ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಸುಭಾಷ್ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಚುನಾವಣಾ ಪ್ರಭಾರಿ ಫಣೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಾ.ಎನ್.ಎಸ್.ಇಂದ್ರೇಶ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಕಾರ್ಯಕರ್ತರು ನೂತನ ಅಧ್ಯಕ್ಷರಿಗೆ ಶಾಲು-ಹಾರ ಹಾಕಿ ಅಭಿನಂದಿಸಿದರಲ್ಲದೆ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಸಿ.ಪಿ.ಉಮೇಶ್ ಅವರ ಬಳಿಕ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ಡಾ.ಎನ್.ಎಸ್.ಇಂದ್ರೇಶ್ ಅವರು. ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಗಳಲ್ಲಿ ಮೈತ್ರಿ ಧರ್ಮ ಪಾಲನೆಯೊಂದಿಗೆ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದರು. ಪಕ್ಷದೊಳಗೆ ಭಿನ್ನಮತ, ಅಪಸ್ವರಗಳಿಗೆ ಆಸ್ಪದವಿಲ್ಲದೆ ಎರಡೂ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು.ಪಾಂಡವಪುರ ಪುರಸಭೆ ಉಪಾಧ್ಯಕ್ಷ ಸ್ಥಾನ, ಮಳವಳ್ಳಿ ಪುರಸಭೆ ಅಧ್ಯಕ್ಷ ಸ್ಥಾನ ಹಾಗೂ ಮಂಡ್ಯ ನಗರಸಭೆ ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ದೊರಕಿಸಿಕೊಡುವಲ್ಲಿ ಸಾಕಷ್ಟು ಶ್ರಮವಹಿಸಿದ್ದರು. ಸರ್ಕಾರದ ವಿರುದ್ಧ ನಡೆಸಲಾದ ಹೋರಾಟಗಳಲ್ಲೂ ಪಕ್ಷದ ಎಲ್ಲಾ ಮುಖಂಡರು- ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ತೊಡಗಿಸಿಕೊಂಡಿದ್ದರಿಂದಲೇ ಎರಡನೇ ಅವಧಿಗೆ ಡಾ.ಎನ್.ಎಸ್.ಇಂದ್ರೇಶ್ ಅವರ ಆಯ್ಕೆ ಸುಗಮವಾಗಲು ಕಾರಣವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.
ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಶ್ರೀಧರ್, ಡಾ.ಸದಾನಂದ ಹಾಗೂ ಇತರರಿದ್ದರೂ ಇಂದ್ರೇಶ್ ಅವರನ್ನು ಸರಿಗಟ್ಟುವ ಸಾಮರ್ಥ್ಯವನ್ನು ಪ್ರದರ್ಶಿಸಲಿಲ್ಲ. ಹೀಗಾಗಿ ಇಂದ್ರೇಶ್ ಅವರ ಹೆಸರು ಅಂತಿಮವಾಗಿ ಆಯ್ಕೆಗೊಂಡಿತು.
ಸಭೆಯಲ್ಲಿ ಚುನಾವಣಾ ಪ್ರಭಾರಿ ಸಚ್ಚಿದಾನಂದಮೂರ್ತಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಶ್ರೀಧರ್, ಡಾ.ಸದಾನಂದ, ವಿವೇಕ್, ಸಿ.ಟಿ.ಮಂಜುನಾಥ್, ವಸಂತಕುಮಾರ್, ಹೆಚ್.ಕೆ.ಅಶೋಕ್‌ಕುಮಾರ್ ಇತರರಿದ್ದರು