ಹರಪನಹಳ್ಳಿ: ಜನರ ಅಹವಾಲುಗಳನ್ನು ಆಲಿಸಿ ಬಗೆಹರಿಸಲು ಶೀಘ್ರ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿ ತಾಲೂಕುಗಳಲ್ಲೂ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಪ್ರಯತ್ನ:
ಹೊಸಪೇಟೆ -ಹರಿಹರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಈಗಾಗಲೇ ಕೇಂದ್ರ ಸಚಿವ ನಿತನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಆ ಕಡೆ ನಿಗಾ ವಹಿಸುತ್ತೇನೆ ಎಂದರು.ಸಣ್ಣ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಉದ್ಯೋಗ ಅವಕಾಶಗಳ ಹೆಚ್ಚಳಕ್ಕೆ ಪ್ರಯತ್ನ, ಲೋಕಸಭಾ ಕ್ಷೇತ್ರಗಳ ಪ್ರತಿ ತಾಲೂಕುಗಳ ಬೇಡಿಕೆಗಳ ಕುರಿತು ವರದಿ ಸಂಗ್ರಹಿಸಿಕೊಂಡು ಆಯಾ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಗ್ರಾಪಂ ಸದಸ್ಯರು ಮುಖಂಡರ ಸಭೆ ನಡೆಸಿ ಅಭಿವೃದ್ಧಿಯತ್ತ ಗಮನಹರಿಸುತ್ತೇನೆ ಎಂದು ಹೇಳಿದರು.
ಶಾಸಕಿ ಎಂ.ಪಿ. ಲತಾ ಹಾಗೂ ನಾನು ಜೋಡೆತ್ತಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರಶ್ನೆಯೊಂದಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉತ್ತರಿಸಿದರು.
ಹರಪನಹಳ್ಳಿಯ ಶಾಸಕರ ನಿವಾಸದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕಾರ್ಯಕರ್ತರನ್ನು ಭೇಟಿ ಮಾಡಿದರು. ಶಾಸಕಿ ಎಂ.ಪಿ.ಲತಾ ಇದ್ದರು.