ಹಾವೇರಿ: ಡಾ.ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ರಕ್ಷಣೆ, ಪ್ರಚಾರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಗಂಧದಂತೆ ಜೀವನ ತೇಯ್ದು, ಬತ್ತಿಯಂತೆ ಸುಟ್ಟುಕೊಂಡು, ದೀಪದಂತೆ ಬೆಳೆಕಾದರು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು ಅದರಲ್ಲಿನ ಅರ್ಥ ಬಿಡಿಸಿ ಬರೆದರು. ತಾವು ಸಂಗ್ರಹಿಸಿದ ರಾಶಿ ರಾಶಿ ವಚನಗಳನ್ನು ಮುದ್ರಿಸಿ, ಈ ಸಾಹಿತ್ಯ ಜನರಿಗೆ ತಲುಪಲು 1925ರಲ್ಲಿ ಹಿತಚಿಂತಕ ಮುದ್ರಣಾಲಯ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾದಾಗ ವಕೀಲಿ ವೃತ್ತಿಯಿಂದ ಸಂಪಾದಿಸಿ ಕಟ್ಟಿಕೊಂಡಿದ್ದ ತಮ್ಮ ಮನೆಯನ್ನೇ ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ
ಅಂದು ಜೀವನ ಸಾಗಿಸಿದರು ಎಂದರು.ಅಂದು ಆರಂಭಿಸಿದ ಶಿವಾನುಭವ ಪತ್ರಿಕೆ, ಬಡತನದ ಮಧ್ಯೆಯೂ ಮುನ್ನಡೆಯಿತು. ಈ ಪತ್ರಿಕೆಯನ್ನು 35 ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿ ಡಾ.ಫ.ಗು. ಹಳಕಟ್ಟಿಯವರು ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು ಎಂದರು.
ಅತಿಥಿಗಳಾಗಿ ರಾಣಿಬೆನ್ನೂರು ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಿ.ಜಿ. ಹೊಟ್ಟೆಗೌಡರ, ನಿವೃತ್ತ ಅರಣ್ಯಾಧಿಕಾರಿ ಡಾ.ಜಗದೀಶ ಮಹಾರಾಜಪೇಟೆ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪರಶುರಾಮ ಹರ್ಲಾಪೂರ, ಮಲ್ಲಿಕಾರ್ಜುನ ಹಿಂಚಗೇರಿ, ಕಮಲ ಬುಕ್‌ಶೆಟ್ಟಿ, ಶಿವಶಂಕರ ಹೇರುಂಡಿ, ರೇಣುಕಾ ಗುಡಿಮನಿ ಸೇರಿದಂತೆ ಇತರರು ಇದ್ದರು.