ಡೆಂಘೀ ವೈದ್ಯಕೀಯ ತುರ್ತು ಸ್ಥಿತಿ ಘೋಷಿಸಿ: ಡಾ। ಸಿ.ಎನ್‌.ಮಂಜುನಾಥ್‌

KannadaprabhaNewsNetwork |  
Published : Jul 07, 2024, 01:27 AM ISTUpdated : Jul 07, 2024, 12:28 PM IST
BJP | Kannada Prabha

ಸಾರಾಂಶ

ರಾಜ್ಯಾದ್ಯಂತ ಡೆಂಘೀ ಹರಡುತ್ತಿರುವುದರಿಂದ ಕೋವಿಡ್‌ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಹೀಗಾಗಿ ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಆಗ್ರಹಿಸಿದ್ದಾರೆ.

 ಬೆಂಗಳೂರು :  ರಾಜ್ಯಾದ್ಯಂತ ಡೆಂಘೀ ಹರಡುತ್ತಿರುವುದರಿಂದ ಕೋವಿಡ್‌ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಹೀಗಾಗಿ ‘ವೈದ್ಯಕೀಯ ತುರ್ತು ಸ್ಥಿತಿ’ ಎಂದು ಘೋಷಿಸಬೇಕು ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಘೀ ಜ್ವರ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಘೀ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯವಾಗಿದೆ. ಡೆಂಘೀ ಜ್ವರ ನಿಯಂತ್ರಣ ಆಗದೆ ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಕಾಯಿಲೆ ಬರಬಹುದು ಎಂದು ಎಚ್ಚರಿಸಿದರು.

ದುಬಾರಿ ದರ ಪಡೆದರೆ ಕ್ರಮಕ್ಕೆ ಆಗ್ರಹ:

ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ಪಡೆದರೆ ಅಂತಹ ಆಸ್ಪತ್ರೆ, ಘಟಕಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅಂತಹ ಲ್ಯಾಬೊರೇಟರಿಗಳನ್ನು ಮುಚ್ಚಬೇಕು ಎಂದು ಒತ್ತಾಯಿಸಿದ ಅವರು, ಫ್ಲೈಓವರ್, ಅಂಡರ್ ಪಾಸ್, ಅಗೆದ ರಸ್ತೆ, ಸೇತುವೆ ಮೊದಲಾದವು ಸಕಾಲದಲ್ಲಿ ಮುಗಿಯುತ್ತಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಲ್ಲುವುದರಿಂದ ಮಳೆ ಬಂದಾಗ ಅಲ್ಲೆಲ್ಲಾ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಟಾಸ್ಕ್‌ ಫೋರ್ಸ್‌ ರಚಿಸಿ:

ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆಲಸ ಮಾಡಬೇಕಿದೆ. ಡೆಂಘೀ ನಿಯಂತ್ರಣಕ್ಕೆ ಒಂದು ಟಾಸ್ಕ್ ಫೋರ್ಸ್ ರಚಿಸಬೇಕು. ಈ ಟಾಸ್ಕ್ ಫೋರ್ಸ್, ಪರಿಣತರ ಸಲಹೆ ಪಡೆಯಬೇಕು ಎಂದರು.

ಮಳೆಗಾಲದ ಸಮಸ್ಯೆಗಳಿಗೆ ಬೇಸಿಗೆ ಕಾಲದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು. ಒಬ್ಬ ವೈದ್ಯರು ಸೇರಿ 6-7 ಜನರು ಸತ್ತಿದ್ದು, ಸಾವಿರಾರು ಜನ ಸೋಂಕಿತರಿದ್ದಾರೆ. ಮಕ್ಕಳಲ್ಲೂ ಡೆಂಘೀ ಜ್ವರ ಹೆಚ್ಚಾಗುತ್ತಿದೆ. ಆದ್ದರಿಂದ ಎಲ್ಲಾ ಶಾಲಾ- ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ, ಶಾಲಾ ಆಡಳಿತದ ಜೊತೆ ಸಭೆ ನಡೆಸಬೇಕು. ಡೆಂಘೀ ಸಂಕೀರ್ಣ ಸ್ಥಿತಿ ತಲುಪಿದರೆ ಅದಕ್ಕೆ ಚಿಕಿತ್ಸೆಯೇ ಇಲ್ಲ ಎಂದು ಒತ್ತಿ ಹೇಳಿದರು.

ಆರೋಗ್ಯ ಇಲಾಖೆ ಐಸಿಯುಗೆ ಸೇರಿದೆ:

ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ದಿವಾಳಿ ಅಂಚಿನಲ್ಲಿದೆ. ರಾಜ್ಯದ ಆರೋಗ್ಯ ಇಲಾಖೆ ಐಸಿಯುಗೆ ಸೇರಿದಂತಿದೆ ಎಂದು ಟೀಕಿಸಿದರು.

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಡೆಂಘೀ ಮಹಾಮಾರಿ ಇದೆ. ಕಳೆದ ಒಂದು ತಿಂಗಳಿನಿಂದ ಅದು ರಾಜ್ಯವನ್ನೇ ಆವರಿಸಿದೆ. ಡೆಂಘೀ, ಮಲೇರಿಯಾ, ವೈರಲ್ ಜ್ವರ ಸಾಮಾನ್ಯವಾಗಿ ಋತುವಿಗೆ ಅನುಗುಣವಾಗಿ ಬರುತ್ತವೆ. ಸರ್ಕಾರ ಇದರ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇವಲ ಪ್ರವಾಸದಲ್ಲಿ ಇರುತ್ತಾರೆ. ಅವರ ಪಕ್ಷದ ಚಟುವಟಿಕೆಯಲ್ಲಿ ಅವರು ಬ್ಯುಸಿ ಇರುತ್ತಾರೆ. ಆದರೆ, ತಮ್ಮ ಇಲಾಖೆ ಜವಾಬ್ದಾರಿ ಕಡೆ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ ಕೆ, ಸಹ ಸಂಚಾಲಕ ಡಾ.ಯೋಗಾನಂದ, ರಾಜ್ಯ ವಕ್ತಾರ ಅಶೋಕ್ ಕೆ.ಎಂ. ಗೌಡ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ