಮಾಡಿಸಿ ಮಹಾನ್ ಸೇವೆಯ ಮೂಲಕ ದಾರಿ ದೀಪವಾಗಿದ್ದಾರೆ. 4 ಸಾವಿರ ತಾಯಂದಿಯರು ಎದೆ ಹಾಲನ್ನು ನೀಡಲು ಸ್ವಯಂಪ್ರೇರಿತರಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ 5 ವರ್ಷದಲ್ಲಿ 835 ಲೀಟರ್ ಎದೆಹಾಲನ್ನು ನೀಡಿದ್ದಾರೆ. ಎದೆ ಹಾಲನ್ನು ಸಂಸ್ಕರಿಸಿ ನಿಃಶಕ್ತಿಯಿಂದ ಬಳಲುವ ಮಕ್ಕಳಿಗೆ ನೀಡಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಲಯ ಸೇನಾನಿ ಎಂ.ಎಂ. ಪ್ರಕಾಶ್ ಕುಮಾರ್, ರೋಟರಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ನಿಯೋಜಿತ ಅಧ್ಯಕ್ಷ ವೀಣಾ ಮನೋಹರ್ ಇದ್ದರು.

Share this article