ಹಾವೇರಿ: ಮಾದಕ ವಸ್ತುಗಳ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕುವಂತೆ ಮನವಿ ಮಾಡುವ ಮೂಲಕ, ವ್ಯಸನ ಮುಕ್ತ ಸಮಾಜದ ಕನಸುಕಂಡ ಅಪರೂಪದ ಮಹಾನ್ ವ್ಯಕ್ತಿ ಡಾ. ಮಹಾಂತ ಶಿವಯೋಗಿಗಳು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಅವರು ಹೇಳಿದರು.
ಹಣ, ದವಸಧಾನ್ಯಗಳನ್ನು ಜೋಳಿಗೆಗೆ ಹಾಕಿ ಎಂದು ಕೇಳುವ ಇತರರಿಗಿಂತ ಭಿನ್ನವಾದ ನಡೆಯಿಂದ ಧಾರ್ಮಿಕ, ಆಧ್ಯಾತ್ಮಿಕ ಶ್ರೇಯಸ್ಸಿನೊಂದಿಗೆ ಸ್ವಚ್ಛ ಸಮಾಜದ ಏಳಿಗೆಗಾಗಿ ಯುವಜನರಲ್ಲಿರುವ ದುಶ್ಚಟಗಳನ್ನು ಕೈಬಿಡುವಂತೆ ಜಾಗೃತಿಮೂಡಿಸಿ, ಜೋಳಿಗೆಯಲ್ಲಿ ದುಶ್ಚಟಗಳನ್ನು ದಾನಮಾಡಿ ಎಂದು ಮಹಾಂತ ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಆಂದೋಲನದ ರೀತಿಯಲ್ಲಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು ಎಂದು ಬಣ್ಣಿಸಿದರು.
ಪ್ರತಿನಿತ್ಯ ಮಾಧ್ಯಮಗಳಲ್ಲಿ ಅಪರಾಧ ಸುದ್ದಿಗಳನ್ನು ನೋಡುತ್ತೇವೆ. ಏನು ಮಾಡಬೇಕು, ಏನು ಮಾಡಬಾರದು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ವ್ಯಸನ ಮುಕ್ತ ಸಮಾಜ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ತಹಸೀಲ್ದಾರ್ ಶರಣಮ್ಮ ಕೆ., ಅವರು ಮಾತನಾಡಿ, ಯುವಪೀಳಿಗೆ ವ್ಯಸನಗಳಿಗೆ ದಾಸರಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಬೆಳೆಯುವ ಮಕ್ಕಳು ದುಶ್ಚಟಗಳಿಂದ ದೂರವಿರಬೇಕು. ವ್ಯಸನ ದುಸ್ಥಿತಿಗೆ ತಳ್ಳುತ್ತದೆ ಹಾಗೂ ದೈಹಿಕ ಆರೋಗ್ಯ ಹಾಳಾಗಿ ಕಾಯಿಲೆಗಳು ಬರುತ್ತವೆ. ನಮ್ಮ ಶರಣರು-ಸಂತರು ನಮಗೆ ಒಳ್ಳೆಯ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಯುವ ಸಮೂಹ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯುವ ಜನತೆ ದುಶ್ಚಟಗಳಿಗೆ ದಾಸರಾಗದೇ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಮಾದಕ ವಸ್ತುಗಳ ಜಾಹೀರಾತುಗಳಿಗೆ ಮರುಳಾಗದೇ, ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿದುಕೊಳ್ಳಬೇಕು. ಪಾಲಕರು ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ನೀಡಬೇಕು. ಸದೃಡ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಬಿ.ಎಂ.ಬೇವಿನಮರದ, ಆರೋಗ್ಯ ಇಲಾಖೆಯ ಡಾ.ಸಂತೋಷ ದಡ್ಡಿ, ಸಾಹಿತಿ ಹನುಮಂತಗೌಡ ಗೊಲ್ಲರ ಇತರರು ಉಪಸ್ಥಿತರಿದ್ದರು.
ಜಾಗೃತಿ ಜಾಥಾಕ್ಕೆ ಚಾಲನೆ: ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಆಯೋಜಿಸಲಾದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ ಅವರು ಚಾಲನೆ ನೀಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಭಾರತಿ ಎಚ್., ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಬಿ.ಎಂ. ಬೇವಿನಮರದ, ಆರೋಗ್ಯ ಇಲಾಖೆಯ ಡಾ. ಸಂತೋಷ ದಡ್ಡಿ, ವಾರ್ತಾ ಇಲಾಖೆಯ ರಾಘವೇಂದ್ರ ಕುರಣೆ, ಇತರರು ಉಪಸ್ಥಿತರಿದ್ದರು. ಗಾಂಧಿ ಭವನದ ವರೆಗೆ ಜಾಗೃತಿ ಜಾಥಾ ಜರುಗಿತು.