ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಡಾ.ಪ್ರಭಾಕರ ಕೋರೆ ಅವರು ನಿರ್ದಿಷ್ಟ ಗುರಿ, ಸತತ ಪರಿಶ್ರಮದಿಂದ ಕೆಎಲ್‌ಇ ಸಂಸ್ಥೆಯನ್ನು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.ಅಂಕಲಿಯ ಶಿವಾಲಯದಲ್ಲಿ ಶಿವಶಕ್ತಿ ಶುಗರ್ಸ್, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಚಿಕ್ಕೋಡಿ, ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಅಂಕಲಿ, ಹರ್ಮ್ಸ್ ಡಿಸ್ಟಿಲರಿ ಪ್ರೈ.ಲಿ. ಯಡ್ರಾಂವ ಮತ್ತು ಕೆಎಲ್‌ಇ ಶಿಕ್ಷಣ ಸಂಸ್ಥೆ ಸೇರಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ 77ನೇ ಜನ್ಮದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಹುಟ್ಟುಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಅವರ ಹುಟ್ಟುಹಬ್ಬವನ್ನು ಆಚರಣೆ ಸಮಿತಿ ವಿಧಾಯಕವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಕಳೆದ 30 ವರ್ಷಗಳಲ್ಲಿ ಡಾ.ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ಕೆಎಲ್‌ಇ ಸಂಸ್ಥೆ ಬೆಳೆಯದೇ ಇದ್ದಲ್ಲಿ ಅಥವಾ ಸಂಸ್ಥೆ ಇರದೇ ಹೋಗಿದ್ದರೆ ಅದೇಷ್ಟೋ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂಬುದನ್ನು ಊಹೆ ಮಾಡಲು ಸಾಧ್ಯವಿಲ್ಲ ಎಂದರು.ಕೆಎಲ್‌ಇ ಸಂಸ್ಥೆಯು ಶಿಕ್ಷಣದ ಜೊತೆಗೆ ಅತ್ಯುತ್ತಮ ಆರೋಗ್ಯ ಸೇವೆ ನೀಡುತ್ತಿರುವುದರಿಂದ ಇಂದು ಕೆಎಲ್‌ಇ ಆಸ್ಪತ್ರೆ ವಿಶ್ವದರ್ಜೆಯ ಆರೋಗ್ಯ ಸೇವೆಯನ್ನು ಕೋರೆಯವರ ನಾಯಕತ್ವದಲ್ಲಿ ನೀಡುತ್ತಿದೆ. ಅಂಗಾಂಗ ದಾನ ಯೋಜನೆಯಡಿ ಕಿಡ್ನಿ, ಲಿವರ್, ಕೃತಕ ಹೃದಯ ಜೋಡನೆಯಂತಹ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಶೀಘ್ರದಲ್ಲಿಯೇ ಕೆಎಲ್‌ಇ ಸಂಸ್ಥೆ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಲಿದ್ದು, ಹುಟ್ಟು ಹಬ್ಬ ಆಚರಣ ಸಮಿತಿ ಬರುವ ದಿನಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.ಕೆಎಲ್‌ಇ ವೈಧ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ,ಯೋಜನಾ ನಿರ್ದೇಶಕ ಡಾ.ವಿ.ಡಿ. ಪಾಟೀಲ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಶೆಗುಣಸಿ ವಿರಕ್ತಮಠ ಮಹಾಂತ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಸಪ್ತಋಷಿಗಳು ಕಟ್ಟಿದ ಕೆಎಲ್‌ಇ ಸಂಸ್ಥೆಯನ್ನು ಮಹಾವೃಕ್ಷವನ್ನಾಗಿ ಮಾಡಿದವರು ಡಾ.ಪ್ರಭಾಕರ ಕೋರೆಯವರ ಅವರ ದೂರದೃಷ್ಟಿ ಸ್ಮರಣೀಯ ಎಂದರು.ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಮಾತನಾಡಿ, ಕೋರೆಯವರು ಕಾಯಕವನ್ನು ಪ್ರೀತಿಸಿದವರು. ಅದಕ್ಕಾಗಿ ಇಂದು ಕೆಎಲ್‌ಇ ಹೆಮ್ಮರವಾಗಿ ಬೆಳೆದಿದೆ ಎಂದರು.
ನಿಡಸೋಶಿ ಸಿದ್ದಸಂಸ್ಥಾನಮಠದ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಅಂಕಲಗಿಯ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಕೋರೆಯವರ ಕಾರ್ಯ ಅದ್ಭುತವಾಗಿದ್ದು, ಅವರು ಹಿಂದಿನ ಇತಿಹಾಸ ತಿಳಿದುಕೊಂಡು ಸಪ್ತರ್ಷಿಗಳ ದಾರಿಯಲ್ಲಿ ನಡೆದವರು, ಅವರ ದುಡಿಮೆಯ ಇಚ್ಛಾಶಕ್ತಿ,ಚಿಂತನೆ ಮೆಚ್ಚುವಂತಹದು ಎಂದರು.ಸಂಸ್ಥೆ ನಿರ್ದೇಶಕ ಬಿ.ಆರ್.ಪಾಟೀಲ, ಕೆಎಲ್‌ಇ ವಿವಿ ಉಪಕುಲಪತಿ ಡಾ.ನಿತಿನ್ ಗಂಗಾಣೆ, ಡಾ.ವಿ.ಡಿ.ಪಾಟೀಲ, ಡಾ.ದಯಾನಂದ ಎಂ, ಡಾ.ಎಂ.ವಿ.ಜಾಲಿ, ಡಾ.ವಿ.ಎ.ಕೋಠಿವಾಲೆ, ಡಾ.ಶ್ರೀಕಾಂತ ವರ್ಗಿ, ಡಾ.ಎನ್.ಎಸ್.ಮಹಾಂತಶೆಟ್ಟಿ ಭರತೇಶ ಬನವಣೆ, ಚಿದಾನಂದ ಕೋರೆ ಕಾರ್ಖಾನೆಯ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕೋರೆ ಸೇರಿದಂತೆ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಎಲ್ಲ ನಿರ್ದೇಶಕರು, ಪ್ರಭಾಕರ ಕೋರೆ ಸಹಕಾರಿಯ ನಿರ್ದೇಶಕರು ಉಪಸ್ಥಿತರಿದ್ದರು.
ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಿ.ಎಸ್.ಕರೋಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎನ್.ಆರ್.ಉಮರಾಣಿ ನಿರೂಪಿಸಿದರು. ಶ್ರೀಕಾಂತ ಉಮರಾಣಿ ವಂದಿಸಿದರು.