ಡಾ,ಕೆ.ಸುಧಾಕರ್ ಗೆಲುವು: ದಳ-ಕಮಲ ವಿಜಯೋತ್ಸವ

KannadaprabhaNewsNetwork |  
Published : Jun 07, 2024, 12:15 AM IST
ಸಿಕೆಬಿ-1 ಪಟಾಕಿ ಸಿಡಿಸಿ ಸಂಭ್ರಮಿಸುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಮುಖಂಡರುಸಿಕೆಬಿ-2 ಜೈಕಾರ ಹಾಕುತ್ತಿರುವ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು | Kannada Prabha

ಸಾರಾಂಶ

ಚುನಾವಣೆ ವೇಳೆ ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಸೇರಿ, ಇಡೀ ಕ್ಷೇತ್ರಾದ್ಯಂತ ಸಂಚರಿಸಿ, ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದು, ಅದರ ಪ್ರತಿಫಲ ಇಂದು ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಡಾ ಕೆ.ಸುಧಾಕರ್ ಭರ್ಜರಿ ಗೆಲುವು ಸಾಧಿಸಿದ್ದು, ಗುರುವಾರ ನಗರದ ಬಿಬಿ ರಸ್ತೆಯಲ್ಲಿರುವ ಜೆಡಿಎಸ್ ಜಿಲ್ಲಾ ಕಚೇರಿಯ ಮುಂದೆ ಜೆಡಿಎಸ್ ಜಿಲ್ಲಾಧ್ಯಕ್ಷ, ಮುಕ್ತ ಎಂಎಲ್ ಎ ಮುನಿಯಪ್ಪ ಅವರ ನೇತೃತ್ವದಲ್ಲಿ ಬಿಜೆಪಿ - ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ವಿಜಯೋತ್ಸವದಲ್ಲಿ ಪಾಲ್ಗೊಂಡು ಪರಸ್ಪರ ಸಿಹಿ ಹಂಚಿಕೊಂಡರು.

ಡಾ.ಕೆ.ಸುಧಾಕರ್ ರವರ ಗೆಲುವಿಗೆ ಶ್ರಮಿಸಿದ ಎರಡೂ ಪಕ್ಷಗಳ ಮುಖಂಡರಿಗೆ ಧನ್ಯವಾದ ತಿಳಿಸಿದ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಚುನಾವಣೆ ವೇಳೆ ಎರಡೂ ಪಕ್ಷಗಳ ಮುಖಂಡರು ಒಟ್ಟಾಗಿ ಸೇರಿ, ಇಡೀ ಕ್ಷೇತ್ರಾದ್ಯಂತ ಸಂಚರಿಸಿ, ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದು, ಅದರ ಪ್ರತಿಫಲ ಇಂದು ಸಿಕ್ಕಿದೆ. ಒಂದು ಲಕ್ಷ, ಅರವತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವಾಗಿದ್ದು, ನಮ್ಮ ಪ್ರತಿಸ್ಪರ್ಧಿ ಮುಖಂಡರ ಉಡಾಫೆ ಮಾತುಗಳಿಗೆ ಸೂಕ್ತ ಉತ್ತರ ಸಿಕ್ಕಿದೆ ಎಂದರು.

ಡಾ.ಕೆ.ಸುಧಾಕರ್ ತಮ್ಮ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ ಹಿಂದಿನ ಚುನಾವಣೆಯಲ್ಲಿ ಅವರು ಅನಿರೀಕ್ಷಿತ ಸೋಲು ಅನುಭವಿಸಿದರು, ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆದು ಜಯಭೇರಿ ಸಾಧಿಸಿದ್ದು, ಅಭಿವೃದ್ಧಿ ಪರ ಇರುವವರನ್ನು ಜನರು ಯಾವತ್ತೂ ಮರೆಯಲ್ಲ ಎಂಬುದು ಸುಧಾಕರ್ ಗೆಲುವಿನೊಂದಿಗೆ ಸಾಬೀತಾಗಿದೆ ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಶಾಸಕ ಪ್ರದೀಪ್ ಈಶ್ವರ್ ಅವರು ನುಡಿದಂತೆ ನಡೆಯುವ ಜನಪ್ರತಿನಿಧಿಯಾಗಿದ್ದು, ಈ ನಿಟ್ಟಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿಯೇ ನೀಡಿದ್ದ ಬಹಿರಂಗ ಹೇಳಿಕೆಯಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ನುಡಿದರು.

ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಅವರು ಒಂದು ಮತವನ್ನು ಹೆಚ್ಚಾಗಿ ಪಡೆದರೂ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಲಾಗುವುದು ಎಂದು ಸಾರ್ವಜನಿಕವಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಅದರಂತೆ ರಾಜಿನಾಮೆ ನೀಡಲಿರುವರು. ಅಲ್ಲದೇ ಚುನಾವಣೆ ಮುಗಿದ ಬಳಿಕ ತಮಗೆ ಈ ಕುರಿತು ರಾಜ್ಯದ ವಿವಿಧೆಡೆ ಈಶ್ವರ್ ಅವರು ಯಾವಾಗ ರಾಜೀನಾಮೆ ನೀಡುವರೆಂದು ಕೇಳುತ್ತಿದ್ದಾರೆ ಎಂದು ಹೇಳಿದರು.

ಬಲಿಜರಿಗೆ ಅನ್ಯಾಯ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಿದ್ದ ಬಲಿಜ ಅಭಿವೃದ್ಧಿ ನಿಗಮವನ್ನು ಪ್ರಸ್ತುತದ ರಾಜ್ಯ ಕಾಂಗ್ರೆಸ್ ಸರ್ಕಾರವು ಸ್ಥಗಿತಗೊಳಿಸಿ, ಬಲಿಜ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಸೇರಿ ಯಾವುದೇ ಶಾಸಕರು ಧ್ವನಿಯೆತ್ತದಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಮಂತ್ರಿಗಿರಿಗಾಗಿ ಒತ್ತಾಯ:

ಜೆಡಿಎಸ್ ಕಾರ್ಯದಕ್ಷ ಕೆ.ಆರ್.ರೆಡ್ಡಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಎನ್ ಡಿ ಎ ಅಭ್ಯರ್ಥಿಯಾಗಿ ಡಾ.ಕೆ.ಸುಧಾಕರ್ ಸ್ಫರ್ಧಿಸಿ, ಜಯಭೇರಿ ಬಾರಿಸಿದ್ದಾರೆ. ಡಾ.ಕೆ.ಸುಧಾಕರ್ ಗೆ ಆಡಳಿತದ ಅನುಭವವಿರುವುದರಿಂದ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದರು.

ಡಾ.ಕೆ.ಸುಧಾಕರ್ ರವರ ತಂದೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ತಾಲೂಕು ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಆರ್.ಮಟಮಪ್ಪ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರಭಾ ನಾರಾಯಣಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಗೌರಿಬಿದನೂರು ಜೆಡಿಎಸ್ ಮುಖಂಡರಾದ ನರಸಿಂಹಮೂರ್ತಿ, ರೈಲ್ವೇ ಬೇಗ್, ಬಾಗೇಪಲ್ಲಿಯ ನರಸಿಂಹನಾಯ್ಡು, ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ