ಕನ್ನಡಪ್ರಭ ವಾರ್ತೆ ಮಳವಳ್ಳಿ
ಗಗನಚುಕ್ಕಿ ಜಲಪಾತೋತ್ಸವ ಆಚರಣೆ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಮೇಯ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಗೂ ಜೆಡಿಎಸ್ ಪಕ್ಕಕ್ಕೆ ಬಂದಿಲ್ಲ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ಬಿ.ರವಿ ಕಂಸಾಗರ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಕೆ.ಅನ್ನದಾನಿ ಅವರು ಗಗನಚುಕ್ಕಿ ಜಲಪಾತೋತ್ಸವಕ್ಕೆ ತಡೆ ನೀಡುವ ಯಾವುದೇ ಉದ್ದೇಶ ಹೊಂದಿಲ್ಲ. ಬದಲಾಗಿ ಸಂಕಷ್ಟದಲ್ಲಿ ಇರುವ ತಾಲೂಕಿನ ರೈತರ ವ್ಯವಸಾಯಕ್ಕೆ ನೀರು ನೀಡಿ ಎಂದಿದ್ದಾರೆ. ಆದರೆ, ಇವರ ಹೇಳಿಕೆ ತಿರುಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಆರೋಪಿಸಿದರು.
ಮಳವಳ್ಳಿ ಕೊನೆಯ ಭಾಗಕ್ಕೆ ಕಾವೇರಿ ನೀರು ತಲುಪದೇ ಇಂದಿಗೂ ಭತ್ತದ ನಾಟಿ ಮುಗಿದಿಲ್ಲ. ತಾಲೂಕಿನ ರೈತರಿಗೆ ನೀರು ಕೊಟ್ಟು ವ್ಯವಸಾಯಕ್ಕೆ ಅನುವು ಮಾಡಿಕೊಡಬೇಕೆಂದು ಮಾಜಿ ಶಾಸಕರು ಒತ್ತಾಯ ಮಾಡಿದ್ದಾರೆ ಅಷ್ಟೆ ಎಂದರು.ಕೆ.ಅನ್ನದಾನಿ ಅವರು ನೀರಿನ ಬಗ್ಗೆ ಪ್ರಶ್ನೆ ಮಾಡಿದ ಮೇಲೆ ಶಾಸಕರು ನಾಲೆಗಳನ್ನು ಪರಿಶೀಲನೆ ನಡೆಸಿದ್ದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ನಾಲೆ ಆಧುನೀಕರಣದ ಹೆಸರಿನಲ್ಲಿ ರೈತರ ಶೋಷಣೆ ಮಾಡಲಾಗುತ್ತಿದೆ ಎಂದರು.
ನಾಲೆಗಳಿಗೆ ಸಮರ್ಪಕ ನೀರು ಕೊಟ್ಟು ಜಲಪಾತೋತ್ಸವ ಮಾಡಿದರೆ ನಮ್ಮ ತಾಕರಾರು ಇರಲ್ಲ. ವಿಧಾನಸಭೆ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪಿಗೆ ನಾವು ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಅದೇ ಜನ ನಮಗೂ ಮತ್ತೆ ಗೆಲುವು ತಂದುಕೊಡಲಿದ್ದಾರೆ ಎನ್ನುವುದನ್ನು ಮರೆಯಬಾರದು ಎಂದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಕೆ.ಅನ್ನದಾನಿ ವಿಶ್ವಾಸದಲ್ಲಿದ್ದು, ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ ನವರಿಗೆ ಚಿಂತನೆ ಬೇಡ ಎಂದು ಕಾಂಗ್ರೆಸ್ ಮುಖಂಡರ ಹೇಳಿಕೆಗೆ ತಿರುಗೇಟು ನೀಡಿದರು.
ಪುರಸಭೆ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ರೈತರಿಗೆ ನೀರು ಕೊಡಲಾಗದ ಶಾಸಕರು ಹಾಗೂ ಕಾಂಗ್ರೆಸ್ ನವರಿಗೆ ಕೆ.ಅನ್ನದಾನಿ ಅವರನ್ನು ಟೀಕಿಸಲು ನೈತಿಕತೆಯೂ ಇಲ್ಲ. ಗಗನಚುಕ್ಕಿ ಜಲಪಾತೋತ್ಸವ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಅದು ಸರ್ಕಾರದ್ದು. ನಾಲೆಗಳಿಗೆ ನೀರು ಹರಿಸದಿದ್ದರೆ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಸಿದರು.ನಾಲಾ ಆಧುನೀಕರಣದ ಜವಾಬ್ದಾರಿ ಹೊತ್ತ ವ್ಯಕ್ತಿ ಮೇಲೆ ಕ್ರಮವಾಗಿಲ್ಲ. ಅಲ್ಲದೇ ರೈತರಿಗೆ ಆಗಿರುವ ನಷ್ಟದ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಬೇಕು. ಸುಮ್ಮನೆ ಕೆ.ಅನ್ನದಾನಿ ಅವರ ಬಗ್ಗೆ ಟೀಕೆ ಮಾಡಬಾರದು. ಪ್ರವಾಸಿ ಮಂದಿರ ಉಳಿದು ಅವರೇನು ಅಕ್ರಮ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆ ನೀಡಲಿ. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಎನ್.ಬಸವರಾಜು(ಜಯಸಿಂಹ), ಮುಖಂಡರಾದ ಬೂವಳ್ಳಿ ಸದಾನಂದ, ಕಾಂತರಾಜು, ಮುಖಂಡರಾದ ಪುಟ್ಟಬುದ್ಧಿ, ಸಿದ್ದಾಚಾರಿ, ಹನುಮಂತು ಇದ್ದರು.