ಕಲಾಸೇವೆಗಾಗಿಯೇ ಹುಟ್ಟಿಕೊಂಡಿರುವ ಲಾವಣ್ಯ ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ರಂಗ ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಲಾವಣ್ಯದ ಪಾತ್ರ ಗಣನೀಯವಾದುದು. ಲಾವಣ್ಯದಿಂದಾಗಿ ಇಡೀ ರಾಜ್ಯದಲ್ಲಿ ಬೈಂದೂರು ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ ಎಂದು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಜೀವನ್ರಾಮ್ ಸುಳ್ಯ ಹೇಳಿದರು.
ಬೈಂದೂರು : ಕಲಾಸೇವೆಗಾಗಿಯೇ ಹುಟ್ಟಿಕೊಂಡಿರುವ ಲಾವಣ್ಯ ಸಂಸ್ಥೆಯು ಸುವರ್ಣ ಮಹೋತ್ಸವ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ರಂಗ ಚಟುವಟಿಕೆಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಲಾವಣ್ಯದ ಪಾತ್ರ ಗಣನೀಯವಾದುದು. ಲಾವಣ್ಯದಿಂದಾಗಿ ಇಡೀ ರಾಜ್ಯದಲ್ಲಿ ಬೈಂದೂರು ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ ಎಂದು ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಜೀವನ್ರಾಮ್ ಸುಳ್ಯ ಹೇಳಿದರು.
ಇಲ್ಲಿನ ಶ್ರೀ ಶಾರದಾ ವೇದಿಕೆಯಲ್ಲಿ ಶನಿವಾರ ಲಾವಣ್ಯದ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಲಾವಣ್ಯ ಸಂಸ್ಥೆಯು ಕಳೆದ 50 ವರ್ಷಗಳಿಂದ ಅನೇಕ ಕಲಾವಿದರನ್ನು ಹುಟ್ಟು ಹಾಕಿರುವುದಲ್ಲದೆ ಉತ್ತಮ ಪ್ರೇಕ್ಷಕ ವರ್ಗವನ್ನು ಸೃಷ್ಟಿ ಮಾಡಿದೆ ಎಂದು ಶ್ಲಾಘಿಸಿದರು.
ಲಾವಣ್ಯದ ಅಧ್ಯಕ್ಷ ಬಿ ಗಣೇಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು, ಶ್ರೀ ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಸ್ಥಾಪಕ ಸದಸ್ಯರಾದ ಅನಿಲ್ ಕುಮಾರ್, ಉಮೇಶ್ ಕುಮಾರ್, ಲಾವಣ್ಯದ ಪೂರ್ವಾಧ್ಯಕ್ಷರುಗಳಾದ ರಾಮ ಟೈಲರ್, ನರಸಿಂಹ ಬಿ. ನಾಯಕ್ ಇದ್ದರು.ಸಂಘದ ವ್ಯವಸ್ಥಾಪಕ ಗಣಪತಿ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸುಬ್ರಹ್ಮಣ್ಯ ಜಿ. ಉಪ್ಪುಂದ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹೆಚ್. ಉದಯ ಆಚಾರ್ಯ ವಂದಿಸಿದರು ಉಪನ್ಯಾಸಕಿ ಮೀನಾಕ್ಷಿ ನಿರೂಪಿಸಿದರು. ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆ ಇದರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ವಿದ್ಯಾರ್ಥಿಗಳಿಂದ ಚಂದ್ರಶೇಖರ್ ಕಂಬಾರ್ ರಚನೆಯ ಜೀವನ್ ರಾಮ್ ಸುಳ್ಯ ನಿರ್ದೇಶನಾದ ಮಹಾಮಾಯಿ ನಾಟಕ ಪ್ರದರ್ಶನಗೊಂಡಿತು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಲಾವಣ್ಯ ಸಂಸ್ಥೆ ಬೈಂದೂರಿನ ಇತಿಹಾಸ, ಭಾಗ್ಯ ಮತ್ತು ಪ್ರತಿಷ್ಠೆಯಾಗಿದೆ. ಲಾವಣ್ಯದ ಸಾಂಸ್ಕೃತಿಕ ಚಟುವಟಿಕೆಗಳ ವೀಕ್ಷಣೆಯಿಂದಾಗಿ ಇಲ್ಲಿನ ಜನರು ಸಂಸ್ಕಾರಯುತರಾಗಿದ್ದಾರೆ ಎಂದರು. ಸುವರ್ಣ ಮಹೋತ್ಸವ ಚಾಲನೆ ಪ್ರಯುಕ್ತ ಲಾವಣ್ಯವನ್ನು ಬೆಳೆಸಿ ಹರಸಿದ 50 ಹಿರಿಯ ಕಲಾಪೋಷಕರಿಂದ 50 ಹಣತೆಯಲ್ಲಿ ಜ್ಯೋತಿಯನ್ನು ಬೆಳಗಿಸಲಾಯಿತು.