ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ನಿಮಿತ್ತ ಸಂವಿಧಾನ ಉಳಿಸಿ ಜಾಗೃತಿ ಜಾಥಾ

KannadaprabhaNewsNetwork |  
Published : Apr 16, 2024, 01:00 AM IST
15ಕೆಎಂಎನ್ ಡಿ31 | Kannada Prabha

ಸಾರಾಂಶ

ಭಾರತದ ಸಂವಿಧಾನದ ಉಳಿವಿಗಾಗಿ ನಮ್ಮೇಲ್ಲರ ಹೋರಾಟ ನಿರಂತರವಾಗಿರಬೇಕು. ಸಂವಿಧಾನ ಭಾರತದ ಸರ್ವಶ್ರೇಷ್ಠ ಗ್ರಂಥ. ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವ ಸಂವಿಧಾನವನ್ನು ನೀಡಿದ್ದಾರೆ. ಕೆಲ ಮನುವಾದಿಗಳು ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಸಂಜೆ ಪಟ್ಟಣದಲ್ಲಿ ಸಂವಿಧಾನ ಉಳಿಸಿ ಜಾಗೃತಿ ಜಾಥಾ ನಡೆಸಿದರು.

ತಾಲೂಕು ಸಂವಿಧಾನ ಜಾಗೃತಿ ವೇದಿಕೆ ಅಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಅರಿವು ಮೂಡಿಸಿದರು.

ನಂತರ ಪುರಸಭೆ ಆವರಣದಲ್ಲಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ನೆರೆದಿದ್ದ ಕಾರ್ಯಕರ್ತರು ಮೇಣದ ಬತ್ತಿಗಳನ್ನು ಹಿಡಿದು ಸಂವಿಧಾನ ಉಳಿಸುವ ಸಂಕಲ್ಪ ಮಾಡಿದರು.

ಈ ವೇಳೆ ಮಾತನಾಡಿದ ಸುರೇಶ್ ಕಂಠಿ, ಭಾರತದ ಸಂವಿಧಾನದ ಉಳಿವಿಗಾಗಿ ನಮ್ಮೇಲ್ಲರ ಹೋರಾಟ ನಿರಂತರವಾಗಿರಬೇಕು. ಸಂವಿಧಾನ ಭಾರತದ ಸರ್ವಶ್ರೇಷ್ಠ ಗ್ರಂಥ. ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚುವ ಸಂವಿಧಾನವನ್ನು ನೀಡಿದ್ದಾರೆ. ಕೆಲ ಮನುವಾದಿಗಳು ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಸಂವಿಧಾನದ ಬದಲಾವಣೆಗೆ ಕೈ ಹಾಕಿದರೆ ಭಾರತದಲ್ಲಿ ರಕ್ತಪಾತ ನಡೆಯುವುದರಲ್ಲಿ ಸಂಶಯವಿಲ್ಲ. ಶೋಷಿತ ಸಮುದಾಯದ ಜನರು ಆಗಾಗ ಸಂವಿಧಾನದ ಉಳಿವಿಗಾಗಿ ನಿರಂತರವಾಗಿ ಹೋರಾಟಗಳನ್ನು ರೂಪಿಸಿ ನಮ್ಮನಾಳುವ ಸರ್ಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು ಎಂದು ಕರೆ ನೀಡಿದರು.

ಪಟ್ಟಣದ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಬೃಹತ್ ಭಾವಚಿತ್ರಗಳನ್ನು ಡೋಳ್ಳು, ನಗಾರಿ, ತಮಟೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ, ಅಂಬೇಡ್ಕರ್ ಅವರ ಪೋಟೋಗಳು ಮತ್ತು ನೀಲಿಮಯವಾದ ಶಾಲುಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯ ಉದ್ದಕ್ಕೂ ಜೈ ಭೀಮ್ ಜಯ ಘೋಷ ಮೊಳಗಿತ್ತು.

ಈ ವೇಳೆ ವಿವಿಧ ಸಂಘಟನೆಗಳ ಮುಖಂಡರಾದ ವಿ.ಸಿ. ಉಮಾಶಂಕರ್, ಸೊ.ಶಿ. ಪ್ರಕಾಶ್, ಮುಡಿನಹಳ್ಳಿ ತಿಮ್ಮಯ್ಯ, ರಾಘವೇಂದ್ರ, ಕರಡಕೆರೆ ಯೋಗೇಶ್, ರವಿಕುಮಾರ್, ರುದ್ರಯ್ಯ, ಕೆಸ್ತೂರು ಈಶ್ವರ್, ಸುರೇಶ, ಹುಲಿಗೆರಪುರ ಮಹಾದೇವು, ಗುಡಿಗೆರೆ ಬಸವರಾಜು, ಪೊಲೀಸ್ ಮಹಾದೇವು, ಬಿ.ಪಿ. ಗಿರೀಶ್, ಭಾನುಪ್ರಕಾಶ್ ಸೇರಿದಂತೆ ಇತರರು ಇದ್ದರು.

PREV

Latest Stories

ದಾವಣಗೆರೆಯಲ್ಲಿ ವೀರಶೈವ ಪಂಚಪೀಠಗಳ ಸಮಾಗಮ
ಹವ್ಯಕ ಪ್ರತಿಷ್ಠಾನ ವಾರ್ಷಿಕೋತ್ಸವ ಸಂಪನ್ನ
5 ಪಾಲಿಕೆ ರಚನೆಗೆ ಆಕ್ಷೇಪಣೆ ಸಲ್ಲಿಸಲು ಹಕ್ಕಿದೆ: ಡಿಕೆಶಿ