ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್ ಶಿಸ್ತು ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಲೇನ್ ನಿಯಮ ಉಲ್ಲಂಘಿಸುವ ವಾಹನಗಳಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಹಾವೇರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲೇನ್ ಶಿಸ್ತು ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಲೇನ್ ನಿಯಮ ಉಲ್ಲಂಘಿಸುವ ವಾಹನಗಳಿಗೆ ಸ್ವಯಂಚಾಲಿತವಾಗಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿದರು.
ಇಲ್ಲಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಾ ಲೇನ್‌ಗಳಲ್ಲಿ ನಿಗದಿಪಡಿಸಿದ ವಾಹನಗಳಷ್ಟೇ ಸಂಚರಿಸಬೇಕು. ಲೇನ್ ಬದಲಿಸುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ವಿಶೇಷವಾಗಿ ಲಾರಿ ಚಾಲಕರು ಲೇನ್ ಬದಲಾಯಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಬಗ್ಗೆ ಹೆದ್ದಾರಿ ಬಳಕೆ ಲಾರಿ ವಾಹನ ಸೇರಿದಂತೆ ಸರಕು ಸಾಗಾಣೆ ವಾಹನಗಳಿಗೆ ಮೊದಲು ಜಾಗೃತಿ ಮೂಡಿಸಲಾಗುವುದು. ಲೇನ್‌ಗಳ ಬಗ್ಗೆ ಮಾಹಿತಿ ಹೊಂದಿರುವ ಸ್ಟಿಕ್ಕರ್‌ಗಳನ್ನು ವಾಹನಗಳಿಗೆ ಅಳವಡಿಸಲಾಗುವುದು. ಒಟ್ಟು ಒಂದು ಲಕ್ಷ ವಾಹನ ಚಾಲಕರಿಗೆ ಜಾಗೃತಿ ಮೂಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ಒಟ್ಟು 110 ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡಸ ಕ್ರಾಸ್, ತೋಟದ ಯಲ್ಲಾಪುರ ಹೀಗೆ ಮೂರು ಕಡೆ 12 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಪರಿಶೀಲನೆ ನಡೆಸಿ ಲೇನ್ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಸಲಾಗುವುದು ಎಂದು ತಿಳಿಸಿದರು.
ಕೇಂದ್ರೀಕೃತ ಪರಿಶೀಲನಾ ವ್ಯವಸ್ಥೆ: ಹಾವೇರಿ ನಗರದ ವಿವಿಧಡೆ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣಿಡಲಾಗುವುದು. ಎಸ್‌ಪಿ ಕಚೇರಿಯಲ್ಲಿ ಕೇಂದ್ರೀಕೃತ ಪರಿಶೀಲನಾ ವ್ಯವಸ್ಥೆ ಕೈಗೊಂಡು ಸಂಚಾರ ನಿಯಮಗಳನ್ನು ಉಲ್ಲಂಘನೆಯನ್ನು ಕಚೇರಿಯಿಂದಲೇ ವೀಕ್ಷಿಸಿ ವಾಹನ ಸವಾರರಿಗೆ ದಂಡ ವಿಧಿಸುವ ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿಗೆ ತರುವುದಾಗಿ ತಿಳಿಸಿದರು.ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಪೈಕಿ ಬೈಕ್ ಅಪಘಾತಗಳೇ ಹೆಚ್ಚಿವೆ. 25ರಿಂದ 30 ವರ್ಷದ ಯುವಕರೇ ಅಪಘಾತಕ್ಕೊಳಗಾಗುತ್ತಿದ್ದಾರೆ. ಈ ಬಗ್ಗೆ ಯಾವ ಸಮಯದಲ್ಲಿ ಹೆಚ್ಚು ಅಪಘಾತ ಸಂಭವಿಸುತ್ತವೆ, ಯಾವ ವಯಸ್ಸಿನವರು, ಯಾವ ವಾಹನ ಹೀಗೆ ಪ್ರತ್ಯೇಕವಾಗಿ ಅಂಕಿ-ಅಂಶಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಕಳೆದ ಒಂದು ವರ್ಷದ ಹಿಂದೆ ಸರ್ವೀಸ್ ರಸ್ತೆಗಳ ದುರಸ್ತಿ ಕಾರಣ ಹೆಚ್ಚು ಅಪಘಾತ ಆಗಿದ್ದವು. ಈ ವರ್ಷ 258 ಕೇಸ್‌ಗಳು ಸಂಭವಿಸಿವೆ ಎಂದು ಹೇಳಿದರು.ತನಿಖೆ: ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಲಾರಿ ದರೋಡೆ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದ್ದು, ಕಳ್ಳರು ಬೈಕ್ ಮೇಲೆ ಬಂದು ಲಾರಿ ನಿಧಾನವಾಗಿ ಚಲಿಸುವಾಗ ಕಳುವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿದು ಬರಲಿದೆ ಎಂದು ಹಾವೇರಿ ಎಸ್‌ಪಿ ಯಶೋದಾ ವಂಟಗೋಡಿ ಹೇಳಿದ್ದಾರೆ.