ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಬುರ್ಗಿಯ ಮಹಾಲಕ್ಷ್ಮಿ ಲೇಔಟ್ ನ ‘ಸಾಹಿತ್ಯ ಸದನ’ ದಲ್ಲಿ ಸೋಮವಾರ ಡಾ. ಚನ್ನಣ್ಣ ವಾಲಿಕಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗೆ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ಅವರು ಹತ್ತು ಸಾವಿರ ರುಪಾಯಿಯ ಚೆಕ್ ಹಸ್ತಾಂತರಿಸುವ ಸರಳ ಸಮಾರಂಭದಲ್ಲಿ ಮಾತನಾಡಿ, ವಾಲೀಕಾರ್ ಕಟ್ಟಿದ ಜೀವನ ಮೌಲ್ಯವು ಈ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು ಆ ಚಿಂತನೆಗಳ ದಾರಿಯಲ್ಲಿ ಸಮಾಜವನ್ನು ಬೆಳೆಸಲು ಅವರ ಹೆಸರಿನಲ್ಲಿ ಕಟ್ಟಿದ ಸಂಸ್ಥೆಗೆ ಶಿಷ್ಯಂದಿರು ಮತ್ತು ಅಭಿಮಾನಿಗಳು ನೀಡುವ ದೇಣಿಗೆ ಮತ್ತು ಸಹಕಾರದಿಂದ ಚೆನ್ನಣ್ಣ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಸಾಧ್ಯ ಎಂದು ಹೇಳಿದರು.
ಈಗಾಗಲೇ ರಾಜ್ಯ ಸರ್ಕಾರವು ಡಾ. ಚನ್ನಣ್ಣ ವಾಲೀಕಾರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಲು ಮುಂದಾಗಿರುವುದು ಸಂತಸದ ವಿಷಯ. ಚುನಾವಣೆ ಮುಗಿದ ಕೂಡಲೇ ಟ್ರಸ್ಟಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಕ್ರಿಯಾಶೀಲ ಕಾರ್ಯ ಚಟುವಟಿಕೆ ಪ್ರಾರಂಭಿಸಲಿ ಎಂದು ಆಶಿಸಿದರು.ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕ ಹೊಂದಿದ ಸಾಹಿತಿ, ಸಂಘಟಕ ಬಿ.ಎಚ್ ನಿರಗುಡಿ ಅವರು ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಯಾವುದೇ ಸ್ಥಾನಮಾನಗಳು ಆ ಭಾಗದ ಅಭಿವೃದ್ಧಿಗೆ ನೆರವಾಗಬೇಕಾಗಿದೆ.ಚೆನ್ನಣ್ಣರ ಮೌಲಿಕ ಬದುಕು ನಮಗೆಲ್ಲ ಪ್ರೇರಣೆಯಾಗಿದೆ,
ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಕೆ ಎಸ್ ಬಂಧು ಮಾತನಾಡಿ ಚೆನ್ನಣ್ಣ ವಾಲಿಕಾರ್ ತಮ್ಮ ಬದುಕಿನಲ್ಲಿ ಇತರರನ್ನು ಬೆಳೆಸುವುದರ ಮೂಲಕವೇ ಸಂತಸ ಕಂಡವರು. ಅವರು ಕಟ್ಟಿದ ಶಿಷ್ಯವರ್ಗವು ಇವತ್ತು ನಾಡಿನ ಉದ್ದಗಲಕ್ಕೂ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಹೆಸರನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಹೆಮ್ಮೆ. ಭೌತಿಕವಾಗಿ ಚೆನ್ನಣ್ಣ ನಮ್ಮೊಡನೆ ಇಲ್ಲದಿದ್ದರೂ ಅವರ ಆದರ್ಶವನ್ನು ಶಿಷ್ಯರ ಮೂಲಕ ಈಗ ಪಸರಿಸಲಾಗುತ್ತಿದೆ ಎಂದು ಹೇಳಿದರು.ಹಿರಿಯ ಸಾಹಿತಿ ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ನ್ಯಾಯವಾದಿ ಅಪ್ಪಾಸಾಹೇಬ್ ವಾಲಿಕಾರ್, ಶ್ರೀಮತಿ ಅಮೃತಾ ದೇಶಪಾಂಡೆ ಉಪಸ್ಥಿತರಿದ್ದರು.