ಕೊಪ್ಪಳ: ಸಮುದ್ರದ ಆಳಕ್ಕೆ ಇಳಿದಂತೆಲ್ಲ ಬೆಲೆಬಾಳುವ ಮುತ್ತು-ರತ್ನ ಸಿಗುವಂತೆ, ಡಾ.ಎಸ್.ಎಲ್. ಭೈರಪ್ಪ ಕಾದಂಬರಿಗಳನ್ನು ಆಳವಾಗಿ ಓದಿದಾಗ ಮಾತ್ರ ಅವುಗಳ ಸತ್ವ ಅರಿವಾಗುತ್ತದೆ. ಭೈರಪ್ಪ ಕನ್ನಡ ಸಾಹಿತಿಗಳಲ್ಲೇ ಮೇರು ಸ್ಥಾನದಲ್ಲಿದ್ದಾರೆ ಎಂದು ಗಿಣಿಗೇರಿಯ ಶ್ರೀಮದ್ ಆನೆಗೊಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀಕಂಠ ಮಹಾಸ್ವಾಮಿಗಳು ಹೇಳಿದರು.
ಭೈರಪ್ಪ ಪ್ರತಿಯೊಂದು ಕಾದಂಬರಿಯಲ್ಲೂ ಒಂದೊಂದು ವಿಶೇಷ ತತ್ವ ಅಡಗಿದೆ. ಕೃತಿ ಓದುತ್ತಾ ಹೋದಂತೆ ಮತ್ತಷ್ಟು ಕುತೂಹಲ ಕೆರಳಿಸುತ್ತವೆ. ವಿದೇಶ ಪ್ರವಾಸದ ವೇಳೆ ಅಭಿಮಾನಿಯೊಬ್ಬರು ನೆನಪಿನ ಕಾಣಿಕೆಯಾಗಿ ನೀಡಿದ ಜಿಂಕೆಯ ಚಿತ್ರದಿಂದ ಪ್ರೇರಣೆ ಪಡೆದು ಉತ್ತರಕಾಂಡ ಕಾದಂಬರಿ ರಚಿಸಿದರು. ಅವರ ಪ್ರತಿಯೊಂದು ಕೃತಿ ಗಾಂಭೀರ್ಯ ಹೊಂದಿದ್ದು, ಪ್ರತಿಯೊಬ್ಬರೂ ಭೈರಪ್ಪ ಕಾದಂಬರಿ ಓದಬೇಕು ಎಂದರು.
ಭೈರಪ್ಪ ಸಾಹಿತ್ಯ ಗಂಭೀರವಾದದ್ದು: ಭೈರಪ್ಪ ಆತ್ಮಕಥನ ಭಿತ್ತಿ ಕೃತಿ ಕುರಿತು ಖ್ಯಾತ ವಾಗ್ಮಿ ಹಾಗೂ ಹಾಸ್ಯಭಾಷಣಕಾರ ಗಂಗಾವತಿ ಪ್ರಾಣೇಶ ವಿಶೇಷ ಉಪನ್ಯಾಸ ನೀಡಿದರು. ಭೈರಪ್ಪ ಹಾಗೂ ಬೀಚಿ ಸಾಹಿತ್ಯ ಆಳವಾಗಿ ಅಧ್ಯಯನ ಮಾಡಿದ್ದೇನೆ. ಇಬ್ಬರ ಬರಹಗಳಲ್ಲೂ ಸಾಕಷ್ಟು ವ್ಯತ್ಯಾಸವಿದ್ದು, ಭೈರಪ್ಪ ಸಾಹಿತ್ಯ ಅತ್ಯಂತ ಗಂಭೀರವಾದದ್ದು. ಅವರ ಕೃತಿಗಳ ಕುರಿತು ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ. ಅಷ್ಟೊಂದು ಮೇರು ಸಾಹಿತಿ ಎಂದು ಹೇಳಿದರು.ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶರಣಬಸಪ್ಪ ಬಿಳಿಯೆಲಿ ಮಾತನಾಡಿ, ಭೈರಪ್ಪ ಕೇವಲ ಈ ಕಾಲದ ಸಾಹಿತಿಯಲ್ಲ, ಯುಗದ ಸಾಹಿತಿ. ಅವರ ಸಾಹಿತ್ಯ ಸಾಂಸ್ಕೃತಿಕ ಮೌಲ್ಯ ಎತ್ತಿ ಹಿಡಿಯುತ್ತದೆ. ಎರಡು ಶತಮಾನಗಳ ಬಳಿಕವೂ ಕನ್ನಡ ಸಾಹಿತ್ಯದಲ್ಲಿ ಗಟ್ಟಿಯಾಗಿ ಉಳಿಯುವಂತಹ ಕೃತಿ ರಚಿಸಿದ್ದಾರೆ ಎಂದರು.
ಪ್ರಬಂಧ ಬರಹಗಾರರಿಗೆ ಬಹುಮಾನ: ಎಸ್.ಎಲ್. ಭೈರಪ್ಪನವರ ಸಾಹಿತ್ಯದಲ್ಲಿ ಮೌಲ್ಯ ವಿಷಯದ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ 16 ಬರಹಗಾರರು ಭಾಗವಹಿಸಿದ್ದರು. ಆಯ್ಕೆಯಾದ ಎರಡು ಉತ್ತಮ ಪ್ರಬಂಧಗಳಿಗೆ ಬಹುಮಾನ ವಿತರಿಸಲಾಯಿತು.
ಗಿಣಿಗೇರಿ ಕನ್ನಡ ಸಾಹಿತ್ಯ ಪರಿಷತ್ ವಲಯದ ಅಧ್ಯಕ್ಷ ಶಂಕರಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಸೋಮಲಿಂಗಪ್ಪ ಬೆಣ್ಣಿ ಸ್ವಾಗತಿಸಿ ವಂದಿಸಿದರು.