ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ

KannadaprabhaNewsNetwork |  
Published : Nov 16, 2026, 02:15 AM IST
ಡಾ.ಕೆ.ರುದ್ರಪ್ಪ  | Kannada Prabha

ಸಾರಾಂಶ

ಸಭೆಯು ಸರ್ವಾಧ್ಯಕ್ಷರನ್ನಾಗಿ ಡಾ. ಕೆ.ರುದ್ರಪ್ಪ ಆಯ್ಕೆಗೆ ಒಪ್ಪಿಗೆ ಸೂಚಿಸಿ ಸರ್ವಾನುಮತದಿಂದ ಅಂಗೀಕರಿಸಿತು

ಹೂವಿನಹಡಗಲಿ: 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ನ. 22 ರಂದು ರಂಗಭಾರತಿ ಕಲಾ ಮಂದಿರದಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ, ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿವೃತ್ತ ಪ್ರಾಚಾರ್ಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಅಧ್ಯಕ್ಷರಾಗಿ, ಕನ್ನಡ ಸೇವೆಗೈದ ಡಾ. ರುದ್ರಪ್ಪ ಕರಿಶೆಟ್ಟಿ ಆಯ್ಕೆಯಾಗಿದ್ದಾರೆ.

ಕಸಾಪ ತಾಲೂಕು ಕಾರ್ಯಕಾರಿ ಸಮಿತಿ, ಮಾರ್ಗದರ್ಶಕ ಮಂಡಳಿ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಕನ್ನಡ ಸಾಹಿತ್ಯ, ಶಿಕ್ಷಣ, ಜಾನಪದ, ಕನ್ನಡ ಪರ ಸಂಘಟನೆ, ಬಯಲಾಟ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಡಾ. ಕೆ.ರುದ್ರಪ್ಪ ಹೆಸರನ್ನು ಕಸಾಪ ಮಾಜಿ ಅಧ್ಯಕ್ಷ ಎಚ್.ಜಿ. ಪಾಟೀಲ ಸೂಚಿಸಿದರೆ, ಮತ್ತೋರ್ವ ಮಾಜಿ ಅಧ್ಯಕ್ಷ ಡಾ. ಎಂ.ಪಿ.ಎಂ. ಮಂಜುನಾಥ ಹಾಲಸ್ವಾಮಿಜಿ ಅನುಮೋದಿಸಿದರು. ನಂತರ ಸಭೆಯು ಸರ್ವಾಧ್ಯಕ್ಷರನ್ನಾಗಿ ಡಾ. ಕೆ.ರುದ್ರಪ್ಪ ಆಯ್ಕೆಗೆ ಒಪ್ಪಿಗೆ ಸೂಚಿಸಿ ಸರ್ವಾನುಮತದಿಂದ ಅಂಗೀಕರಿಸಿತು. ಸಭೆಯ ಅಧ್ಯಕ್ಷತೆ ತಾಲೂಕು ಕಸಾಪ ಘಟಕದ ಅಧ್ಯಕ್ಷ ಟಿ. ವೀರೇಂದ್ರ ಪಾಟೀಲ್ ವಹಿಸಿದ್ದರು.

ಪಟ್ಟಣದ ರಂಗಭಾರತಿ ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸರಳ, ಅರ್ಥಪೂರ್ಣವಾಗಿ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪೂಜ್ಯರ, ಜನಪ್ರತಿನಿಧಿಗಳ, ಸರ್ವ ಸದಸ್ಯರ, ಸಂಘಸಂಸ್ಥೆಗಳ, ದಾನಿಗಳ ಸಹಕಾರ, ಸಹಾಯದೊಂದಿಗೆ ಆಯೋಜಿಸಲು ಚರ್ಚಿಸಲಾಯಿತು.

ಸಮ್ಮೇಳನ ಅಧ್ಯಕ್ಷರ ಕಿರು ಪರಿಚಯ: ಡಾ. ಕರಿಶೆಟ್ಟಿ ರುದ್ರಪ್ಪ 02-06-1956 ರಂದು ತಾಲೂಕಿನ ಕೊಂಬಳಿ ಗ್ರಾಮದ ಕೆ.ಸಿದ್ದಪ್ಪ, ಕಾಳಮ್ಮ ದಂಪತಿಯ ಪುತ್ರರಾಗಿ ಜನಿಸಿದ್ದಾರೆ. ಎಂ.ಎ., ಎಂ.ಇಡಿ. ಪದವೀಧರರಾದ ಇವರು ಮ್ಯಾಸ ನಾಯಕರು : ಒಂದು ಜನಾಂಗೀಯ ಅಧ್ಯಯನ ಕುರಿತು ಪಿಎಚ್ ಡಿ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ಹೂವಿನಹಡಗಲಿ ಜಿಬಿಆರ್ ಕಾಲೇಜು, ಹೊಸಪೇಟೆಯ ವಿಜಯನಗರ ಕಾಲೇಜು, ಹರಪನಹಳ್ಳಿಯ ಎಡಿಬಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ,ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. 2016 ರಲ್ಲಿ ಅಧ್ಯಾಪನಾ ವೃತ್ತಿಯಿಂದ ನಿವೃತ್ತರಾಗಿದ್ದಾರೆ.

ಪಟ್ಟಣದಲ್ಲಿ ಡಾ. ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು, ರಂಗ ಚೈತನ್ಯ ಬಯಲಾಟ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ತೆರೆದು ಯುವ ಪೀಳಿಗೆಗೆ ಬಯಲಾಟ ತರಬೇತಿ ನೀಡುವ ಮೂಲಕ, ನಶಿಸುತ್ತಿರುವ ಬಯಲಾಟ ಕಲೆ ಉಳಿಸಿ ಬೆಳೆಸಲು ಶ್ರಮಿಸುತ್ತಿದ್ದಾರೆ. ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ಇವರ ತಂಡದಿಂದ ದೊಡ್ಡಾಟ ಕಲೆ ಪ್ರದರ್ಶಿಸಲಾಗಿದೆ. ಇವರು ತರಬೇತಿಗೊಳಿಸಿದ ವಿದ್ಯಾರ್ಥಿಗಳು ಪ್ರಸಿದ್ಧ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವಗಳಲ್ಲಿ ಬಯಲಾಟ ಕಲೆ ಪ್ರಸ್ತುತಪಡಿಸಿದ್ದಾರೆ.

ಪ್ರಕಟಿತ ಕೃತಿಗಳು: ಬಳ್ಳಾರಿ ಜಿಲ್ಲಾ ಜನಪದ ಸಾಹಿತ್ಯ,ಮ್ಯಾಸ ನಾಯಕರು: ಒಂದು ಜನಾಂಗೀಯ ಅಧ್ಯಯನ, ಕಾವ್ಯ ಸೌರಭ (ಬಿ.ಎಸ್ಸಿ ಪಠ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ), ವಿಜಯ ಪಥ ಡಿ.ದುರ್ಗದಾಸ (ಜೀವನ ಚರಿತ್ರೆ), ಚಿಂತನಾ ಚಿಂತಕರು, ಕನ್ನಡ ಮಂಥನ (ಬಿ.ಕಾಂ. ಪಠ್ಯ ಪುಸ್ತಕ ದಾವಣಗೆರೆ ವಿಶ್ವವಿದ್ಯಾಲಯ), ಬಯಲಾಟ ಸಂಕ್ಷಿಪ್ತ ಚರಿತ್ರೆ ಮತ್ತು ಪದಗಳು ಬಯಲಾಟ ಸಂಕ್ಷಿಪ್ತ ಚರಿತ್ರೆ ಮತ್ತು ದೊಡ್ಡಾಟ ಶ್ರೀದೇವಿ ಮಹಾತ್ಮೆ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. 25ಕ್ಕೂ ಹೆಚ್ಚು ಇವರ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ.

ಕನ್ನಡಪ್ರಭ ಮತ್ತು ಏಷಿಯಾನೆಟ್‌ ಸುವರ್ಣ ನ್ಯೂಸ್‌ ನೀಡುವ ಸುವರ್ಣ ಕನ್ನಡಿಗ ಪ್ರಶಸ್ತಿಗೆ ಭಾಜಿನರಾಗಿದ್ದಾರೆ.

ಮುರಾಘಾಶ್ರೀ ಮಠದಿಂದ ಶಿಕ್ಷಕ ರತ್ನ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1995 ರಲ್ಲಿ ರಾಜ್ಯ ಮಟ್ಟದ ಜಾನಪದ ಸಮ್ಮೇಳನ, 1999ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ನಾಟಕೋತ್ಸವ, ಸಾಹಿತ್ಯ ಸಂವಾದ ಸಂಘಟಿಸುವಲ್ಲಿ ಶ್ರಮಿಸಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಮಂಡಳಿ ಸದಸ್ಯರಾಗಿ, ದಾವಣಗೆರೆ ವಿಶ್ವವಿದ್ಯಾಲಯ ಕನ್ನಡ ಪರೀಕ್ಷಾ ಮಂಡಳಿ ಸದಸ್ಯರಾಗಿ 2019ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ನಾಡು, ನುಡಿಗಾಗಿ ಸೇವೆ ಸಲ್ಲಿಸಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಕೆ.ರುದ್ರಪ್ಪ ಅವರನ್ನು ಶಿಕ್ಷಣ ಪ್ರೇಮಿಗಳು, ವಿದ್ವಾಂಸರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕದಳೀಪ್ರಿಯ ದೇವರಿಗೆ ಕದಳೀಮೇಳ ಆಮಂತ್ರಣ ಸಮರ್ಪಣೆ
ರಂಗ ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ: ಜೀವನ್‌ರಾಮ್ ಸುಳ್ಯ