ಭಾರೀಮಳೆಗೆ ಶಿಥಿಲಗೊಂಡ 3 ಸೇತುವೆಗಳ ವೀಕ್ಷಿಸಿದ ಡಾ.ಕೆ.ಪಿ.ಅಂಶುಮಂತ್

KannadaprabhaNewsNetwork |  
Published : Jul 18, 2024, 01:31 AM IST
ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮದ ಶಿಥಿಲಗೊಂಡ 3 ಸೇತುವೆಯನ್ನು   ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ದಿ  ಪ್ರಾಧೀಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮ  ಪಂಚಾಯಿತಿ ಅದ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನೀಲ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಕಡಹಿನಬೈಲು ಗ್ರಾಮದ 3 ಸೇತುವೆಗಳು ಹಾಳಾಗಿರುವುದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಡಹಿನಬೈಲು ಗ್ರಾಮದ 3 ಸೇತುವೆಗಳು ಹಾಳಾಗಿರುವುದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಶಾಶ್ವತ ಪರಿಹಾರ ಮಾಡಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಭರವಸೆ ನೀಡಿದರು.

ಬುಧವಾರ ತಾಲೂಕಿನ ಶೆಟ್ಟಿಕೊಪ್ಪ ಸಮೀಪದ ಕಡಹಿನಬೈಲು ಗ್ರಾಮದಲ್ಲಿ ಬರುವ ಶೆಟ್ಟಿಕೊಪ್ಪ- ಆಲಂದೂರು ಸಂಪರ್ಕಿಸುವ ಸೇತುವೆ, ಮುಖ್ಯ ರಸ್ತೆಯಿಂದ ಹಾರೇಕೊಪ್ಪ, ಗಾಂಧಿ ಗ್ರಾಮ ಸಂಪರ್ಕಿಸುವ ಸೇತುವೆ ಹಾಗೂ ಮುಖ್ಯ ರಸ್ತೆಯಿಂದ ನೇರ್ಲೆಕೊಪ್ಪ, ಮಾವಿನ ಕೆರೆ ಸಂಪರ್ಕ ರಸ್ತೆಯಲ್ಲಿ ಬರುವ ಸೇತುವೆಗಳ ವೀಕ್ಷಿಸಿದರು.

ಕಳೆದ 2 ದಿನದಿಂದ ಸುರಿಯುತ್ತಿರುವ ಭಾರೀ ಮಳೆಗೆ ಈ ಸೇತುವೆಗೆ ಹಾನಿಯಾಗಿದೆ. ಸೇತುವೆ ಮೇಲೆ ನೀರು ಹೋಗಿದ್ದ ರಿಂದ ಜನರ ಓಡಾಡಕ್ಕೂ ತೊಂದರೆಯಾಯಿತು.ಶಾಲಾ ವಾಹನ, ಶಾಲೆ ಮಕ್ಕಳು ಓಡಾಡುವುದಕ್ಕೂ ಕಷ್ಟವಾಗಿತ್ತು. ಶಾಸಕ ಟಿ.ಡಿ.ರಾಜೇಗೌಡರು ಕಳೆದ ವರ್ಷ ಭೇಟಿ ನೀಡಿ ಸಭೆ ನಡೆಸಿದ್ದರು. ಬಹಳ ತುರ್ತಾಗಿ ಸೇತುವೆಗೆ ಕಾಯಕಲ್ಪ ಆಗಬೇಕಾಗಿದೆ. ನಾನು ಸಂಬಂಧ ಪಟ್ಟ ಎಂಜಿನಿಯರ್, ಜಿಲ್ಲಾಡಳಿತ ಹಾಗೂ ಶಾಸಕರೊಂದಿಗೆ ಚರ್ಚೆ ನಡೆಸುತ್ತೇನೆ. ಗ್ರಾಮ ಪಂಚಾಯಿತಿಯವರು ಸಭೆ ನಡೆಸಿ ಸೇತುವೆ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು. ಮುಖ್ಯವಾಗಿ ಸೇತುವೆ ಎರಡೂ ಬದಿ ಕೈಪಿಡಿ ಹಾಕಿ, ಸೇತುವೆಯನ್ನು ಎತ್ತರಿಸಿ, ದೊಡ್ಡ ಪೈಪ್ ಗಳನ್ನು ಹಾಕಬೇಕಾಗಿದೆ. ಸರ್ಕಾರದ ಮಟ್ಟದಲ್ಲೂ ಚರ್ಚೆ ನಡೆಸಲಿದ್ದು ಮುಂದಿನ 1 ವರ್ಷದ ಒಳಗೆ ಈ ಮೂರೂ ಸೇತುವೆಗೂ ಕಾಯಕಲ್ಪ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಾ ಮಹೇಶ್ ಮಾತನಾಡಿ, ಕಳೆದ 2 ದಿನಗಳ ಭಾರೀ ಮಳೆಗೆ ಸೇತುವೆ ಮೇಲೆ ನೀರು ಹರಿದಿದ್ದು, ಜನರಿಗೆ ಸಂಕಷ್ಟ ಎದುರಾಗಿದೆ. ಗ್ರಾಮ ಪಂಚಾಯಿತಿಯಿಂದಲೂ ತಕ್ಷಣ ಸ್ಪಂದಿಸಿದ್ದು ಸೇತುವೆಗೆ ಅಡ್ಡಲಾದ ಮರದ ದಿಮ್ಮಿಗಳನ್ನು ತೆಗೆಸಿ ಹಳ್ಳದ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದೇವೆ. ಗ್ರಾಮ ಪಂಚಾಯಿತಿಗಳಿಗೆ ಅನುದಾನ ಕಡಿಮೆ ಇದ್ದು ಸಣ್ಣ ಕಾಮಗಾರಿಗಳನ್ನು ಮಾತ್ರ ಮಾಡಬಹುದು. ದೊಡ್ಡ ಕಾಮಗಾರಿಗೆ ಸಂಬಂಧಪಟ್ಟ ಇಲಾಖೆ ಸ್ಪಂದಿಸಬೇಕು. ನಮ್ಮ ತುರ್ತು ಕರೆಗೆ ಕಾಡಾ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು. ಗ್ರಾಪಂ ಉಪಾಧ್ಯಕ್ಷ ಸುನೀಲ್ ಮಾತನಾಡಿ.4 ವರ್ಷದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಈ ಸೇತುವೆ ವೀಕ್ಷಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದೆ. ಕಾಡಾ ಅಧ್ಯಕ್ಷರು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ್, ವಾಣಿ ನರೇಂದ್ರ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಡಿ.ರಾಜೇಂದ್ರ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗಾಂಧಿಗ್ರಾಮ ನಾಗರಾಜು, ಕಡಹಿನಬೈಲು ಗ್ರಾಮ ಪಂಚಾಯಿತಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರುಗುಂದ ನಂದೀಶ್, ಮುಖಂಡರಾದ ಗೇರ್ ಬೈಲು ಎಲ್ದೋಸ್, ಅಂಬರೀಶ್ , ಪರಮೇಶ್ವರ,ಚೇತನ್, ಅಬ್ದುಲ್ ರೆಹಮಾನ್, ಆಂಟೋನಿ, ಎ.ಬಿ.ಪ್ರಶಾಂತ್, ಆಜೇಶ್, ಡಿ.ಜಿ.ಜಗದೀಶ್,ಗ್ರಾಮ ಪಂಚಾಯಿತಿ ಪಿಡಿಒ ವಿಂದ್ಯಾ, ತಾಲೂಕು ಪಂಚಾಯಿತಿ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮನೀಶ್, ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ಮತ್ತಿತರರು ಇದ್ದರು.ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 30 ಯೋಜನೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ 12 ರಿಂದ 13 ಜಿಲ್ಲೆಗಳು ಬರುತ್ತಿದ್ದು ಒಟ್ಟು 30 ಯೋಜನೆ ಗಳನ್ನು ರೂಪಿಸಲಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು. ಬುಧವಾರ ಕಡಹಿನಬೈಲು ಗ್ರಾಮ ಪಂಚಾಯಿತಿಯವರು ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 5. 50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹೋಗಲಿದೆ. ಲಕ್ಕವಳ್ಳಿಯಲ್ಲಿ ಭದ್ರಾ ಡ್ಯಾಂ ಇದ್ದು ಚಿತ್ರದುರ್ಗ, ಭದ್ರಾವತಿ, ದಾವಣಗೆರೆ, ರಾಣಿ ಬೆನ್ನೂರು, ಚೆನ್ನಗಿರಿ ಸೇರಿದಂತೆ 12ರಿಂದ 13 ಜಿಲ್ಲೆಗಳಿಗೆ ನೀರು ಹಾದು ಹೋಗಲಿದೆ. ರಾಜ್ಯದ 6 ಕಾಡಾಗಳಿಗೆ ಒಟ್ಟು 70 ಕೋಟಿ ಬಜೆಟ್ ರೂಪಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಅಡಕೆ, ಬತ್ತ ಬೆಳೆಯುತ್ತಾರೆ. ಈ ವರ್ಷ ಮಳೆ ಚೆನ್ನಾಗಿ ಬರುತ್ತಿದ್ದು 149 ಅಡಿ ನೀರು ಡ್ಯಾಂ ನಲ್ಲಿ ಏರಿಕೆಯಾಗಿದೆ. ಕಾಡಾದಲ್ಲಿ 3 ವಿಭಾಗಗಳಿದ್ದು ಆಡಳಿತದ ವಿಭಾಗ, ಎಂಜಿನಿಯರ್ ವಿಭಾಗ ಹಾಗೂ ಕೃಷಿಗೆ ಸಂಬಂಧ ಪಟ್ಟ ವಿಭಾಗಗಳಿವೆ. ಕೃಷಿಗೆ ಸಂಬಂಧಪಟ್ಟವರು ಅಚ್ಚುಕಟ್ಟು ಪ್ರದೇಶದ ಕಾಲುವೆಯಲ್ಲಿ ನೀರು ಸೋರುತ್ತಿದ್ದರೆ ಸರಿಪಡಿ ಸುತ್ತಾರೆ ಎಂದರು. ಕಾಡಾ ವ್ಯಾಪ್ತಿಯಲ್ಲಿ ರೈತರೇ 540 ಸಹಕಾರ ಸಂಘ ಸ್ಥಾಪನೆ ಮಾಡಿಕೊಂಡಿದ್ದಾರೆ. ಈ ಸಹಕಾರ ಸಂಘಗಳು ಚಟುವಟಿಕೆಯಿಂದ ಕೆಲಸ ಮಾಡುತ್ತಿದೆ. ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತಿದ್ದಾರೆ ಎಂದರು. ರಾಜ್ಯ ಸರ್ಕಾರ ಆಗಸ್ಟ್ 1 ರಿಂದ ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರುತ್ತಿದೆ. ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನರ ಒಳಿತಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ