ಕನ್ನಡಪ್ರಭ ವಾರ್ತೆ ನಾಗಮಂಗಲ
ನಮ್ಮ ಅಂತರಂಗದ ಕೊಳೆಯನ್ನು ಕಳೆಯಲು ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಮನುಷ್ಯ ರೂಪದಲ್ಲಿ ಅವತರಿಸಿ ಬಂದು ಇಡೀ ಸಮಾಜವನ್ನು ಉದ್ಧರಿಸಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನು ಪಡೆದಿರುವ ನಾವೆಲ್ಲರೂ ಅರಿವಿನ ಮಹಾ ಮನೆಯತ್ತ ಮುನ್ನಡೆಯಬೇಕಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ 80ನೇ ಜಯಂತ್ಯುತ್ಸವ ಮತ್ತು 12ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಸಂತ ಭಕ್ತ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಸಹ ನಮ್ಮೆಲ್ಲರ ಹೃದಯದಲ್ಲಿ ಅವರು ಚೈತನ್ಯರೂಪಿಯಾಗಿ ನೆಲೆಸಿದ್ದಾರೆ ಎಂದರು.
ಅಂತರಂಗದಲ್ಲಿರುವ ಅಜ್ಞಾನವನ್ನು ಕಳೆದು ಜ್ಞಾನವನ್ನು ಪಡೆದುಕೊಳ್ಳಲು ಮತ್ತು ಹುಟ್ಟಿದ ಮನುಷ್ಯನಿಗೆ ಮುಕ್ತಿಯ ದಾರಿ ತೋರಿಸಲು ನಮಗೆ ಗುರುಗಳು ಬೇಕು. ಅಂತಹ ಗುರುವನ್ನು ಪಡೆದಿರುವ ನಾವು ಭಾಗ್ಯಶಾಲಿಗಳು. ಇಂದು ಶ್ರೀ ಆದಿಚುಂಚನಗಿರಿ ಮಠವು ಬೃಹತ್ತಾಗಿ ಬೆಳೆದಿದೆ ಎನ್ನುವುದು ಸತ್ಯ. ಅದಕ್ಕೆ ಕಾರಣರಾದವರು ಶ್ರೀಮಠದ ಸದ್ಭಕ್ತರು ಹಾಗೂ ಗುರುಗಳ ಆಶೀರ್ವಾದದ ಶ್ರೀರಕ್ಷೆ ಕಾರಣವೇ ಹೊರತು ಬೇರೇನೂ ಅಲ್ಲ ಎಂದರು.ಹೆಚ್ಚು ಮಾತನಾಡಿದರೆ ಬೇರೆಯವರಿಗೆ ನೋವಾಗಬಹುದೆಂಬ ಕಾರಣಕ್ಕೆ ಭೈರವೈಕ್ಯಶ್ರೀಗಳು ನಗುವಿನೊಂದಿಗೆ ಮಿತವಾಗಿ ಮಾತನಾಡುತ್ತಿದ್ದರು. ಕೇವಲ ಒಕ್ಕಲಿಗ ಸಮುದಾಯಕ್ಕಷ್ಟೇ ಅಲ್ಲದೇ, ಒಟ್ಟು ಸಮಾಜದ ಸಹಾಯಕ್ಕೆ ನಿಂತಿದ್ದರು. ಶ್ರೀಗಳ ದಿವ್ಯ ಶಕ್ತಿಯು ಶ್ರೀಮಠದ ಭಕ್ತರನ್ನು ಮತ್ತು ದೇಶವನ್ನು ಕಾಪಾಡುವ ಜೊತೆಗೆ ನಮ್ಮೆಲ್ಲರನ್ನು ಕೈಹಿಡಿದು ಮುನ್ನಡೆಸುತ್ತಿದೆ ಎಂದರು.
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಹೊಯ್ಸಳರು ಚಾಲುಕ್ಯರು ಈ ನಾಡನ್ನು ಆಳಿ ಅವರ ಗುರುತನ್ನು ಬಿಟ್ಟು ಹೋಗಿರುವಂತೆ ಭೈರವೈಕ್ಯ ಡಾ. ಬಾಲಗಂಗಾಧರನಾಥ ಶ್ರೀಗಳು ಈ ನಾಡಿಗೆ ಅದ್ವಿತೀಯ ಕೊಡುಗೆ ನೀಡಿ ತಮ್ಮ ಅಚ್ಚಳಿಯದ ಹೆಜ್ಜೆ ಗುರುತನ್ನು ಉಳಿಸಿ ಹೋಗಿದ್ದಾರೆ ಎಂದರು.ಬಾಲಗಂಗಾಧರನಾಥ ಶ್ರೀಗಳಿದ್ದಾಗ ಶ್ರೀಮಠದ ಶಿಕ್ಷಣ ಸಂಸ್ಥೆಗಳಲ್ಲಿ 75ಸಾವಿರ ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಈಗ ಆ ಸಂಖ್ಯೆ 1.63 ಲಕ್ಷಕ್ಕೇರಿದೆ ಎಂದರೆ ಭೈರವೈಕ್ಯಶ್ರೀಗಳು ಇಂದಿನ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಶ್ರೀಗಳ ಜೊತೆಯಲ್ಲಿಯೇ ಇದ್ದಾರೆ ಎಂಬ ನಂಬಿಕೆ ನನ್ನದು ಎಂದರು.
ಇಡೀ ರಾಜ್ಯದಲ್ಲಿ ಬಸವಣ್ಣನವರ ಆಶಯದಂತೆ ನಡೆಯುತ್ತಿರುವ, ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಮಠಗಳಲ್ಲಿ ಶ್ರೀ ಆದಿಚುಂಚನಗಿರಿ ಮಠ ಪ್ರಮುಖ ಸ್ಥಾನದಲ್ಲಿರುವುದು ಅತ್ಯಂತ ಶ್ಲಾಘನೀಯ. ಭೈರವೈಕ್ಯಶ್ರೀಗಳ ಅಣತಿಯಂತೆ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಅವರ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ಬಹಳ ಸಂತಸವಾಗಿದೆ ಎಂದರು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರು ಪ್ರಾಸ್ತಾವಿಕ ನುಡಿಯೊಂದಿಗೆ ಶ್ರೀಗಳು ಮತ್ತು ಗಣ್ಯರನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಗಣ್ಯರು ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಸಲ್ಲಿಸಿರುವ ಸಮಾಜಮುಖಿ ಸೇವೆಯನ್ನು ಸ್ಮರಿಸಿದರು.
ವಿಶೇಷ ಪೂಜೆ:ಭೈರವೈಕ್ಯ ಶ್ರೀಗಳ ಜಯಂತ್ಯುತ್ಸವ ಪ್ರಯುಕ್ತ ಡಾ. ಬಾಲಗಂಗಾಧರನಾಥಶ್ರೀಗಳ ಮಹಾಗದ್ದುಗೆ ಮತ್ತು ಪುತ್ಥಳಿಯನ್ನು ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಿರ್ಮಲಾನಂದನಾಥಶ್ರೀಗಳು ಕೇಕ್ ಕತ್ತರಿಸಿದರು.ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮನಾಥಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಡಾ. ಧರ್ಮಪಾಲನಾಥಸ್ವಾಮೀಜಿ, ಗುಣನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಅನ್ನದಾನೇಶ್ವರನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕ ಸುರೇಶಗೌಡ, ಪತ್ರಿಕೋದ್ಯಮಿ ಟಿ. ವೆಂಕಟೇಶ್, ಅಮರಾನಾಥಗೌಡ, ಅಮೇರಿಕ ಒಕ್ಕಲಿಗರ ಪರಿಷತ್ ಅಧ್ಯಕ್ಷ ಧನಂಜಯ ಸೇರಿದಂತೆ ಸಹಸ್ರಾರು ಮಂದಿ ಭಕ್ತರು ಇದ್ದರು.