ಮುಗದಾಳಬೆಟ್ಟ ಕಾಡುಗೊಲ್ಲರಹಟ್ಟಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.
ಪಾವಗಡ : ತಾಲೂಕಿನ ಮುಗದಾಳಬೆಟ್ಟ ಕಾಡುಗೊಲ್ಲರಹಟ್ಟಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.
ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕಾಡುಗೊಲ್ಲರಹಟ್ಟಿಗೆ ಭೇಟಿ ನೀಡಿದ ಅವರು, ಸಮಸ್ಯೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಕಳೆದ ಎರಡು ಮೂರು ತಲೆ ಮಾರುಗಳಿಂದ 40ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದೇವೆ. ಪಕ್ಕದ ಜಮೀನು ಮಾಲೀಕರೊಬ್ಬರು ವಾಸದ ಸ್ಥಳ ನಮಗೆ ಸೇರಿದೆ ಎಂದು ಪದೇಪದೇ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ.
ಪರಿಣಾಮ ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಎಸಿ ನ್ಯಾಯಾಲಯ ಸೇರಿದಂತೆ ಸ್ಥಳೀಯ ನ್ಯಾಯಾಲಯದಲ್ಲಿ ತೀರ್ಪು ಗೊಲ್ಲರಹಟ್ಟಿ ವಾಸದ ಪರವಾಗಿ ಅದೇಶ ಜಾರಿಯಾಗಿದೆ. ಹೀಗಿದ್ದರೂ ಪಕ್ಕದ ಜಮೀನು ಮಾಲೀಕರ ಪ್ರಭಾವಕ್ಕೆ ಒಳಗಾಗಿ ನಮಗೆ ಮೂಲಭೂತ ಸೌಲಭ್ಯ ಕಲ್ಪಿಸಿದ ಕಾರ ಶೌಚಗೃಹಗಳಿಲ್ಲದೇ ಬಯಲು ಬಹಿರ್ದೆಸೆ ಅವಲಂಬಿಸಿದ್ದೇವೆ.
ಬಟ್ಟೆ ಸುತ್ತಿದ ಡೇರೆಗಳ ಮಧ್ಯೆಯೇ ಸ್ನಾನ ಮಾಡುತ್ತಿದ್ದೇವೆ ಎಂದು ಅನೇಕ ಮಹಿಳೆಯರು ಅಳಲು ತೋಡಿಕೊಂಡರು.ಇದೇ ವೇಳೆ ತಾಲೂಕು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬೋರಣ್ಣ ಮಾತನಾಡಿ ಇಲ್ಲಿ ವಾಸಿಸುವ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಧಿಕಾರಿ ನ್ಯಾಯಾಲಯದಲ್ಲಿ ಗೊಲ್ಲರಹಟ್ಟಿ ವಾಸ ಎಂದ ಆದೇಶವಾಗಿದೆ. ಅದರೂ ನ್ಯಾಯಾಲಯ ನೆಪವೊಡ್ಡಿ ಅಧಿಕಾರಿಗಳು ಸೌಲಭ್ಯ ಕಲ್ಪಿಸುತ್ತಿಲ್ಲ.
ಆದ್ದರಿಂದ ಕೂಡಲೇ ಪರಿಶೀಲಿಸಿ ಸಮಸ್ಯೆ ನಿವಾರಿಸುವಂತೆ ಮಹಿಳಾ ಅಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ ಸ್ಥಿತಿಗತಿ ವಿವರಿಸಿದರು. ಸಮಸ್ಯೆ ಅಲಿಸಿದ ಬಳಿಕ ಮಹಿಳಾ ಅಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಾತನಾಡಿ,ಆ ಧುನಿಕ ಪರಿಸ್ಥಿತಿಯಲ್ಲಿಯೂ ಸಹ ಇಂತಹ ಸ್ಥಿತಿ ನಿರ್ಮಾಣವಾಗಿರುವುದು ನೋವು ತರುತ್ತಿದೆ. ವಾಸದ ಜಾಗ ನ್ಯಾಯಾಲಯದಲ್ಲಿರುವ ಕಾರಣ ಹಿನ್ನಡೆಯಾಗುತ್ತಿದೆ.
ಮುಂದಿನ ಮೇ 16ರಂದು ನ್ಯಾಯಾಲಯದ ತೀರ್ಪು ಹೊರಬಂದ ಕೂಡಲೇ ಮನೆಗಳ ಹಕ್ಕು ಪತ್ರ ವಿತರಣೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸಮಸ್ಯೆ ನಿವಾರಣೆಗೆ ಕ್ರಮವಹಿಲಿದ್ದೇವೆ. ಸದ್ಯ ತಾತ್ಕಾಲಿಕವಾಗಿ ಮೊಬೈಲ್ ಶೌಚಾಲಯ ಸ್ನಾನದ ಗೃಹ ಹಾಗೂ ಸಿಸಿರಸ್ತೆ ನಿರ್ಮಾಣ ಹಾಗೂ ಕುಡಿಯುವ ನೀರು ಹಾಗೂ ಬೀದಿ ದೀಪ ಅಳವಡಿಕೆಗೆ ಕ್ರಮವಹಿಸಿದ್ದು ಈ ಸಂಬಂಧ ಸ್ಥಳದಲ್ಲಿಯೆ ತಾಪಂ ಇಒ ಜಾನಕಿರಾಮ್ ಹಾಗೂ ಗ್ರಾಪಂ ಪಿಡಿಒ ಮಂಜುನಾಥ್ ಅವರಿಗೆ ಅದೇಶಿಸಿ ಸಮಸ್ಯೆ ನಿವಾರಣೆ ಕುರಿತು ಕೊಡಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ಇದೇ ವೇಳೆ ತಹಸೀಲ್ದಾರ್ ಡಿ.ಎನ್.ವರದರಾಜು,ತಾಪಂ ಇಒ ಜಾನಕಿರಾಮ್,ಗ್ರಾ ಪಂ ಪಿಡಿಒ ಮಂಜುನಾಥ್, ಶಿಕ್ಷಕ ಸಿದ್ದಪ್ಪ,ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ಹಾಗೂ ಸ್ಥಳೀಯರಾದ ದೊಡ್ಡಯ್ಯ,ತಾಲೂಕು ಮಹಿಳಾ ಘಟಕದ ಅನಸೂಯಮ್ಮ,ಸರೋಜಮ್ಮ,ಭಾಗ್ಯಲಕ್ಷ್ಮೀ,ಚಿತ್ತಮ್ಮ ಹನುಮಕ್ಕ,ನಾಗರಾಜು,ಚಿತ್ತಣ್ಣ ಬೈರಪ್ಪ,ಕರಿಯಣ್ಣ ಇತರೆ ಅನೇಕ ಮಂದಿ ಇದ್ದರು.