ಜಿಲ್ಲೆ ಸಾಂಸ್ಕೃತಿಕ ಸಿರಿತನಕ್ಕೆ ಡಾ. ಎಂ.ಜಿ. ಈಶ್ವರಪ್ಪ ಕೊಡುಗೆ ಅಪಾರ

KannadaprabhaNewsNetwork |  
Published : Jun 10, 2024, 12:30 AM IST
9ಕೆಡಿವಿಜಿ1, 2- ದಾವಣಗೆರೆಯಲ್ಲಿ ಭಾನುವಾರ ಪ್ರತಿಮಾ ಸಭಾದಿಂದ ಡಾ.ಎಂ.ಜಿ.ಈಶ್ವರಪ್ಪ ಅವರಿಗೆ ನುಡಿನಮನ ಸಮಾರಂಭದಲ್ಲಿ ಈಶ್ವರಪ್ಪ ಭಾವಚಿತ್ರಕ್ಕೆ ಶ್ರೀನಿವಾಸ ಕಪ್ಪಣ್ಣ, ಕುಂ. ವೀರಭದ್ರಪ್ಪ, ಪ್ರೊ.ಎಸ್.ಹಾಲಪ್ಪ ಇತರರು ಪುಷ್ಪನಮನ ಸಲ್ಲಿಸಿದರು. | Kannada Prabha

ಸಾರಾಂಶ

ಸಾಂಸ್ಕೃತಿಕ ವಲಯದಲ್ಲಿ ದಾವಣಗೆರೆ ಅದ್ಭುತ ಕೆಲಸ ಮಾಡಿದ್ದು, ಪ್ರತಿಭಾ ಸಭಾ ಆರಂಭಿಸುವ ಮೂಲಕ ಸಾಂಸ್ಕೃತಿಕ ಸಿರಿತನಕ್ಕೆ ಜನಪದ ತಜ್ಞ, ಹಿರಿಯ ರಂಗಕರ್ಮಿ ದಿವಂಗತ ಡಾ. ಎಂ.ಜಿ. ಈಶ್ವರಪ್ಪ ಕೊಂಡಿಯಾಗಿದ್ದರು ಎಂದು ಹಿರಿಯ ಸಾಂಸ್ಕೃತಿಕ ಸಂಘಟಕ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ದಾವಣಗೆರೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಪ್ರತಿಮಾ ಸಭಾ ಮೂಲಕ ಸಾಂಸ್ಕೃತಿಕ ಚಟುವಟಿಕೆ ಪ್ರೋತ್ಸಾಹಿಸಿದ್ದರು: ಶ್ರೀನಿವಾಸ ಕಪ್ಪಣ್ಣ ಶ್ಲಾಘನೆ । ನುಡಿನಮನ ಕಾರ್ಯಕ್ರಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಾಂಸ್ಕೃತಿಕ ವಲಯದಲ್ಲಿ ದಾವಣಗೆರೆ ಅದ್ಭುತ ಕೆಲಸ ಮಾಡಿದ್ದು, ಪ್ರತಿಭಾ ಸಭಾ ಆರಂಭಿಸುವ ಮೂಲಕ ಸಾಂಸ್ಕೃತಿಕ ಸಿರಿತನಕ್ಕೆ ಜನಪದ ತಜ್ಞ, ಹಿರಿಯ ರಂಗಕರ್ಮಿ ದಿವಂಗತ ಡಾ. ಎಂ.ಜಿ. ಈಶ್ವರಪ್ಪ ಕೊಂಡಿಯಾಗಿದ್ದರು ಎಂದು ಹಿರಿಯ ಸಾಂಸ್ಕೃತಿಕ ಸಂಘಟಕ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಪ್ರತಿಮಾ ಸಭಾ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚೇತನ ಡಾ. ಎಂ.ಜಿ. ಈಶ್ವರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಮಾ ಸಭಾ ಇಲ್ಲಿ ಆರಂಭ ಆಗುವುದರೊಂದಿಗೆ ಸಾಂಸ್ಕೃತಿಕ ಯುಗದ ಆರಂಭಕ್ಕೆ ನಾಂದಿಯಾಯಿತು ಎಂದರು.

ರಂಗಭೂಮಿಯ ತವರಾಗಿದ್ದ ದಾವಣಗೆರೆಯಲ್ಲಿ ಅನೇಕ ನಾಟಕಗಳೂ ನಡೆದವು. ರಂಗಾಯಣದ ಮೊದಲ ಸಂದರ್ಶನ ನಡೆದಿದ್ದೇ ಇಲ್ಲಿ. ಇಂದಿಗೂ ಸಾಂಸ್ಕೃತಿಕ ಕ್ಷೇತ್ರದ ವಿಚಾರದಲ್ಲಿ ದಾವಣಗೆರೆ ಮಾದರಿಯಾಗಿದೆ. ಅಂದಿನ ಸಂದರ್ಶನದ ದಾಖಲೆ ಇಂದಿಗೂ ಉಳಿದಿದೆ. ಬಿ.ವಿ.ಕಾರಂತರಿಗೂ, ಈ ಊರಿಗೂ ಅಷ್ಟೇ ಒಡನಾಟವಿತ್ತು. ಇಲ್ಲಿ ಕಾರಂತರು ಐದು ದಿನ ರಂಗಪಂಚಮಿ ಮಾಡಿದ್ದರು. ಪ್ರತಿಮಾ ಚಿತ್ರಕೂಟ ಸಹ ಇಲ್ಲಿ ನಡೆದಿತ್ತು ಎಂದು ಸ್ಮರಿಸಿದರು.

ರಂಗಭೂಮಿ ನಿರ್ದೇಶಕ ಸುರೇಂದ್ರ ಇದೇ ಊರಿನವರು. ಅಂತಹವರನ್ನು ಬೆಳೆಸಿದ್ದೇ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ. ಇಂದು ಸುರೇಂದ್ರ ವಿದೇಶಗಳಲ್ಲೂ ನಾಟಕ ಮಾಡುತ್ತಿದ್ದಾರೆ. ಬಿ.ಜಯಶ್ರೀ, ಸಿ.ಆರ್.ಸಿಂಹ ಅವರಂತಹ ನಿರ್ದೇಶಕರ ನಾಟಕಗಳನ್ನು ದಾವಣಗೆರೆಯಲ್ಲಿ ಪ್ರದರ್ಶನಗೊಳ್ಳಲು, ಇಲ್ಲಿನ ಪ್ರಬುದ್ಧ ಪ್ರೇಕ್ಷಕರ ಸಹಕಾರ ಕಾರಣ. ದಾವಣಗೆರೆಗೆ ಬಾರದ ನಿರ್ದೇಶಕರಾಗಲೀ, ಕಲಾವಿದರಾಗಲೀ ಇಲ್ಲ. ಇಲ್ಲಿ ಕಲಾ ಪ್ರೋತ್ಸಾಹಕರ ವಾತಾವರಣ ಸಹ ಇದಕ್ಕೆ ಕಾರಣ ಎಂದರು.

ಪ್ರತಿಮಾ ಸಭಾದ ಅಧ್ಯಕ್ಷ ಹಾಲಪ್ಪನವರು ಇದ್ದರೆ, ಇಲ್ಲಿ ನಡೆಯುವ ಚಟುವಟಿಕೆಗಳು ಎಲ್ಲೆಡೆ ತಲುಪಿಸಿದ್ದು ಎಂ.ಜಿ.ಈಶ್ವರಪ್ಪ. ಇಲ್ಲಿನ ಆತಿಥ್ಯ ಅದ್ಭುತವಾಗಿತ್ತು. ಹಾಗಾಗಿಯೇ ಗಾಯಕ ದಿವಂಗತ ಡಾ. ಸಿ.ಅಶ್ವತ್ಥ್‌ ಅವರಿಗೆ ದಾವಣಗೆರೆ ಪ್ರಿಯವೂ ಆಗಿತ್ತು. ಡಾ. ಎಂ.ಜಿ. ಈಶ್ವರಪ್ಪನವರು ಈ ಊರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಂತಹ ಸಾಧಕರ ಹೆಸರು ಚಿರಸ್ಥಾಯಿಯಾಗುವಂತಹ ಕೆಲಸ ಇಲ್ಲಿ ಆಗಲಿ ಎಂದು ಶ್ರೀನಿವಾಸ ಕಪ್ಪಣ್ಣ ಸಲಹೆ ನೀಡಿದರು.

ಸಾಂಸ್ಕೃತಿಕ ಶೂನ್ಯತೆ ಆವರಿಸಿದೆ:

ಹಿರಿಯ ಸಾಹಿತಿ, ಪತ್ರಕರ್ತ ಬಿ.ಎನ್.ಮಲ್ಲೇಶ ಮಾತನಾಡಿ, ಬೋಧಕ, ರಂಗಕರ್ಮಿ, ಲೇಖಕ, ಮಿತಭಾಷಿ ಹಾಗೂ ಧೀಮಂತ ವ್ಯಕ್ತಿಯಾಗಿ ಆದರ್ಶ ಬಾಳನ್ನು ಡಾ. ಎಂ.ಜಿ. ಈಶ್ವರಪ್ಪ ಬಾಳಿದ್ದಾರೆ. ಸಾವನ್ನಪ್ಪುವ ವಯಸ್ಸಲ್ಲ. ಇನ್ನೂ ಹತ್ತಾರು ವರ್ಷ ಬಾಳಬೇಕಾಗಿದ್ದವರು. ಈಶ್ವರಪ್ಪನವರಿಲ್ಲದೇ, ಸಾಂಸ್ಕೃತಿಕ ಶೂನ್ಯತೆ ಆವರಿಸಿದೆ. ದಾವಣಗೆರೆ ಜಿಲ್ಲೆ, ರಾಜ್ಯಕ್ಕೆ ಈಶ್ವರಪ್ಪ ಕೊಡುಗೆ ಅಪಾರ. ಮುಂದಿನ ದಿನಗಳಲ್ಲಿ ಡಾ.ಈಶ್ವರಪ್ಪ ಹೆಸರಿನಲ್ಲಿ ಪ್ರಶಸ್ತಿ, ನಾಟಕೋತ್ಸವ ಆಯೋಜಿಸುವ ಆಲೋಚನೆ ಮಾಡಿದ್ದೇವೆ ಎಂದರು.

ಪ್ರತಿಮಾ ಸಭಾ ಅಧ್ಯಕ್ಷ ಪ್ರೊ. ಎಸ್.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ನಿರ್ದೇಶಕ ಪ್ರೊ. ಜಿ.ಎನ್.ಸತ್ಯಮೂರ್ತಿ, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಲೇಖಕಿಯರಾದ ಟಿ.ಎಸ್. ಶೈಲಜಾ, ಡಾ.ಗೀತಾ ಬಸವರಾಜ, ಬಾ.ಮ. ಬಸವರಾಜಯ್ಯ, ಡಾ. ಎಂ.ಜಿ. ಈಶ್ವರಪ್ಪ ಮಕ್ಕಳಾದ ಪುತ್ರಲೇಖ, ಪೃಥುವೈನ, ಹಿರಿಯ ರಂಗಕರ್ಮಿ ಎಸ್.ಎಸ್. ಸಿದ್ದರಾಜು, ನಾಗರಾಜ ಸಿರಿಗೆರೆ, ಎನ್.ಟಿ. ಮಂಜುನಾಥ, ಶಂಭಣ್ಣ, ರವೀಂದ್ರ ಅರಳಗುಪ್ಪಿ ಇತರರು ಇದ್ದರು. ಗಾನಲಹರಿ ಸಂಗೀತ ವಿದ್ಯಾಲಯದ ತಂಡದವರು ರಂಗಗೀತೆ ಪ್ರಸ್ತುತಪಡಿಸಿದರು.

- - -

ಬಾಕ್ಸ್‌ ವೃತ್ತ, ರಸ್ತೆಗೆ ಈಶ್ವರಪ್ಪ ಹೆಸರಿಡಿ: ಕುಂ.ವೀ. ಹಿರಿಯ ಲೇಖಕ ಕುಂ.ವೀರಭದ್ರಪ್ಪ ಮಾತನಾಡಿ, ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅವರನ್ನು ಕಳೆದುಕೊಂಡು ದಾವಣಗೆರೆ ಸಾಂಸ್ಕೃತಿಕವಾಗಿ ಬಡವಾಗಿದೆ. ಇಂತಹ ಮಹನೀಯರ ಹೆಸರನ್ನು ಯಾವುದಾದರೂ ವೃತ್ತ, ರಸ್ತೆಗೆ ಇಡಬೇಕು. ಡಾ. ಎಂ.ಜಿ. ಈಶ್ವರಪ್ಪ ಹೆಸರಿನ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಈ ಮೂಲಕ ಎಂ.ಜಿ. ಈಶ್ವಪ್ಪನವರ ಹೆಸರನ್ನು ಜೀವಂತವಾಗಿಡಬೇಕು. ಎಂ.ಜಿ.ಈಶ್ವರಪ್ಪ ಕೇವಲ ವಿದ್ಯಾವಂತರಷ್ಟೇ ಆಗಿರದೇ, ಸುಸಂಸ್ಕೃತರು, ಹೃದಯವಂತರಾಗಿದ್ದರು. ಸಾಂಸ್ಕೃತಿಕವಾಗಿಯೂ ಪಾಂಡಿತ್ಯ ಹೊಂದಿದ್ದರು. ಈಶ್ವರಪ್ಪನವರ ಸಾಕಷ್ಟು ಶಿಷ್ಯಂದಿರು ಇಂದು ವಿವಿಧ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದರು. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಗಬೇಕೆಂಬ ಈಶ್ವರಪ್ಪನವರ ಕನಸು ಸಾಕಾರಗೊಳ್ಳಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿ, ಇಲ್ಲಿ ಸಮ್ಮೇಳನ ನಡೆಸಲು ಶ್ರಮಿಸೋಣ. ಈಶ್ವರಪ್ಪನವರ ನುಡಿನಮನ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಗಣ್ಯರು, ರಂಗಕರ್ಮಿಗಳು, ಸಾಧಕರು ಆಗಮಿಸಿದ್ದಾರೆಂದರೆ ಅವರ ಬಗ್ಗೆ ಈ ಎಲ್ಲರೂ ಹೊಂದಿದ್ದ ಅಭಿಮಾನ, ಗೌರವ ಎಷ್ಟೆಂಬುದು ಅರ್ಥವಾಗುತ್ತದೆ. ನುಡಿನಮನದ ಮೂಲಕ ಮರುಸೃಷ್ಟಿ ಮಾಡುವ ಸಾಧ್ಯತೆ ಇರಬೇಕಿತ್ತು ಎಂಬುದಾಗಿ ಈಶ್ವರಪ್ಪನವರ ಅಗಲಿಕೆ ಬಗ್ಗೆ ಅ‍ವರು ಬೇಸರ ವ್ಯಕ್ತಪಡಿಸಿದರು.

- - - -9ಕೆಡಿವಿಜಿ1, 2:

ದಾವಣಗೆರೆಯಲ್ಲಿ ಭಾನುವಾರ ಪ್ರತಿಮಾ ಸಭಾದಿಂದ ಜಾನಪತ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಅವರಿಗೆ ನುಡಿನಮನ ಸಮಾರಂಭದಲ್ಲಿ ಶ್ರೀನಿವಾಸ ಕಪ್ಪಣ್ಣ, ಕುಂ. ವೀರಭದ್ರಪ್ಪ, ಪ್ರೊ.ಎಸ್.ಹಾಲಪ್ಪ ಇತರ ಗಣ್ಯರು ಈಶ್ವರಪ್ಪ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ