ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಡಾ. ಚಿದಾನಂದ ಸಾಲಿ ಸೃಜನಶೀಲ ಹೆಜ್ಜೆ

KannadaprabhaNewsNetwork |  
Published : Aug 11, 2026, 02:00 AM IST
ಬಳ್ಳಾರಿಯ ಕನ್ನಡಭವನದಲ್ಲಿ ಜರುಗಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಲೇಖಕ ಡಾ.ಚಿದಾನಂದ ಸಾಲಿ ಅವರು ಮಾತನಾಡಿದರು.  | Kannada Prabha

ಸಾರಾಂಶ

ಸಾಹಿತ್ಯಿಕ ವಲಯದ ಬಹುಮುಖಿ ಸೃಜನಶೀಲ ಲೇಖಕ ಡಾ. ಚಿದಾನಂದ ಸಾಲಿ ಅವರ ಸಾಹಿತ್ಯಿಕ ಪಯಣ ಕುರಿತು ವಿಸ್ತೃತವಾಗಿ ಚರ್ಚಿಸಿ ಸಂವಾದಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಕನ್ನಡಭವನ ಸಭಾಂಗಣ ಸಾಕ್ಷಿಯಾಯಿತು.

ಬಳ್ಳಾರಿ: ಸಾಹಿತ್ಯಿಕ ವಲಯದ ಬಹುಮುಖಿ ಸೃಜನಶೀಲ ಲೇಖಕ ಡಾ. ಚಿದಾನಂದ ಸಾಲಿ ಅವರ ಸಾಹಿತ್ಯಿಕ ಪಯಣ ಕುರಿತು ವಿಸ್ತೃತವಾಗಿ ಚರ್ಚಿಸಿ ಸಂವಾದಿಸುವ ವಿಶಿಷ್ಟ ಕಾರ್ಯಕ್ರಮಕ್ಕೆ ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ಕನ್ನಡಭವನ ಸಭಾಂಗಣ ಸಾಕ್ಷಿಯಾಯಿತು.

ಕಥೆ, ಕಾವ್ಯ, ಪ್ರಬಂಧ, ಅನುವಾದ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ತಮ್ಮದೇ ಆದ ವಿಶಿಷ್ಟ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಡಾ. ಸಾಲಿ ಅವರ ಕೃತಿಗಳು ಹಾಗೂ ಅವರ ಬರವಣಿಗೆ ಶೈಲಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು ಡಾ. ಸಾಲಿಯವರ ಕೃತಿಯ ತಮ್ಮದೇ ಓದಿನ ಅನುಭವಗಳನ್ನು ತೆರೆದಿಟ್ಟರು.

ಸಂವಾದಕ್ಕೆ ಚಾಲನೆ ನೀಡಿದ ನಾಡಿನ ಖ್ಯಾತ ಯುವ ಲೇಖಕ ಆರೀಫ್ ರಾಜಾ ಅವರು, ಚಿದಾನಂದ ಸಾಲಿ ಅವರ ಸಾಹಿತ್ಯ ಕೃತಿಗಳಲ್ಲಿ ಬದುಕಿನ ವಿವಿಧ ಮಗ್ಗುಲುಗಳು, ಸಾಮಾಜಿಕ ವಾಸ್ತವ, ಮನುಷ್ಯ ಸಂಬಂಧಗಳು, ಗ್ರಾಮೀಣ ಬದುಕಿನ ಸೂಕ್ಷ್ಮತೆ, ಸಮಕಾಲೀನ ಸಮಾಜದ ತಲ್ಲಣಗಳು ಹಾಗೂ ಮಾನವೀಯ ಮೌಲ್ಯಗಳು ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿವೆ ಎಂದರು.

ಸಾಹಿತ್ಯದ ಒಂದೇ ಪ್ರಕಾರಕ್ಕೆ ಸೀಮಿತವಾಗದೆ ಕಥೆ, ಕಾವ್ಯ, ಪ್ರಬಂಧ, ಅನುವಾದ ಸೇರಿದಂತೆ ಹಲವು ಪ್ರಕಾರಗಳಲ್ಲಿ ಅವರು ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿಕೊಂಡಿರುವುದು ಅವರ ಸಾಹಿತ್ಯಿಕ ಪಯಣದ ಪ್ರಮುಖ ವೈಶಿಷ್ಟ್ಯವಾಗಿದೆ. ಪ್ರಕಾರ ಬದಲಾದರೂ ಅವರ ಬರವಣಿಗೆಯಲ್ಲಿರುವ ಮಾನವೀಯ ಕಾಳಜಿ, ಸಾಮಾಜಿಕ ಸ್ಪಂದನೆ ಮತ್ತು ಜೀವನಾನುಭವಗಳೇ ಕೇಂದ್ರಬಿಂದುವಾಗಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕ ಹಾಗೂ ಲೋಹಿಯಾ ಪ್ರಕಾಶನದ ಮುಖ್ಯಸ್ಥ ಸಿ. ಚನ್ನಬಸವಣ್ಣ ಮಾತನಾಡಿ, ಸಾಹಿತ್ಯ ಎನ್ನುವುದು ಸಮಾಜವನ್ನು ನೋಡುವ, ಅರ್ಥಮಾಡಿಕೊಳ್ಳುವ ಮತ್ತು ಪ್ರಶ್ನಿಸುವ ಒಂದು ಸೂಕ್ಷ್ಮ ಮಾಧ್ಯಮ. ಲೇಖಕ ತನ್ನ ಸುತ್ತಲಿನ ಬದುಕಿಗೆ ಸ್ಪಂದಿಸಿದಾಗ ಮಾತ್ರ ಆತನ ಸಾಹಿತ್ಯಕ್ಕೆ ಜೀವಂತಿಕೆ ದೊರೆಯುತ್ತದೆ. ಚಿದಾನಂದ ಸಾಲಿ ಅವರ ಬರಹಗಳು ಬದುಕಿನ ಪ್ರತಿಬಿಂಬವಾಗಿ ಪ್ರತಿಫಲಿಸಿವೆ ಎಂದು ಅಭಿಪ್ರಾಯಪಟ್ಟರು.

ಈ ನಾಡಿಗೆ ಅವಧೂತರು, ಆರೂಢರು, ತತ್ವಪದಕಾರರ ದೊಡ್ಡ ಪರಂಪರೆಯೇ ಇದೆ. ಕಂದಾಚಾರ ಬೇರೆ, ಪರಂಪರೆ ಬೇರೆ. ಪರಂಪರೆಯನ್ನು ಇಟ್ಟುಕೊಂಡೇ ಬರೆಯಬೇಕು. ಚರಿತ್ರೆಯ ಹಿನ್ನೆಲೆ ಇಟ್ಟುಕೊಳ್ಳದೆ ಬರೆದರೆ ಹೆಚ್ಚು ಪೂರಕ ಎನಿಸದು ಎಂದು ಅಭಿಪ್ರಾಯಪಟ್ಟ ಚನ್ನಬಸವಣ್ಣನವರು, ಇದೇ ವೇಳೆ ಜಾಗತೀಕರಣ ಪ್ರಭಾವ, ಲೋಹಿಯಾ ಚಿಂತನೆಗಳು, ಪ್ರೊ. ನಂಜುಂಡಸ್ವಾಮಿಯವರ ಹೋರಾಟದ ಸಾಮರ್ಥ್ಯ ಹಾಗೂ ಲೇಖಕ ಸಾಲಿಯವರ ಸೃಜನಶೀಲ ಬರವಣಿಗೆ ಹಾಗೂ ಗುರುಗಳ ಮೇಲೆ ಇಟ್ಟುಕೊಂಡಿರುವ ಅಪಾರ ಅಭಿಮಾನದ ಭಕ್ತಿಯನ್ನು ಮೆಲುಕು ಹಾಕಿದರು.

ಯುವ ಲೇಖಕ ಡಾ. ಟಿ.ಎಸ್. ಗೊರವರ ಅವರು ಸಾಲಿಯವರ ಸಾಹಿತ್ಯ ಕುರಿತು ಮಾತನಾಡಿ, ಸಮಾಜದ ಅಂಚಿನಲ್ಲಿರುವವರ ನೋವು, ಸಂಘರ್ಷ, ಕನಸು, ನಿರೀಕ್ಷೆ, ಸಂಬಂಧಗಳ ಸಂಕೀರ್ಣತೆ ಹಾಗೂ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳು ಸಾಲಿಯವರ ಕಥನಗಳಲ್ಲಿ ವಿಭಿನ್ನ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕಥೆಯ ಪಾತ್ರಗಳನ್ನು ಕೇವಲ ಘಟನೆಗಳ ಭಾಗವಾಗಿ ಸೃಷ್ಟಿಸದೆ, ಅವರ ಒಳಮನಸ್ಸು ಮತ್ತು ಬದುಕಿನ ಸಂಘರ್ಷಗಳೊಂದಿಗೆ ಕಟ್ಟಿಕೊಡುವುದು ಸಾಲಿ ಅವರ ಕಥಾ ಶೈಲಿಯ ಪ್ರಮುಖ ಗುಣವಾಗಿದೆ ಎಂದು ತಿಳಿಸಿದರು.

ಡಾ. ಚಿದಾನಂದ ಸಾಲಿಯವರ ಕಾವ್ಯಾನುಸಂಧಾನ ಕುರಿತು ಡಾ. ಪ್ರಜ್ಞಾ ಮತ್ತಿಹಳ್ಳಿ ಅವರು ವಿಸ್ತೃತವಾಗಿ ವಿವರಿಸಿದರು. ಲೇಖಕ ಸಾಲಿಯವರ ಜೊತೆಗಿನ ಒಡನಾಟವನ್ನು ಪಲ್ಲವ ಪ್ರಕಾಶನದ ವೆಂಕಟೇಶ್ ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಡಾ. ಚಿದಾನಂದ ಸಾಲಿ ಅವರು ತಮ್ಮ ಬರವಣಿಗೆಯ ಬದುಕಿಗೆ ಬಳ್ಳಾರಿ ನೀಡಿದ ನೆರವು, ಪ್ರೋತ್ಸಾಹ ಹಾಗೂ ಈ ಭಾಗದ ಜನರ ಪ್ರೇರಣೆಯನ್ನು ಸ್ಮರಿಸಿಕೊಂಡರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಕಾರ್ಯದರ್ಶಿ ಡಾ. ಶಿವಲಿಂಗಪ್ಪ ಹಂದಿಹಾಳು ಹಾಗೂ ಡಾ. ನಾಗರಾಜ ಬಸರಕೋಡು ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಪಡೆದ ಪಲ್ಲವ ಪ್ರಕಾಶನದ ಮುಖ್ಯಸ್ಥ ಪಲ್ಲವ ವೆಂಕಟೇಶ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ಲೇಖಕಿ ಡಿ.ಬಿ. ರಜಿಯಾ, ಲೇಖಕರಾದ ದಸ್ತಗೀರ್ ಸಾಬ್ ದಿನ್ನಿ, ಅಬ್ದುಲ್ ಹೈ ತೋರಣಗಲ್, ವೀರೇಂದ್ರ ರಾವಿಹಾಳು, ದಾದಾ ಖಲಂದರ್, ಚಂದ್ರಶೇಖರ ಆಚಾರ್ ಕಪ್ಪಗಲ್, ಸಿಎ ಎರಿಸ್ವಾಮಿ ಚಿಲ್ಕರಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘ ಹೋರಾಟಕ್ಕೆ ಇಲ್ಲ ನ್ಯಾಯ: ಮಂತ್ರಿ, ಶಾಸಕರನ್ನು ನಿಲ್ಲಿಸಿ ಕೇಳೋಣ
ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಮಾಡಿ: ಸಿಐಟಿಯು ಪ್ರತಿಭಟನೆ