ಸಾಹಿತ್ಯ ಸಮ್ಮೇಳನದಲ್ಲಿ ಡಾ.ಮಹೇಶ್ ಜೋಶಿ ಅಂಧಾ ದರ್ಬಾರ್: ಮಹದೇವು

KannadaprabhaNewsNetwork |  
Published : Jan 10, 2025, 12:48 AM IST
9ಕೆಎಂಎನ್ ಡಿ14 | Kannada Prabha

ಸಾರಾಂಶ

1974ರಲ್ಲಿ ಕೆ.ವಿ.ಶಂಕರಗೌಡರ ನೇತೃತ್ವ ಮತ್ತು 1994ರಲ್ಲಿ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆದ ಸಮ್ಮೇಳನಗಳಿಗೆ ದುಡಿದವರನ್ನು ಜಿಲ್ಲೆಯಲ್ಲಿ ಕಸಾಪವನ್ನು ಕಟ್ಟಲು ದುಡಿದ ಮಾಜಿ ಅಧ್ಯಕ್ಷರು, ಜಿಲ್ಲೆಯ ಹಿರಿಯ ಸಾಹಿತಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡು ಡಾ.ಮಹೇಶ್ ಜೋಶಿ ಅವಮಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಂಧಾ ದರ್ಬಾರ್ ನಡೆಸಿದ್ದಾರೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1974ರಲ್ಲಿ ಕೆ.ವಿ.ಶಂಕರಗೌಡರ ನೇತೃತ್ವ ಮತ್ತು 1994ರಲ್ಲಿ ಜಿ. ಮಾದೇಗೌಡರ ನೇತೃತ್ವದಲ್ಲಿ ನಡೆದ ಸಮ್ಮೇಳನಗಳಿಗೆ ದುಡಿದವರನ್ನು ಜಿಲ್ಲೆಯಲ್ಲಿ ಕಸಾಪವನ್ನು ಕಟ್ಟಲು ದುಡಿದ ಮಾಜಿ ಅಧ್ಯಕ್ಷರು, ಜಿಲ್ಲೆಯ ಹಿರಿಯ ಸಾಹಿತಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಂಡು ಡಾ.ಮಹೇಶ್ ಜೋಶಿ ಅವಮಾನ ಮಾಡಿದ್ದಾರೆ ಆಪಾದಿಸಿದರು.

ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡ ದಿನದಿಂದಲೂ ಒಂದಲ್ಲಾ ಒಂದು ವಿವಾದಗಳನ್ನು ತೆಗೆಯುತ್ತಾ ಬಂದ ಡಾ.ಮಹೇಶ್‌ ಜೋಶಿ ಸಮ್ಮೇಳನದ ಕೊನೆ ದಿನದವರೆಗೂ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದ್ದರು. ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸಾಹಿತ್ಯೇತರರರನ್ನು ಆಯ್ಕೆ ಮಾಡುವ ವಿಚಾರವನ್ನು ಚರ್ಚೆಗೆ ಎಳೆದು ತಂದರು. ಸಾಹಿತ್ಯೇತರರನ್ನು ಆಯ್ಕೆ ಮಾಡುವಂತೆ ಗಣ್ಯರು ಶಿಫಾರಸಲ್ಲು ಪತ್ರ ಕೊಟ್ಟಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿ ಪರಿಷತ್ತಿನ ಪಾವಿತ್ರ್ಯತೆಗೆ ಡಾ.ಜೋಶಿ ಕಳಂಕ ತಂದರು ಎಂದು ದೂರಿದರು.

ಸಮ್ಮೇಳನದಲ್ಲಿ ಮದ್ಯಪಾನ-ಧೂಮಪಾನದ ಜೊತೆಗೆ ಮಾಂಸಾಹಾರ ವಿಷಯವನ್ನು ಪ್ರಸ್ತಾಪಿಸಿ ಒಂದು ವರ್ಗದವರ ಕೆಂಗಣ್ಣಿಗೆ ಗುರಿಯಾದರು. ವಿನಾಕಾರಣ ಸಮ್ಮೇಳನದುದ್ದಕ್ಕೂ ಮಾಂಸಾಹಾರ ವಿಚಾರ ಪ್ರಸ್ತಾಪವಾಗುವಂತಾಯಿತು. ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲೆಯ ಸಾಹಿತಿಗಳನ್ನು, ಕಸಾಪ ಮಾಜಿ ಅಧ್ಯಕ್ಷರು, ಸಂಘಟಕರನ್ನು, ಹೋರಾಟಗಾರರನ್ನು ಕನ್ನಡ ಪರ ಸಂಘಟನೆಯವರನ್ನು ನಿರ್ಲಕ್ಷಿಸಿ ಜಿಲ್ಲಾ ಅಧ್ಯಕ್ಷರಿಗೆ ಅವಮಾನ ಮಾಡಿ ಡಾ.ಜೋಶಿ ಹಿಟ್ಲರ್‌ನಂತೆ ವರ್ತಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಮ್ಮೇಳನದ ಸಮನ್ವಯ ಸಮಿತಿ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಅವರನ್ನು ನೇಮಕ ಮಾಡಿ ಅವರನ್ನು ಪ್ರತಿ ಹಂತದಲ್ಲೂ ತೊಂದರೆ ನೀಡಿ ಅಮಾನಿಸಿ ಅದರ ಮೂಲಕ ಜಿಲ್ಲೆಗೆ ಅವಮಾನ ಮಾಡಿದರು ಎಂದು ಆರೋಪಿಸಿದರು.

ಸಮ್ಮೇಳನದ ಸಂಪೂರ್ಣ ಯಶಸ್ಸಿಗೆ ಸಹಕರಿಸಿದವರಿಗೆ, ದುಡಿದವರಿಗೆ ಒಂದು ಕೃತಜ್ಞತೆಯನ್ನೂ ಸಲ್ಲಿಸದೆ ಹಗಲಿರುಳು ದುಡಿದ ಜಿಲ್ಲಾ ಕಾರ್ಯಕಾರಿ ಸಮಿತಿಯನ್ನು ಏಕಾಏಕಿ ವಿಸರ್ಜಿಸಿ ನಿರಂಕುಶ ಪ್ರಭುತ್ವವಾಗಿ ವರ್ತಿಸಿದರು. ಅವರು ಮಾಡಿರುವ ಪ್ರಮಾದಗಳಿಗೆಲ್ಲಾ ಜಿಲ್ಲೆಯ ಜನರ ಎದುರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರು ಅಧಿಕಾರದಲ್ಲಿರುವವರೆಗೂ ಜಿಲ್ಲೆಯೊಳಗೆ ಕಾಲಿಡುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೀಲಾರ ಕೃಷ್ಣೇಗೌಡ, ಕೆ.ಜೆ.ಸುರೇಶ್, ಪ್ರೊ.ಎಸ್.ಮಂಜು, ಕೆ.ಎಸ್.ಜವರೇಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಮಕ್ಕಳ ಭವಿಷ್ಯ ಸಂರಕ್ಷಿಸಲು ಪೋಲಿಯೋ ಹಾಕಿಸಿ: ಮುಂಡರಗಿ ನಾಗರಾಜ