ಕನ್ನಡಪ್ರಭ ವಾರ್ತೆ ಮೈಸೂರುಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಜೀತ ಪದ್ಧತಿ ನಿರ್ಮೂಲನೆ, ಮಲ ಹೊರುವ ಪದ್ದತಿ ನಿಷೇಧ ಮಾಡಿದ್ದಲ್ಲದೆ, ಉಳುವವನಿಗೆ ಭೂಮಿ ಹಂಚಿದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವತ್ತು ವರ್ಷಗಳ ನಿರಂತರ ಬೇಡಿಕೆ ಈಡೇರಿಸಿ ಒಳ ಮೀಸಲಾತಿ ಜಾರಿಗೆ ತಂದಿರುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಸಂಶೋಧನೆ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಆಯೋಜಿಸಿದ್ದ ಭಾರತದ ರಾಜಕಾರಣದಲ್ಲಿ ಬಾಬೂ ಜಗಜೀವನ್ ರಾಮ್ ಕೊಡುಗೆ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಮೂವತ್ತು ವರ್ಷಗಳ ಕಾಲದ ನಿರಂತರ ಹೋರಾಟದ ಫಲವಾಗಿ ಪ. ಜಾತಿಗಳಿಗೆ ಒಳ ಮೀಸಲಾತಿ ದೊರೆತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗಿದೆ ಎಂದು ಅವರು ಹೇಳಿದರು.ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ನೀಡಿ ಎಲ್ಲಾ ವರ್ಗಗಳಿಗೆ ಸಮಾನತೆ ತಂದು ಕೊಟ್ಟರು. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮೀಸಲಾತಿ ನೀಡಿದ್ದರಿಂದ ಧ್ವನಿ ಇಲ್ಲದವರಿಗೆ ಶಕ್ತಿ ದೊರಕಿತು. ಕಾಂಗ್ರೆಸ್ ಸರ್ಕಾರದ ಬದ್ಧತೆ, ಪ್ರಾಮಾಣಿಕತೆ, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡು ಜಾರಿಗೆ ತಂದರು. ಇದೊಂದು ಐತಿಹಾಸಿಕ ತೀರ್ಮಾನ ಆಗಿದ್ದರಿಂದ ಇತಿಹಾಸದ ಪುಟದಲ್ಲಿ ಸೇರಿದೆ ಎಂದು ಸಂತೋಷ ವ್ಯಕ್ತಪಡಿಸಿದರು.ಮುಂದಿನ ಯುವ ಸಮಾಜ ಪ.ಜಾತಿಯವರಿಗೆ ಒಳ ಮೀಸಲಾತಿ ನೀಡಿದ್ದು ಯಾರು ಅಂದರೆ ಸಿದ್ದರಾಮಯ್ಯ ಅವರನ್ನು ನೆನಪಿಸಿಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ಮಾದಿಗ ಸಮಾಜ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮಾನತೆ ಹೊಂದಲು ಒಳ ಮೀಸಲಾತಿ ಪ್ರಯೋಜನ ಪಡೆಯಬೇಕು ಎಂದು ಅವರು ಕಿವಿಮಾತು ಹೇಳಿದರು. ಒಳ ಮೀಸಲಾತಿಯಿಂದ ಮಾದಿಗ ಮತ್ತಷ್ಟು ಆರ್ಥಿಕ ಶಕ್ತಿ ಹೊಂದಲು ದಾರಿಯಾಗಲಿದೆ. ಸರ್ಕಾರಿ ಕೆಲಸದಲ್ಲಿ ಮುಂಬಡ್ತಿ ಸೇರಿ ಅನೇಕ ಪ್ರಯೋಜನವಾಗಿದೆ. ಭಾರತಕ್ಕೆ ಬಾಬೂಜಿ ನೀಡಿದ ಕೊಡುಗೆ ಅಪಾರವಾಗಿದೆ. ಒಬ್ಬ ವ್ಯಕ್ತಿ ಶಕ್ತಿಯಾಗಬೇಕಾದರೆ ಚೈತನ್ಯ ಇರಬೇಕು. ಅದೇ ರೀತಿ ಅದನ್ನು ಬೆಳೆಸಿ ಶಕ್ತಿಶಾಲಿಯನ್ನಾಗಿ ಮಾಡಿ ಗುರಿ ಮುಟ್ಟಿದರು. ಅಂಬೇಡ್ಕರ್, ಬಾಬೂಜಿ, ನೆಹರು ಅವರನ್ನು ತೆಗೆದುಕೊಂಡರೆ ಸಾಧನೆಗಳು ಕಣ್ಣಿನ ಮುಂದೆ ಬರುತ್ತವೆ ಎಂದು ಅವರು ಹೇಳಿದರು.ಬಾಬೂಜಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ತಂದೆ ಕಳೆದುಕೊಳ್ಳುತ್ತಾರೆ. ನಂತರ ಗಾಂಧಿ ಅವರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯ ಪೂರ್ವದ ಆಡಳಿತದಲ್ಲಿ ಅಂಚೆ ವ್ಯವಸ್ಥೆ ತಂದು ಸಂಪರ್ಕ ತಂದರು. ರೈಲ್ವೆ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾಗಿ ಅವರು ಹೇಳಿದರು.ಆಹಾರದ ಕೊರತೆ ಬರಲಿಲ್ಲ. ಹೊರದೇಶದಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ, ಇಂದು ವಿದೇಶಗಳಿಗೆ ಆಹಾರ ರಫ್ತು ಮಾಡುವಷ್ಟು ಶಕ್ತಿಯಾಗಿ ಬೆಳೆಯಲು ಬಾಬೂಜಿ ಚಿಂತನೆಯ ಫಲವಾಗಿದೆ ಎಂದು ನುಡಿದರು.ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಪ್ರೊ.ಕೆ. ಸದಾಶಿವ ಮಾತನಾಡಿ, ಇಂದು ದೇಶಕ್ಕೆ ಪೀಠ ಸ್ಥಾಪನೆಯಾಗಿ ಇಪ್ಪತ್ತೈದು ವರ್ಷಗಳಾಗಿದೆ. ಎಂಟು ಪುಸ್ತಕಗಳು ಪ್ರಕಟವಾಗಿದ್ದು, ಏಳು ಪುಸ್ತಕಗಳು ಪ್ರಕಟಕ್ಕೆ ತಯಾರಾಗಿವೆ. ಜಗಜೀವನ್ ರಾಮ್ ಅವರ ಸಾಹಿತ್ಯ ರಚನೆ ಅವರ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಕೆಲಸ ಮಾಡಲಾಗುತ್ತಿದೆ. ಪಿ.ಎಚ್.ಡಿ ಗೈಡ್ ಶಿಪ್ ಕೊಡುವಂತೆ ಪ್ರಸ್ತಾಪಿಸಲಾಗಿದೆ ಎಂದರು.ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಾಗರಾಜು ಮಾತನಾಡಿದರು. ಬಾಬೂ ಜಗಜೀವನರಾಮ್- ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜನೀತಿಜ್ಞ ಕುರಿತು ಸಂದರ್ಶಕ ಪ್ರಾಧ್ಯಾಪಕ ಎಚ್.ಆರ್. ಭೀಮಾಶಂಕರ್, ಸ್ವಾತಂತ್ರ್ಯೋತ್ಸವ ಭಾರತದ ರಾಜಕಾರಣ ಮತ್ತು ಬಾಬೂ ಜಗಜೀವನರಾಮ್ ಕುರಿತು ಸಂಶೋಧನ ಅಧಿಕಾರಿ ಡಾ.ಎಂ. ಶ್ರೀನಿವಾಸಮೂರ್ತಿ, ಕಾಂಗ್ರೆಸ್ಸೇತರ ರಾಜಕಾರಣದ ರೂವಾರಿ ಬಾಬೂ ಜಗಜೀವನರಾಮ್ ಕುರಿತು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ಐಶ್ವರ್ಯ ವಿಷಯ ಮಂಡಿಸಿದದರು.