ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಧರ್ಮಸ್ಥಳ ಗ್ರಾ.ಪಂ. ಅತೀ ಹೆಚ್ಚು ಪ್ರವಾಸಿಗರನ್ನು ಸಂದರ್ಶಿಸುವ ಕ್ಷೇತ್ರವಾಗಿದ್ದು, ಅಭಿವೃದ್ಧಿ ದೃಷ್ಟಿಯಲ್ಲೂ ಬಹಳಷ್ಟು ಮುಂದಿದೆ. ರಾಜ್ಯಸಭಾ ನಿಧಿಯಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಶೋಕನಗರ ಹಾಗೂ ಮುಳಿಕ್ಕಾರಿಗೆ 2.91 ಕೋಟಿ ರು. ಮೀಸಲಿಟ್ಟಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಪ್ರಕಟಿಸಿದ್ದಾರೆ.ಬುಧವಾರ ಪಂಚಾಯತಿ ವಠಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತಿಯು 8 ವಾರ್ಡ್ ಗಳನ್ನು ಹೊಂದಿದ್ದು 7083 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 1150 ಎಕ್ರೆ ಕೃಷಿ ಭೂಮಿ ಹೊಂದಿದೆ. 2023 ರಲ್ಲಿ ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಏಕಬಳಕೆ ಮುಕ್ತ ಗ್ರಾಮವಾಗಿ ಘೋಷಣೆ ಮಾಡಿದ ಮೂಲಕ ನಿರಂತರ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ಮಾಹಿತಿ ನೀಡಿದರು.ಗ್ರಾಮದಲ್ಲಿ 9818 ಜನಸಂಖ್ಯೆ ಹೊಂದಿದ್ದು, 2858 ಕುಟುಂಬಗಳಿವೆ. 2518 ವಾಸ್ತವ್ಯ ಮನೆಗಳಿದ್ದು 484 ವಾಣಿಜ್ಯ ಕಟ್ಟಡಗಳಿವೆ. ಗ್ರಾ.ಪಂ. ನಿರ್ಮಲ ಗ್ರಾಮ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಸ್ವಚ್ಛತಾ ಹೀ ಸೇವಾ, ಡಾಕ್ಟರ್ ಶಿವರಾಮ ಕಾರಂತ ಪ್ರಶಸ್ತಿ ಪಡೆದಿದೆ. ತೆರಿಗೆ ಸಂಗ್ರಹದಲ್ಲಿ ದ.ಕ.ಜಿಲ್ಲೆಯಲ್ಲಿ ಮೊದಲನೇ ಸ್ಥಾನದಲ್ಲಿದೆ. ಒಟ್ಟು 1.55 ಕೋ.ರೂ. ತೆರಿಗೆಯಲ್ಲಿ 1.06 ಕೋ.ರೂ. ಸಂಗ್ರಹಿಸಲಾಗಿದೆ ಎಂದರು. ಕೇಂದ್ರ ಸರ್ಕಾರದ 15 ನೇ ಹಣಕಾಸು ಯೋಜನೆಯಡಿ 1.18 ಕೋಟಿ ರು. ಬಂದಿದೆ. ಪಂಚಾಯಿತಿ ನಿಧಿಯಡಿ 4.77 ಕೋ.ರೂ. ಕಾಮಗಾರಿ ನಡೆಸಲಾಗಿದೆ. 273 ಮಂದಿ ಒಟ್ಟು ಅರ್ಹ ನಿವೇಶನ ರಹಿತರಿದ್ದಾರೆ. ರಸ್ತೆ ಕಾಂಕ್ರೀಟ್, ತಡೆಗೋಡೆ, ಕಟ್ಟಡ ನಿರ್ಮಾಣ, ನೀರು ನಿರ್ವಹಣೆ, ಮೋರಿ ರಚನೆ ಸಹಿತ 6.75 ಕೋಟಿ ರು. ವ್ಯಯಿಸಲಾಗಿದೆ ಎಂದು ತಿಳಿಸಿದರು.ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತ ಮೃತದೇಹಗಳ ದಫನ ಮಾಡಲಾಗಿದೆ ಎಂದು ದೂರು ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ 2000 ನೇ ಇಸವಿಯಲ್ಲಿ ರುದ್ರಭೂಮಿ ಸ್ಥಾಪಿಸಲಾಗಿದೆ. ಅದಕ್ಕಿಂತ ಮುನ್ನ 1989 ರಿಂದಲೂ ಧರ್ಮಸ್ಥಳದಲ್ಲಿ ಸಿಕ್ಕ ಮೃತದೇಹಗಳ ಬಗ್ಗೆ ಪೊಲೀಸ್ ದಾಖಲೆಗಳಿವೆ. ಕಾನೂನಿನ ರೀತಿಯಲ್ಲೆ ನಾವು ವಾರಸುದಾರರಿಗೆ ನೋಟಿಸ್ ನೀಡಿ ಬಳಿಕವೇ ದಫನ ಮಾಡಲಾಗಿದೆ. ಅವುಗಳ ಅಧಿಕೃತ ಲೆಕ್ಕವಿದೆ ಎಂದು ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಪಿಡಿಒ ದಿನೇಶ್ ಎಂ., ಲೆಕ್ಕ ಸಹಾಯಕಿ ಪ್ರಮಿಳಾ, ಸದಸ್ಯೆ ಸುನಿತಾ, ವಸಂತ, ಹರ್ಷಿತ್ ಜೈನ್, ಹರೀಶ್, ಮುರಳೀದಾಸ್, ಸಿಬಂದಿ ದೇವಿಪ್ರಸಾದ್ ಬೊಳ್ಮ ಇದ್ದರು.