ತರೀಕೆರೆ, ಅಜ್ಜಂಪುರದ 79 ಕೆರೆಗಳಿಗೆ ನೀರು ಹಾಯಿಸುವ ಕಾರ್ಯಕ್ರಮ
ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ ಸುಮಾರು 79 ಕೆರೆಗಳಿಗೆ ನೀರು ಹರಿಸಲಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಸಮಸ್ಯೆ ಬಾರದ ರೀತಿ ಎರಡೂ ತಾಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮತ್ತಿತರ ಅಧಿಕಾರಿಗಳು ಎಲ್ಲ ಮುಂಜಾಗ್ರತಾ ಕ್ರಮ ನಿರ್ವಹಿಸಬೇಕೆಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಸೂಚಿಸಿದ್ದಾರೆ.
ಶುಕ್ರವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳ 79 ಕೆರೆ ಗಳಿಗೆ ನೀರು ಹಾಯಿಸುವ ಮತ್ತು ಡೆಂಘೀ ಜಾಗೃತಿ ಕಾರ್ಯಕ್ರಮ ಹಿನ್ನಲೆಯಲ್ಲಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕು, ಗ್ರಾಪಂ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಜಲ ಸಂಪನ್ಮೂಲ ಸಚಿವರ ಸೂಚನೆಯಂತೆ ಭದ್ರಾ ಮೇಲ್ದಂಡೆ ಯಿಂದ ತರೀಕೆರೆ , ಅಜ್ಜಂಪುರ ತಾಲೂಕಿನ ಕೆರೆಗಳಿಗೆ ನೀರು ಹಾಯಿಸುವಾಗ ಕೆರೆ ಸುತ್ತಮುತ್ತ ಹಾಗೂ ಯಾವುದೇ ರೀತಿ ಅಪಾಯ ಉಂಟಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಎಲ್ಲ ಗ್ರಾಮಗಳ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.
ಡೆಂಘೀ ರೋಗದ ಸಂಪೂರ್ಣ ನಿಯಂತ್ರಣಕ್ಕೆ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಎಲ್ಲ ಗ್ರಾಮ, ಪಟ್ಟಣಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರತಿ ಮನೆಗೆ ತೆರಳಿ ಈ ಬಗ್ಗೆ ಅರಿವು ಮೂಡಿಸಿ, ಮನವರಿಕೆ ಮಾಡಿಕೊಡಬೇಕು. ಲಾರ್ವ ಸಮೀಕ್ಷೆ ನಡೆಸಿ ಲಾರ್ವ ನಾಶ ಪಡಿಸಬೇಕು. ಆ. 6 ರಂದು ಎರಡೂ ತಾಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಆ. 9 ರಂದು ಪಟ್ಟಣ ಪ್ರದೇಶಗಳಲ್ಲಿ ಡೆಂಘೀ ರೋಗ ನಿಯಂತ್ರಣ ಮತ್ತು ಲಾರ್ವ ಸಮೀಕ್ಷೆ ನಡೆಯಬೇಕು. ಐದು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಭಾಗವಹಿಸಿ, ಎರಡೂ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ದೇವೇಂದ್ರಪ್ಪ ಮಾತನಾಡಿ ಯಾವುದೇ ಗ್ರಾಮಗಳಲ್ಲಿ ಕುಡಿವ ನೀರು ಕಲುಷಿತವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
2ಕೆಟಿಆರ್.ಕೆ.1