- ಗ್ರಾಮಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪಕ್ಷ ಸಂಘಟನೆ ಚುರುಕು: ರಾಜ್ಯಾಧ್ಯಕ್ಷ
ಕನ್ನಡಪ್ರಭ ವಾರ್ತೆ ಹರಿಹರ
ಆಗ್ನೇಯ ಪದವೀಧರ ಕ್ಷೇತ್ರಕ್ಕೆ 2026ರಲ್ಲಿ ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಜೆಡಿಯು ಅಭ್ಯರ್ಥಿಯಾಗಿ ಡಾ. ಕೆ.ನಾಗರಾಜ್ ಅವರನ್ನು ಘೋಷಣೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರವು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡಿದೆ. ಈಗಾಗಲೇ ಈ ಎಲ್ಲಾ ಜಿಲ್ಲೆಗಳಲ್ಲಿ ಜೆಡಿಯು ಸಿದ್ಧಾಂತಗಳ ಪ್ರಚಾರ ಆರಂಭವಾಗಿದೆ. ಗ್ರಾಮ, ಹೋಬಳಿ ಮತ್ತು ತಾಲೂಕುಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆ ಚಟುವಟಿಕೆ ಜೋರಾಗಿದೆ ಎಂದರು.
ಈ ಕಾಲದಲ್ಲಿ ರಾಜಕಾರಣದಲ್ಲಿ ಪೊಜಿಷನ್ ಇದೆ, ಆದರೆ ಪವರ್ ಇಲ್ಲ. ಜೆಡಿಯು ಅಂಥ ರಾಜಕಾರಣಿಗಳನ್ನು ಬೆಳೆಸದೇ ಪವರ್ ಇರುವ ವ್ಯಕ್ತಿಗಳನ್ನು ಪೊಜಿಷನ್‌ಗೆ ತರುತ್ತದೆ ಎಂಬುದರ ಬಗ್ಗೆ ಸ್ಪಷ್ಟ ದೃಷ್ಟಿಯಿದೆ. ಈಗಾಗಲೇ ಕೆಆರ್‌ಎಸ್, ಆಮ್ ಆದ್ಮಿ ಪಾರ್ಟಿ, ವಿವಿಧ ಕನ್ನಡಪರ ಮತ್ತು ದಲಿತ ಸಂಘಟನೆಗಳು ಜೆಡಿಯು ಜೊತೆ ಕೈಜೋಡಿಸುತ್ತಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹೋರಾಟಗಳಂತೆ ಇಂದಿನ ಪರಿಸ್ಥಿತಿಗೂ ಆಂದೋಲನಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಗಂಗೂರ್, ಮುಖಂಡ ಕೆ. ರಂಗನಾಥ್, ದಾವಣಗೆರೆ ಜಿಲ್ಲಾ ಅಧ್ಯಕ್ಷ ಜಯಣ್ಣ, ನೀಲಗಿರಿಯಪ್ಪ, ಶಿವಯೋಗಿ, ಶ್ರೀಶೈಲ ಗೌಡ ಇತರರು ಉಪಸ್ಥಿತರಿದ್ದರು.
-03ಎಚ್‌ಆರ್‌ಆರ್03: