ಡಾ. ಬಾಬು ಜಗಜೀವನ್ ರಾಮ್ ಸಾಧನೆ, ಚಿಂತನೆಗಳು ಭವಿಷ್ಯಕ್ಕೆ ದಾರಿದೀಪ: ಸಂಸದ ಶ್ರೇಯಸ್ ಪಟೇಲ್

KannadaprabhaNewsNetwork |  
Published : Apr 06, 2025, 01:51 AM IST
5ಎಚ್ಎಸ್ಎನ್15 : ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ್‌ ರಾಮ್‌ ಭಾವಚಿತ್ರಕ್ಕೆ ಅತಿಥಿ ಗಣ್ಯರು ನಮಿಸಿದರು. | Kannada Prabha

ಸಾರಾಂಶ

ರಾಷ್ಟ್ರ ಪ್ರಗತಿ ಪಥದಲ್ಲಿ ಸಾಗುವುದಕ್ಕೆ ಡಾ. ಬಾಬು ಜಗಜೀವನ್ ರಾಮ್ ಅವರು ಬಹುಪಾಲು ಕಾರಣರಾಗಿದ್ದಾರೆ. ಅವರು ಕಾರ್ಮಿಕ ಸಚಿವರಾಗಿ ಜಾರಿಗೆ ತಂದಂತಹ ಕಾರ್ಮಿಕ ನೀತಿಗಳು, ರೈಲ್ವೆ ನಿಯಮಗಳು, ರಕ್ಷಣಾ ಸಚಿವರಾಗಿದ್ದಾಗ ಜಾರಿಗೆ ತಂದಂತಹ ನಿಯಮಗಳು, ಕೃಷಿ ಕ್ರಾಂತಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರ ಸಾಧನೆಯು ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನ್ ರಾಮ್ ಅವರ ಸಾಧನೆ, ಚಿಂತನೆಗಳು ನಮಗೆಲ್ಲರಿಗೂ ದಾರಿದೀಪವಾಗಿದ್ದು, ಮುಂದಿನ ಯುವ ಪೀಳಿಗೆಗೆ ತಿಳಿವಳಿಕೆ ಮೂಡಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾಮ್‌ರವರ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರೈಲ್ವೆ ಇಲಾಖೆ ಸಚಿವರಾಗಿ ಅವರು ನೀಡಿರುವಂಥ ಕೊಡುಗೆ ಅಪಾರವಾಗಿದೆ. ಇಂದಿಗೂ ರೈಲ್ವೆ ನಿಲ್ದಾಣಗಳಲ್ಲಿ ಅವರ ಹೆಸರು ಅಜರಾಮರವಾಗಿದೆ. ಸಮಾಜದಲ್ಲಿರುವ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸುವಂತಹದ್ದು ನಮ್ಮ ಜವಾಬ್ದಾರಿ ಆಗಿದೆ ಎಂದರು.

ಜಿಲ್ಲಾಧಿಕಾರಿ ಸತ್ಯಭಾಮ ಮಾತನಾಡಿ, ಬಿಹಾರ ರಾಜ್ಯದ ಚಂದ್ವಾ ಗ್ರಾಮದಲ್ಲಿ ೧೯೦೮ರಲ್ಲಿ ಜನಿಸಿದ ಬಾಬು ಜಗಜೀವನ್ ರಾಮ್ ಅವರು ಧಮನಿತರ ಹಕ್ಕುಗಳಿಗೆ ಹೋರಾಟ ಮಾಡಿದವರಾಗಿದ್ದಾರೆ. ನಾವು ಅಂಧಕಾರದಲ್ಲಿದ್ದಾಗ ನಮ್ಮನ್ನು ಬೆಳಗಿದ ಶ್ರೇಷ್ಠ ಧೃವತಾರೆಯಾಗಿದ್ದಾರೆ. ಇವರು ಮಾಜಿ ಉಪ ಮುಖ್ಯಮಂತ್ರಿಗಳಾಗಿ, ಕಾರ್ಮಿಕ ಸಚಿವರಾಗಿ ನೀಡಿರುವ ಕೊಡುಗೆ ಅಪಾರ. ಹಾಗಾಗಿ ಇವರ ತತ್ವಾದರ್ಶಗಳನ್ನು ಪಾಲಿಸಿ ಹೆಚ್ಚು ಹೆಚ್ಚು ಪ್ರಗತಿ ಸಾಧಿಸೋಣ ಎಂದು ಕರೆ ನೀಡಿದರು.

ಜಿಪಂ ಸಿಇಒ ಬಿ.ಆರ್ ಪೂರ್ಣಿಮಾ ಮಾತನಾಡಿ, ಸಣ್ಣ ಹಳ್ಳಿಯಲ್ಲಿ ಹುಟ್ಟಿ, ರಾಷ್ಟ್ರದ ಅತ್ಯುನ್ನತ ಪದವಿಯನ್ನು ಅಲಂಕರಿಸಿದ ಮಹಾನ್ ವ್ಯಕ್ತಿ ಡಾ. ಬಾಬು ಜಗಜೀವನ್ ರಾಮ್ ಅವರಾಗಿದ್ದಾರೆ. ಇವರು ರಕ್ಷಣಾ ಇಲಾಖೆ, ಆಹಾರ ಇಲಾಖೆ, ಕೃಷಿ ಇಲಾಖೆ ಹೀಗೆ ಹಲವಾರು ಇಲಾಖೆಯ ಖಾತೆಗಳನ್ನು ನಿರ್ವಹಿಸಿ ಆಡಳಿತದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರಾಗಿದ್ದಾರೆ ಎಂದು ತಿಳಿಸಿದರು.

ಮೈಸೂರಿನ ವಿಚಾರವಾದಿ ಮತ್ತು ಹಿರಿಯ ಚರ್ಮ ರೋಗ ತಜ್ಞ ಡಾ. ಕುಮಾರ್ ಭೂತಯ್ಯ ಮಾತನಾಡಿ, ರಾಷ್ಟ್ರ ಪ್ರಗತಿ ಪಥದಲ್ಲಿ ಸಾಗುವುದಕ್ಕೆ ಡಾ. ಬಾಬು ಜಗಜೀವನ್ ರಾಮ್ ಅವರು ಬಹುಪಾಲು ಕಾರಣರಾಗಿದ್ದಾರೆ. ಅವರು ಕಾರ್ಮಿಕ ಸಚಿವರಾಗಿ ಜಾರಿಗೆ ತಂದಂತಹ ಕಾರ್ಮಿಕ ನೀತಿಗಳು, ರೈಲ್ವೆ ನಿಯಮಗಳು, ರಕ್ಷಣಾ ಸಚಿವರಾಗಿದ್ದಾಗ ಜಾರಿಗೆ ತಂದಂತಹ ನಿಯಮಗಳು, ಕೃಷಿ ಕ್ರಾಂತಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇವರ ಸಾಧನೆಯು ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ ಕೃಷ್ಣೇಗೌಡ, ಹಾಸನ ನಗರ ಸಭೆಯ ಅಧ್ಯಕ್ಷರಾದ ಚಂದ್ರೇಗೌಡ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ದೂದ್ ಫೀರ್ ಹಾಗೂ ಸಮುದಾಯದ ಮುಖಂಡರಾದ ಶಂಕರ್‌ರಾಜ್, ಸಂದೇಶ್,ವಿಜಯ ಕುಮಾರ್,ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ