ಕನ್ನಡಪ್ರಭ ವಾರ್ತೆ ಕಲಬುರಗಿ
ಏತನ್ಮದ್ಯೆ ಸೋಮವಾರ ಕಲಬುರಗಿ ಪ್ರವಾಸದಲ್ಲಿರುವ ಡಾ. ಖರ್ಗೆಯವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ತಂದೆಯವರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರು ಮುಂದಿನ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಿದ್ದಾರೆಂದು ಉತ್ತರಿಸುವ ಮೂಲಕ ರಾಜಕೀಯವಾಗಿ ಗಮನ ಸೆಳೆದಿದ್ದಾರೆ.
ರಾಜ್ಯಸಭಾ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಮಗೆ ಸಿಎಂ ಕುರ್ಚಿ ಕೈತಪ್ಪಿದ್ದಕ್ಕೆ ವಿಷಾದಿಸಿಲ್ಲ, ಖರ್ಗೆಯವರು ಆಡಿರುವ ಮಾತಿನ ಸಂಪೂರ್ಣ ವಿಡಿಯೋ ನೋಡಿದಾಗ ಮಾತ್ರ ಅವರ ಮಾತಿನ ಅರ್ಥ ಆಗುತ್ತದೆ. ಪಕ್ಷಕ್ಕಾಗಿ ದುಡಿದಿದ್ದಾರೆ. ಕಲಬುರಗಿ, ಬೀದರ್‌ನ ಹಳ್ಳಿಯಿಂದ ದಿಲ್ಲಿಯವರೆಗೆ ಅವರು ಮುಟ್ಟಿದ್ದಾರೆ ಎಂದರು.ಅವರ ಮುಂದಿನ ರಾಜಕೀಯ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವನ್ನು ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡಾ ಗೌರವಿಸುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಅನುದಾನ ಬೇರೆಡೆ ತಿರುಗಿಸಿದ್ದರೆ ಬಿಜೆಪಿ ದಾಖಲೆ ನೀಡಲಿ:
ಎಸ್‌ಸಿಪಿ, ಟಿಎಸ್ಪಿ ಅನುದಾನ ಬೇರೆ ಉದ್ದೇಶಗಳಿಗೆ ಬಳಕೆ ಆಗಿದ್ದರೆ ಆ ಬಗ್ಗೆ ಬಿಜೆಪಿ ದಾಖಲೆ ನೀಡಲಿ. ಹಾಗೆ ಆಗಿದ್ದರೆ ಕ್ರಮ ಜರುಗಿಸಲಾಗುವುದು. ಬಿಜೆಪಿ ನಾಯಕರು ಸುಮ್ಮನೆ ಆರೋಪ ಮಾಡುವುದು ಬಿಟ್ಟು ಸರ್ಕಾರಕ್ಕೆ ದಾಖಲೆ ಒದಗಿಸಲಿ. ಬಿಜೆಪಿ ಆರೋಪಗಳಿಗೆ ಸದನದಲ್ಲೇ ಉತ್ತರ ನೀಡಲಾಗಿದೆ ಎಂದರು.ರಣದೀಪ್ ಸುರ್ಜೆವಾಲ ಅವರು ಸಚಿವರ ಸಭೆ ಕರೆದಿರುವುದಕ್ಕೆ ಬಿ.ಎಲ್. ಸಂತೋಷ ಆಕ್ಷೇಪ ವ್ಯಕ್ತಪಡಿಸಿರುವುದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸುರ್ಜೆವಾಲ ಬದಲಿಗೆ ದತ್ತಾತ್ರೇಯ ಹೊಸಬಾಳೆ ಅಥವಾ ಸಂತೋಷ್ ಸಭೆ ತೆಗೆದುಕೊಳ್ಳಬೇಕೇ ? ಎಂದು ಪ್ರಶ್ನಿಸಿದರು.
ಮನ್ ಕೀ ಬಾತ್ ಕೇಳಿ ಕೇಳಿ ಸಾಕಾಗಿದೆ. ಏನಾದರೂ ಕೊಡುಗೆ ಕೊಟ್ಟು ಮೋದಿ ಮಾತನಾಡಲಿ. ಈ ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದ್ದರು, ಏನಾದರೂ ಕೊಡುಗೆ ಕೊಟ್ಟಿದ್ದಾರೆಯೇ? ಎಂದು ಕುಟುಕಿದರು.ಕೇಂದ್ರೀಯ ವಿವಿಗಳು ಆರ್ ಎಸ್ ಎಸ್ ಶಾಖೆಗಳಾಗಿವೆ:
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂದಿಸಿದ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ. ಖರ್ಗೆ ಸಾಹೇಬರು ಈ ಭಾಗಕ್ಕೆ ಅನುಕೂಲ ಆಗಲಿ ಎಂದು ಜಿಲ್ಲೆಗೆ ಕೇಂದ್ರೀಯ ವಿವಿ ತಂದರು. ಆದರೆ, ಅದು ಆರ್ ಎಸ್ ಎಸ್ ಶಾಖೆ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ ಎಂದು ಟೀಕಿಸಿದರು.ಚುನಾವಣೆಯಲ್ಲಿ ಅಕ್ರಮ:
ಬಿಜೆಪಿ ಪಕ್ಷ, ಚುನಾವಣೆ ಆಯೋಗವನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿದ ಖರ್ಗೆ, ಕರ್ನಾಟಕ ಚುನಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗೆ ಮಹಾರಾಷ್ಟ್ರದಲ್ಲಿಯೂ ಆಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಇಂದಿನಿಂದ ಸಿಂದೂರ ಬಗ್ಗೆ ಚರ್ಚೆ ಆಗುತ್ತದೆ. ನಂತರ ಚುನಾವಣೆ ಅಕ್ರಮದ ಬಗ್ಗೆ ಎಲ್ಲವೂ ದಾಖಲೆ ಸಮೇತ ಮಾತನಾಡುತ್ತೇವೆ ಎಂದರು.ಬಾಡಿಗೆ ಭಾಷಣಕಾರರ ಬಗ್ಗೆ ಏನು ಹೇಳಲಿ?
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಯೋಗ್ಯ ಪದ ಬಳಸಿದ್ದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಮೇಲೆ ದಾಖಲಾದ ಎಫ್ ಐ ಆರ್ ಅನ್ನು ಸುಪ್ರೀಂ ಕೊರ್ಟ್ ರದ್ದು ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಡಿಗೆ ಭಾಷಣಕಾರರ ಬಗ್ಗೆಯಾಗಲೀ, ಅವರ ಬಾಸ್ ಗಳ ಬಗ್ಗೆಯಾಗಲೀ ನಾನೇನು ಉತ್ತರಿಸಲಿ ?. ನಾನು ಯಾವುದಾದರೂ ಎಫ್ ಐ ಆರ್ ಹಾಕಿದ್ದರೆ ತೋರಿಸಲಿ. ಯಾರೋ ಒಬ್ಬರು ಅಲ್ಲಿನ ಸ್ಥಳೀಯ ನಾಯಕರು ಹಾಕಿದ್ದರೆ ಅದಕ್ಕೆ ನಾನೇನು ಹೇಳಲಿ? ಎಂದು ಮರುತ್ತರ ನೀಡಿದರು.
ತಮ್ಮ ಬಗ್ಗೆ ಬಿಜೆಪಿ ನಾಯಕರು ಅವಹೇಳನಕಾರಿ ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿದ ಖರ್ಗೆ, ನನ್ನ ಬಗ್ಗೆ ಸದನದಲ್ಲೇ ಬಿಜೆಪಿಯವರು ಅವಹೇಳನ ರೀತಿಯಲ್ಲಿ ಮಾತನಾಡಿದ್ದಾರೆ. ನನ್ನ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಅಂದರೆ ಅವರಿಗೆ ಆರ್ ಎಸ್ ಎಸ್ ನಲ್ಲಿ ಬೆಲೆ ಇರುವುದಿಲ್ಲ, ಅವರಿಗೆ ಮುಂಬಡ್ತಿ ಸಿಗುವುದಿಲ್ಲ. ಬಿಜೆಪಿ ನಾಯಕರು ಬಹಿರಂಗ ವೇದಿಕೆಗೆ ಬರಲಿ ನಾನೊಬ್ಬನೇ ಸಾಕು ಅವರು ಏನೇನೂ ಹೇಳಿದ್ದಾರೆ ಎಲ್ಲಾ ವಿವರವಾಗಿ ಹೇಳುತ್ತೇನೆ ಎಂದು ಸವಾಲ್ ಹಾಕಿದರು.ಇಂದಿರಾ ಮಾಡಿದ ಅರ್ಧ ಕೆಲಸವನ್ನಾದರೂ ಮೋದಿ ಮಾಡಲಿ
ಮೋದಿ ಅವರು ಹೆಚ್ಚಿನ ಅವಧಿಯಲ್ಲಿ ಪ್ರಧಾನಿಯಾಗುವ ಮೂಲಕ ಇಂದಿರಾಗಾಂಧಿ ಅವರ ದಾಖಲೆ ಮುರಿದಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದರ ಸಚಿವರು, ಇಂದಿರಾಗಾಂಧಿ ಮಾಡಿದ ಕೆಲಸದಲ್ಲಿ ಅರ್ಧದಷ್ಟಾದರೂ ಕೆಲಸವನ್ನು ಮೋದಿ ಮಾಡಿ ತೋರಿಸಲಿ. ಇಂದಿರಾಗಾಂಧಿ ಬ್ಯಾಂಕ್ ಗಳ ರಾಷ್ಟ್ರೀಕರಣ, ಭೂಮಿ ಉಳುಮೆಗೆ ತಂದ ಸುಧಾರಣೆ ಹಾಗೂ ಪಾಕಿಸ್ತಾನ ವನ್ನು ಎರಡು ಭಾಗ ಮಾಡಿದ್ದು ಸೇರಿದಂತೆ ಹಲವಾರು ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಇಂದಿರಾಗಾಂಧಿ ಅವರು 44 ಬಾರಿ ಪತ್ರಿಕಾಗೋಷ್ಠಿ ಮಾಡಿದ್ದಾರೆ ಇವರೇನು ಮಾಡಿದ್ದಾರೆ? ಮೊನ್ನೆ ರಾಹುಲ್ ಗಾಂಧಿ ಹೇಳಿದಂತೆ ಮೋದಿಯವರ ಬಗ್ಗೆ ಕೆಲ ಮೀಡಿಯಾಗಳು ಹೈಪ್ ಮಾಡುತ್ತಿದ್ದಾರೆ ಅಷ್ಟೇ, ಎಂದು ವಾಗ್ದಾಳಿ ನಡೆಸಿದರು.