ದೇಸಿ ಸಂಸ್ಕೃತಿ ಬಲಗೊಳ್ಳಲು ಯುವ ಸಮುದಾಯದ ಹೊಣೆಗಾರಿಕೆ: ಡಾ. ಕೆ.ವಿ. ಪ್ರಜ್ಞಾ

KannadaprabhaNewsNetwork | Published : Apr 6, 2025 1:51 AM

ಸಾರಾಂಶ

ಜಾನಪದಕ್ಕೆ ಮೂಲ ಸಂಸ್ಕೃತಿಯ ಗಟ್ಟಿಬೇರುಗಳಿವೆ. ಅದೆಷ್ಟೇ ಆಧುನಿಕತೆಯ ಭರಾಟೆಗಳ ನಡುವೆಯೂ ಸಂಸ್ಕೃತಿಯ ಅನನ್ಯತೆಗೆ ಧಕ್ಕೆಯಾಗದೆ ಉಳಿದುಕೊಂಡಿದೆ ಎಂದು ನಗರದ ರೇಡಿಯೋಪಾರ್ಕ್ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ವಿ. ಪ್ರಜ್ಞಾ ಹೇಳಿದರು.

ಬಳ್ಳಾರಿ: ದೇಸಿ ಸಂಸ್ಕೃತಿಯ ಮೂಲ ಸೆಲೆಯಾಗಿರುವ ಜಾನಪದ ಈ ನೆಲದ ಅನನ್ಯತೆಯ ಪ್ರತೀಕವಾಗಿದ್ದು, ಸಾಂಸ್ಕೃತಿಕ ಶ್ರೀಮಂತಿಕೆಯ ಹೊತ್ತ ಜಾನಪದವನ್ನು ಜತನದಿಂದ ಕಾಪಾಡಿಕೊಳ್ಳಬೇಕಿದೆ ಎಂದು ನಗರದ ರೇಡಿಯೋಪಾರ್ಕ್ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ವಿ. ಪ್ರಜ್ಞಾ ಹೇಳಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಸಹಯೋಗದಲ್ಲಿ ಜರುಗಿದ "ಜಾನಪದ ಉತ್ಸವ -2025 " ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನಪದಕ್ಕೆ ಮೂಲ ಸಂಸ್ಕೃತಿಯ ಗಟ್ಟಿಬೇರುಗಳಿವೆ. ಅದೆಷ್ಟೇ ಆಧುನಿಕತೆಯ ಭರಾಟೆಗಳ ನಡುವೆಯೂ ಸಂಸ್ಕೃತಿಯ ಅನನ್ಯತೆಗೆ ಧಕ್ಕೆಯಾಗದೆ ಉಳಿದುಕೊಂಡಿದೆ. ಪಾಶ್ಚಾತ್ಯ ಸಂಸ್ಕೃತಿಯ ದಾಳಿಗಳ ನಡುವೆಯೂ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಿ. ಕೊಟ್ರಪ್ಪ ಮಾತನಾಡಿ, ಜಾನಪದ ಎಂದರೆ ಸಾಹಿತ್ಯ ಪ್ರಕಾರವಷ್ಟೇ ಅಲ್ಲ; ಈ ನೆಲದ ಉಡುಗೆ ತೊಡುಗೆಗಳು, ಹಬ್ಬ ಹರಿದಿನಗಳ ಆಚರಣೆಗಳು, ಆಹಾರ ಪದ್ಧತಿ, ಹೀಗೆ ನಾನಾ ನೆಲೆಯಲ್ಲಿ ಜಾನಪದ ಸಂಸ್ಕೃತಿ ಹುದುಗಿದೆ. ಮನೆಯ ಮುಂದೆ ರಂಗೋಲಿ ಹಾಕುವ ಮೂಲಕ ನಿತ್ಯ ನಾವು ಜಾನಪದ ಆಚರಣೆಗೆ ಚಾಲನೆ ನೀಡುತ್ತೇವೆ. ಜನಪದ ಸಂಸ್ಕೃತಿ ಉಳಿಯಬೇಕು ಎಂಬ ಆಶಯದ ನೆಲೆಯಲ್ಲಿಯೇ ಇಂಥ ಉತ್ಸವ ಆಯೋಜಿಸಲಾಗುತ್ತಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಚಾಲಕ ಹಾಗೂ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮರಿಗಾದಿಲಿಂಗಪ್ಪ ಅವರು, ಜಾನಪದ ಸಂಸ್ಕೃತಿಯ ಹಿನ್ನೆಲೆ, ಮರೆಯಾಗುತ್ತಿರುವ ವಿವಿಧ ದೇಸೀಯ ವಿವಿಧ ಆಚರಣೆಗಳ ಕುರಿತು ವಿವರಿಸಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಕ್ರೀಡಾ ಸಂಚಾಲಕ ಡಾ. ಕೆ. ಮಲ್ಲಿಕಾರ್ಜುನ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಬಿ.ಎಂ. ಸ್ನೇಹಾ, ಪತ್ರಾಂಕಿತ ವ್ಯವಸ್ಥಾಪಕಿ ಬಿ. ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಸಮೀರಾ ಹಾಗೂ ಬಿಂದು ಕಾರ್ಯಕ್ರಮ ನಿರ್ವಹಿಸಿದರು. ಶಾಲೆಯ ಆವರಣದಲ್ಲಿ ಜಾನಪದ ಸೊಗಡು ಪ್ರತಿನಿಧಿಸುವ ಜೋಳ, ಭತ್ತ ಹಾಗೂ ಸಜ್ಜೆಯ ರಾಶಿಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಗಮನ ಸೆಳೆದ ಮೆರವಣಿಗೆ: ಜಾನಪದ ಉತ್ಸವ ಹಿನ್ನೆಲೆಯಲ್ಲಿ ದೇಸಿ ಸಂಸ್ಕೃತಿ ಬಿಂಬಿಸುವ ಎತ್ತುಬಂಡಿಗಳ ಮೆರವಣಿಗೆ ನಡೆಯಿತು. ಸಿಂಗಾರಗೊಂಡಿದ್ದ ಎತ್ತುಬಂಡಿಯಲ್ಲಿ ವಿದ್ಯಾರ್ಥಿನಿಯರು ದೇಸಿಯ ಪೋಷಾಕು ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಕಾಲೇಜಿನ ವಿದ್ಯಾರ್ಥಿಗಳು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಜಾನಪದ ಗೀತೆಗಳ ಮೂಲಕ ರೇಡಿಯೋಪಾರ್ಕ್ ನ ಮುಖ್ಯಬೀದಿಯಲ್ಲಿ ಸಾಗಿದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ವೀರಗಾಸೆ ಪ್ರದರ್ಶನ, ಡೊಳ್ಳುಕುಣಿತ ಪ್ರಮುಖ ಆಕರ್ಷಣೆಯಾಗಿತ್ತು. ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ಬಿಸಿಲು ಲೆಕ್ಕಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡು ಜಾನಪದ ಸಂಸ್ಕೃತಿಯನ್ನು ಸಂಭ್ರಮಿಸಿದರು. ಕಾಲೇಜು ಆವರಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Share this article