ಸ್ಟಿಕ್ ವರ್ಕ್‌ ಮ್ಯಾಜಿಕ್ - ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಕೃತಿ ಲೋಕಾರ್ಪಣೆ

KannadaprabhaNewsNetwork | Published : Apr 24, 2025 12:01 AM

ಸಾರಾಂಶ

ಪತ್ರಕರ್ತ ಕೊಟ್ಟಿಯಂಡ ಜೀವನ್‌ ಚಿಣ್ಣಪ್ಪ ಬರೆದು ಪತ್ರಕರ್ತ ಅನಿಲ್‌ ಹೆಚ್‌ ಟಿ ಹೊರತಂದಿರುವ ಸ್ಟಿಕ್‌ ವರ್ಕ್‌ ಮ್ಯಾಜಿಕ್‌ ಸಾಗಾ ಆಫ್‌ ಕೊಡವ ಫ್ಯಾಮಿಲಿ ಹಾಕಿ ಎಂಬ ಕೊಡವ ಹಾಕಿ ಪಂದ್ಯಾಟದ 25 ವರ್ಷಗಳ ಇತಿಹಾಸದ ಮಾಹಿತಿಯುಳ್ಳ ಇಂಗ್ಲಿಷ್‌ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕೌಟುಂಬಿಕ ಹಾಕಿ ಹಬ್ಬವು ಕ್ರೀಡೆಯ ಜತೆಗೇ ತನ್ನ ವೈವಿಧ್ಯತೆಯ ಕಾರ್ಯಕ್ರಮಗಳ ಮೂಲಕ ಜಗತ್ತಿನ ಗಮನವನ್ನೇ ಸೆಳೆದಿದ್ದು, ಇಂಥ ಕ್ರೀಡಾ ಹಬ್ಬವನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ವೈಭವದಿಂದ ಆಯೋಜಿಸುವ ನಿಟ್ಟಿನಲ್ಲಿ ಸರ್ವ ಸಮುದಾಯವರೂ ಕೈಜೋಡಿಸಬೇಕು ಎಂದು ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಕರೆ ನೀಡಿದ್ದಾರೆ.ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಬರೆದು ಪತ್ರಕರ್ತ ಅನಿಲ್ ಹೆಚ್.ಟಿ. ಹೊರತಂದಿರುವ ಸ್ಟಿಕ್ ವರ್ಕ್‌ ಮ್ಯಾಜಿಕ್ - ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಎಂಬ ಕೊಡವ ಹಾಕಿ ಪಂದ್ಯಾಟದ 25 ವರ್ಷಗಳ ಇತಿಹಾಸದ ಮಾಹಿತಿಯುಳ್ಳ ಇಂಗ್ಲೀಷ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

5 ಸಾವಿರ ಹಾಕಿ ಆಟಗಾರರು ಪಂದ್ಯಾಟದಲ್ಲಿ ಪಾಲ್ಗೊಳ್ಳುವುದೇ ಚರಿತ್ರಾಹ೯ ವಿಚಾರ. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌, ಗಿನ್ನೀಸ್ ರೆಕಾರ್ಡ್‌ಗೂ ಕೂಡ ಸೇರಿರುವ ಹಾಕಿ ಪಂದ್ಯಾವಳಿ ಮುಂದಿನ ದಿನಗಳಲ್ಲಿ ವಿಶ್ವದಾಖಲೆಯನ್ನು ನಿರಂತರ ಉಳಿಸಿಕೊಳ್ಳುವಂತಾಗಲಿ ಎಂದು ನಾಣಯ್ಯ ಹಾರೈಸಿದರು.

ಜಾರಿಗೆ ಪ್ರಯತ್ನ: ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ತನ್ನ ತಂದೆ ಪಾಂಡಂಡ ಕುಟ್ಟಪ್ಪನವರು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾವಳಿ ಪ್ರಾರಂಭ ಮಾಡಿದಾಗ ಅನೇಕರು ವೃತ್ತಿಪರರಲ್ಲದವರನ್ನು ಬಳಸಿಕೊಂಡು ಎಂಥ ಹಾಕಿ ಎಂದು ವ್ಯಂಗ್ಯ, ಹಾಸ್ಯ ಮಾಡಿದ್ದರು. ಆದರೂ ಛಲಬಿಡದೆ ತನ್ನ ತಂದೆ ಕುಟ್ಟಪ್ಪನವರು ಹಾಕಿ ಪಂದ್ಯಾವಳಿಯನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸಿದ್ದರು. ತಂದೆ ಹಾಕಿ ಕೊಟ್ಟ ಮಾರ್ಗದರ್ಶನದಂತೆ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷನಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಮುನ್ನಡೆಸುತ್ತಿದ್ದೇನೆ. ಪ್ರತೀ ವರ್ಷವೂ 20-30 ಹೊಸ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದೇ ರೀತಿ ಮುಂದುವರೆದರೆ ಮುಂದಿನ 5 ವರ್ಷಗಳಲ್ಲಿ 500 ತಂಡಗಳು ಬರುವ ಸಾಧ್ಯತೆಯಿದೆ. ಈಗಾಗಲೇ 2033 ರವರೆಗೆ ಅಂದರೆ ಮುಂದಿನ 8 ವರ್ಷಗಳವರೆಗೂ ಆಯೋಜಿಕ ಕುಟುಂಬಸ್ಥರು ಕೊಡವ ಹಾಕಿ ಪಂದ್ಯಾವಳಿ ಆಯೋಜನೆಗೆ ಸಿದ್ಧರಾಗಿದ್ದಾರೆ. ಅಂತಾರಾಷ್ಟ್ರೀಯ ಸಿಂಥೆಟಿಕ್ ಟಫ್೯, ಮೈದಾನ ಬೇಕು. ಹಾಕಿಗೆ ಆದ್ಯತೆ ನೀಡುವಂಥ ಕ್ರೀಡಾ ಅಕಾಡೆಮಿಯೂ ಕೊಡಗಿಗೆ ಬೇಕು. ಇದರ ಜಾರಿಗೆ ತಾನು ಪ್ರಯತ್ನಿಸುತ್ತಿದ್ದೇನೆ ಎಂದೂ ಪಾಂಡಂಡ ಬೋಪಣ್ಣ ಹೇಳಿದರು.ಸಕಾ೯ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಪಾಂಡಂಡ ಕುಟ್ಟಪ್ಪನವರು 1997 ರಲ್ಲಿ ಪ್ರಾರಂಭಿಸಿದ್ದ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಅನೇಕ ದಾಖಲೆಗಳ ಮೂಲಕ ದೇಶದಲ್ಲಿಯೇ ಪುಟ್ಟ ಜನಾಂಗವಾದ ಕೊಡವರ ಕ್ರೀಡಾ ಸಾಧನೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಶ್ಲಾಘಿಸಿದರು. ಸ್ಟಿಕ್ ವಕ್೯ ಮ್ಯಾಜಿಕ್ ಕೃತಿಯ ಲೇಖಕ, ಪತ್ರಕರ್ತ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಮಾತನಾಡಿ, ಅನೇಕ ಕುಟುಂಬಗಳಲ್ಲಿ ಸಮರ್ಪಕ ಮಾಹಿತಿಯ ದಾಖಲೆಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇಂಥ ಕೊರತೆಯಾಗಂತೆ ಕೊಡವ ಹಾಕಿ ಅಕಾಡೆಮಿಯೇ ಪರಿಪೂರ್ಣ ರೀತಿಯಲ್ಲಿ ಪ್ರತೀ ವರ್ಷದ ಹಾಕಿ ಪಂದ್ಯಾವಳಿಯ ದಾಖಲೆಯನ್ನು ಸಂಗ್ರಹಿಸಿಟ್ಟುಕೊಳ್ಳುವಂತಾಗಬೇಕು ಎಂದರು.

ಸಾಕ್ಷ್ಯ ಚಿತ್ರ ನಿಮಿ೯ಸುತ್ತಿದ್ದೇವೆ: ಮುದ್ದಂಡ ಹಾಕಿ ಪಂದ್ಯಾವಳಿ ಆಯೋಜಕ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, ಹೊಸ ಪ್ರಯತ್ನವಾಗಿ ಈ ಕೊಡವ ಹಾಕಿ ಪಂದ್ಯಾವಳಿ ಸಾಗಿ ಬಂದ ಹಾದಿಯ ಬಗ್ಗೆ ಸಾಕ್ಷ್ಯ ಚಿತ್ರವನ್ನೂ ನಿಮಿ೯ಸುತ್ತಿದ್ದೇವೆ .ಸೋಷಿಯಲ್ ಮೀಡಿಯಾ ಮೂಲಕ ಯುವಪೀಳಿಗೆಯನ್ನು ಮುದ್ದಂಡ ಹಾಕಿ ಪಂದ್ಯಾವಳಿ ನಿರೀಕ್ಷೆಗೂ ಮೀರಿ ತಲುಪಿದೆ ಎಂದರು. ಇದೇ ರೀತಿಯ ವಿನೂತನ ಪ್ರಯತ್ನಗಳು ಪ್ರತೀ ವರ್ಷವೂ ಮುಂದುವರೆದರೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿಯೂ ಪ್ರಜ್ವಲಿಸಲು ಸಾಧ್ಯವಿದೆ ಎಂದೂ ರಶಿನ್ ಸುಬ್ಬಯ್ಯ ಹೇಳಿದರು.

ಸ್ಟಿಕ್ ವಕ್೯ ಮ್ಯಾಜಿಕ್ ಕೃತಿಯ ಪ್ರಕಾಶಕ, ಪತ್ರಕರ್ತ ಅನಿಲ್ ಎಚ್. ಟಿ. ಮಾತನಾಡಿ, 1 ಸಮುದಾಯ,1 ನಾಡು, 1 ಕ್ರೀಡೆ, ನೂರಾರು ತಂಡಗಳು, ಸಾವಿರಾರು ಆಟಗಾರರ ಮೂಲಕ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮುದ್ದಂಡ ಕುಟುಂಬಸ್ಥರು ಮಹಿಳಾ ಹಾಕಿ ಪಂದ್ಯಾವಳಿಯ ಮೂಲಕ ಮಹಿಳೆಯರಿಗೂ ಆದ್ಯತೆ ನೀಡುವ ಮಹತ್ವದ ಪ್ರಯತ್ನಕ್ಕೆ ಮುದ್ದಂಡ ಹಾಕಿ ಪಂದ್ಯಾವಳಿ ಸಮಿತಿಯವರು ಮುಂದಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಹೆಸರಾಂತ ಹಾಕಿ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿದರು.

ಕೊಡವ ಜನಾಂಗದ ಮೊದಲ ಅಂತಾರರಾಷ್ಟ್ರೀಯ ಹಾಕಿ ಆಟಗಾರ ಮಾಳೆಯಂಡ ಡಿ. ಮುತ್ತಪ್ಪ ವೇದಿಕೆಯಲ್ಲಿದ್ದು ಕೃತಿಗೆ ಶುಭ ಹಾರೈಸಿದರು.

ಇದೇ ಸಂದರ್ಭ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದ ಮೊದಲ ಪಂದ್ಯಾವಳಿಯಲ್ಲಿ 1997 ರಲ್ಲಿ ಮೊದಲ ಗೋಲು, ಮೊದಲ ಹ್ಯಾಟ್ರಿಕ್ ಗಳಿಕೆಯ ಸಾಧನೆ ಮಾಡಿದ್ದ ಅಪ್ಪನೆರವಂಡ ಚುಮ್ಮಿ ದೇವಯ್ಯ ಮತ್ತು ಕೊಡವ ಹಾಕಿ ಪಂದ್ಯಾವಳಿಯ 25 ನೇ ವರ್ಷದ ಸಂದರ್ಭ ಮಡಿಕೇರಿಯಲ್ಲಿ ಬೃಹತ್ ಕಲೆಯ ಮೂಲಕ ಹಾಕಿಯ ಬೆಳ್ಳಿ ಹಬ್ಬದ ಸಂಭ್ರಮವನ್ನು ಪ್ರದರ್ಶಿಸಿದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರನ್ನು ಗೌರವಿಸಲಾಯಿತು.

ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ಅಲೆಮಾಡ ಚಿತ್ರಾ ನಂಜಪ್ಪ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಚೆಟ್ಟೀರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು.

Share this article