ಸರಳ ಸಜ್ಜನಿಕೆಯ ಅಚ್ಚುಮೆಚ್ಚಿನ ವೈದ್ಯರಾಗಿದ್ದ ದಿ.ಡಾ.ಡಿ.ಎಸ್.ವೆಂಕಟೇಶ್: ಡಾ.ಟಿ.ಎನ್.ಧನಂಜಯ

KannadaprabhaNewsNetwork |  
Published : Nov 06, 2025, 02:15 AM IST
4ಕೆಎಂಎನ್ ಡಿ20 | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆ ಅಭಿವೃದ್ದಿಗೆ ಡಾ. ಡಿ.ಎಸ್.ವೆಂಕಟೇಶ್ ಅವರು ಬಹಳ ಶ್ರಮ ಹಾಕಿದ್ದರು. ಯಾರಿಗೂ ಹೆದರದೆ, ಯಾರ ಮುಲಾಜಿಗೂ ಒಳಗಾಗದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಂತಹ ಒಬ್ಬ ಉತ್ತಮ ಆಡಳಿತ ವೈದ್ಯಾಧಿಕಾರಿಯನ್ನು ಕಳೆದುಕೊಂಡಿದ್ದೇವೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರಿ ವೈದ್ಯರಾಗಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದ ಡಾ.ವೆಂಕಟೇಶ್ ಅವರು ಹಗಲು ರಾತ್ರಿ ಎನ್ನದೆ ಗ್ರಾಮೀಣ ಪ್ರದೇಶದ ಬಡರೋಗಿಗಳಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಸರಳ- ಸಜ್ಜನಿಕೆಯ ಅಚ್ಚುಮೆಚ್ಚಿನ ವೈದ್ಯರಾಗಿದ್ದರು ಎಂದು ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಟಿ.ಎನ್.ಧನಂಜಯ ಹೇಳಿದರು.

ಪಟ್ಟಣದ ಎಸ್.ಎಲ್.ವಿ.ನರ್ಸಿಂಗ್‌ಹೋಂ ಆವರಣದಲ್ಲಿ ಔಷಧ ವ್ಯಾಪಾರಿಗಳ ಸಂಘ, ಸರ್ಕಾರಿ ನೌಕರರ ಸಂಘ ಹಾಗೂ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ದಿ.ಡಾ.ಡಿ.ಎಸ್.ವೆಂಕಟೇಶ್ ಅವರಿಗೆ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೆಂಕಟೇಶ್ ಅವರು ಆಸ್ಪತ್ರೆಗೆ ಬರುತ್ತಿದ್ದ ಬಡವರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಹಲವು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ನೂರಾರು ರೋಗಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದೇ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಜನಿಸಿ ತಾಲೂಕಿನ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ ಎಂದು ಭಾವಿಸಿ ನನ್ನ ಜನ, ನನ್ನ ಆಸ್ಪತ್ರೆ ಎಂಬ ಮನೋಭಾವದಿಂದ ಸೇವೆ ಸಲ್ಲಿಸಿದ್ದರು ಎಂದರು.

ಆಡಳಿತ ವೈದ್ಯಾಧಿಕಾರಿಯಾಗಿದ್ದರೂ ಕೂಡ ಹಮ್ಮು- ಬಿಮ್ಮುಗಳಿಲ್ಲದೆ ರೋಗಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ಕಾರಿ ಆಸ್ಪತ್ರೆಯನ್ನು ಕಾರ್ಪೋರೇಟ್ ಆಸ್ಪತ್ರೆಯಂತೆ ಸುಸಜ್ಜಿತ ಮಾರ್ಪಾಡು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ತಾಲೂಕಿನ ಬೋಗಾದಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರಿಂದ ಆ ಭಾಗದ ಜನರು ತಮ್ಮ ಮನೆ ಮಗನಂತೆ ಇವರನ್ನು ಕಾಣುತ್ತಿದ್ದರು. ಇದು ಅವರ ಸೇವೆಗೆ ಸಿಕ್ಕ ಪ್ರತಿಫಲವಾಗಿದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಜನರಿಗೆ ಹಗಲು- ರಾತ್ರಿ ಅವರೇ ನಿಂತುಕೊಂಡು ನೀಡಿದ ಸೇವೆಯನ್ನು ತಾಲೂಕಿನ ಜನರು ಮರೆಯುವಂತಿಲ್ಲ ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಿರಿಯ ವೈದ್ಯ ಡಾ.ಹರೀಶ್ ಮಾತನಾಡಿ, ಸರ್ಕಾರಿ ಆಸ್ಪತ್ರೆ ಅಭಿವೃದ್ದಿಗೆ ಡಾ. ಡಿ.ಎಸ್.ವೆಂಕಟೇಶ್ ಅವರು ಬಹಳ ಶ್ರಮ ಹಾಕಿದ್ದರು. ಯಾರಿಗೂ ಹೆದರದೆ, ಯಾರ ಮುಲಾಜಿಗೂ ಒಳಗಾಗದೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಂತಹ ಒಬ್ಬ ಉತ್ತಮ ಆಡಳಿತ ವೈದ್ಯಾಧಿಕಾರಿಯನ್ನು ಕಳೆದುಕೊಂಡಿದ್ದೇವೆ ಎಂದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ನಾರಾಯಣ್, ಹಿರಿಯ ವೈದ್ಯ ಡಾ.ಆದಿತ್ಯ, ಶಿಕ್ಷಕ ಎನ್.ಸಿ.ಶಿವಕುಮಾರ್, ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್, ಮುಖಂಡರಾದ ಹನುಮಂತು, ಕೆಂಪೇಗೌಡ ಮಾತನಾಡಿದರು. ದಿ.ಡಾ.ವೆಂಕಟೇಶ್ ಅವರ ಪತ್ನಿ ಡಾ.ಬಿ.ಎಸ್.ಶಶಿಕಲಾ, ಪುತ್ರಿ ಡಾ.ಲಾಸ್ಯ, ವೈದ್ಯರಾದ ಡಾ.ಪ್ರದ್ಯುಗ್ನ, ಡಾ.ವಿನುತಾ, ಡಾ.ರಾಘವೇಂದ್ರ, ಡಾ.ಪ್ರಶಾಂತ್, ಪುರಸಭೆ ಸದಸ್ಯ ತಿಮ್ಮಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ವಿನಯ್, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸೀತಾರಾಮು, ಪತ್ರಕರ್ತರಾದ ಎನ್.ಆರ್.ದೇವಾನಂದ್, ಎಂ.ಕೆ.ಉಮೇಶ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ
ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು