ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ರಾಷ್ಟ್ರಾಭಿಮಾನ ಹೆಚ್ಚಿದೆ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork | Published : Apr 6, 2025 1:51 AM

ಸಾರಾಂಶ

ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾದ ಬಳಿಕ ಧರ್ಮ, ಸಂಸ್ಕೃತಿ, ದೇಶದ ಏಕತೆ, ಅಖಂಡತೆ ಬಗ್ಗೆ ರಾಷ್ಟ್ರಾಭಿಮಾನ ಮೂಡಿರುವುದನ್ನು ಕಾಣಬಹುದು

ಮುಂಡಗೋಡ: ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾದ ಬಳಿಕ ಧರ್ಮ, ಸಂಸ್ಕೃತಿ, ದೇಶದ ಏಕತೆ, ಅಖಂಡತೆ ಬಗ್ಗೆ ರಾಷ್ಟ್ರಾಭಿಮಾನ ಮೂಡಿರುವುದನ್ನು ಕಾಣಬಹುದು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶುಕ್ರವಾರ ರಾತ್ರಿ ಇಲ್ಲಿಯ ಬಸವಣ್ಣ ದೇವಾಲಯದ ಬಯಲು ರಂಗಮಂದಿರಲ್ಲಿ ಬಸವಣ್ಣ, ವೀರಭದ್ರೇಶ್ವರ ದೇವರ ನೂತನ ರಥ ಲೋಕಾರ್ಪಣೆ ರಥೋತ್ಸವ, ಲಕ್ಷ ದೀಪೋತ್ಸವದ ಅಂಗವಾಗಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಹಿರಿಯರು ಪರಕೀಯರ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಸನಾತನ ಧರ್ಮದ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಅದು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ದೊರಕುವ ಅವಕಾಶ ನಮ್ಮ ಮುಂದಿದೆ. ಇದಕ್ಕೆ ಕಾರಣೀಕರ್ತರಾದ ನಮ್ಮ ಹಿರಿಯರು ತ್ಯಾಗ, ಬಲಿದಾನದಿಂದ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಪಾಶ್ಚಿಮಾತ್ಯದ ಸಂಸ್ಕೃತಿಯ ಪರಿಣಾಮ ಬ್ರಿಟಿಷರ ಶಿಕ್ಷಣ ಪದ್ಧತಿಯ ಕಾರಣದಿಂದಾಗಿ ಸ್ವತಂತ್ರ ಬಂದು ಏಳು ದಶಕ ಕಳೆದರೂ ನಮಗೆ ನಾವ್ಯಾರು ಎಂಬ ಅರಿವು ಬಂದಿರಲಿಲ್ಲ ಎಂದರು.

ಕಾಶಿಯಂತಹ ಪವಿತ್ರ ಧರ್ಮ ಕ್ಷೇತ್ರ ಇಂದು ಅದ್ಭುತವಾಗಿ ಪುನರ್ ನಿರ್ಮಾಣವಾಗಿದೆ. ಗೌರವ, ಭಾವನೆಯ ಸಂಕೇತವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಯಿತು. ದೇಶದ ಉದ್ದಗಲ ಶ್ರದ್ಧಾ, ಭಕ್ತಿಯ ಕೇಂದ್ರಗಳಿಗೆ ಪ್ರಾಮುಖ್ಯತೆ ಸಿಗುತ್ತಿದೆ ಎಂದರು.

ಸಂವಿಧಾನದಲ್ಲಿಯೇ ನಮ್ಮ ಪರಂಪರೆಯ ರಾಮ ಸೇರಿದಂತೆ ಅನೇಕರ ಚಿತ್ರಗಳನ್ನು ಅಳವಡಿಸಲಾಗಿದೆ. ಭಾರತೀಯ ಸನಾತನ ಸಂಸ್ಕೃತಿ ರಕ್ಷಕರಾಗಿ ಅಂಬೇಡ್ಕರ್ ಮಹತ್ವದ ಸಂವಿಧಾನದ ಕೊಡುಗೆ ನೀಡಿದ್ದಾರೆ. ವ್ಯಕ್ತಿಗತ ಕುಟುಂಬವಾಗಿ ರಾಷ್ಟ್ರೀಯತೆಯನ್ನು ನಾವು ಪ್ರಕಟಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಯಾರನ್ನು ದ್ವೇಷಿಸಿ, ಹಿಂಸಿಸುವುದು ಗೊತ್ತಿಲ್ಲ. ಎಲ್ಲರನ್ನು ಪ್ರೀತಿಸಿ, ಗೌರವಿಸಿ ಸರ್ವೇ ಜನಃ ಸುಖಿನೋ ಭವಂತು ಎಂಬ ತತ್ವ ನಮ್ಮದು ಎಂದರು.

ಪ್ರಜಾಪ್ರಭುತ್ವ ಹುಟ್ಟಿದ್ದು ೧೨ನೇ ಶತಮಾನದಲ್ಲಿ. ಅದು ಕೂಡ ನಮ್ಮ ಕರ್ನಾಟಕದಲ್ಲಿ. ವಿಶ್ವ ನಾಯಕ ಬಸವಣ್ಣ ಕಟ್ಟಿ ಕೊಟ್ಟಿರುವ ವಚನಗಳು ನಮಗೆ ದೊಡ್ಡ ಕೊಡುಗೆ. ಈ ಬಗ್ಗೆ ಪ್ರಧಾನಿ ಸದಾ ಉಲ್ಲೇಖಿಸುತ್ತಾರೆ. ದೇಶದ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಇರುವ ಪ್ರತಿಯೊಬ್ಬರು ಬಸವಣ್ಣನವರನ್ನು ಉಲ್ಲೇಖಿಸಬೇಕು. ನಮಗೆ ಪ್ರಭಾವಿಯಾಗುವಂತಹ ಪರಂಪರೆಯನ್ನು ಬಸವಣ್ಣನವರು ನೀಡಿದ್ದಾರೆ ಎಂದು ಬಣ್ಣಿಸಿದರು.

ಜಿಲ್ಲೆಯ ಉಳವಿಯಿಂದಲೇ ವಚನ ಸಾಹಿತ್ಯ ಉಳಿದುಕೊಂಡಿದೆ ಎಂಬ ಹೆಮ್ಮೆ ನಮಗಿದೆ. ಸದಾ ಕಾಲ ಬಸವಣ್ಣನವರನ್ನು ಸ್ಮರಿಸಿಕೊಳ್ಳಬೇಕು ಎಂದರು.

ಜಗತ್ತಿನಲ್ಲಿ ಭಾರತಕ್ಕೆ ಗೌರವವಿದೆ. ಭಾರತ ಹೇಳಿದಂತೆ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಯೋಗ, ಆಯುರ್ವೇದ, ಐಟಿ-ಬಿ.ಟಿ ಸೇರಿ ಹತ್ತಾರು ಕಾರಣವಿರಬಹುದು. ಭಾರತದ ಜ್ಞಾನ ಸಂಪತ್ತಿನ ದಾಹವನ್ನು ಜಗತ್ತು ಬಯಸುತ್ತಿದೆ. ಬಸವಣ್ಣನವರು ನೀಡಿದ ಜ್ಞಾನ ಸಂಪತ್ತನ್ನು ನಾವು ಅರ್ಥೈಸಿಕೊಳ್ಳಬೇಕು ಎಂದರು.

ಹಾವೇರಿಯ ಅಗಡಿ ಅಕ್ಕಿಮಠದ ಡಾ.ಗುರುಲಿಂಗ ಶ್ರೀ ಪ್ರವಚನ ನೀಡಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಇದ್ದರು.

Share this article