ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿರುವ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಚೇರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಶನಿವಾರ ಭೇಟಿ ನೀಡಿ ವೀಕ್ಷಿಸಿದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟವಾಗಿರುವ ಪುಸ್ತಕಗಳ ಬಗ್ಗೆ ಮಾಹಿತಿ ಪಡೆದರು. ಹಾಗೆಯೇ ಸುಳ್ಯ ಮತ್ತು ಮಡಿಕೇರಿ ತಾಲೂಕಿನ ಸ್ಥಳನಾಮ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆ ನೀಡಿದರು.
ಅಕಾಡೆಮಿ ಚಟುವಟಿಕೆ ಸಂಬಂಧಿಸಿದಂತೆ ದಾಖಲೆಗಳ ಪುಸ್ತಕ ಇರಬೇಕು. ಜೊತೆಗೆ ಇವುಗಳ ಬಗ್ಗೆ ಅಧ್ಯಯನ ಮಾಡುವಂತಾಗಬೇಕು. ಅರೆಭಾಷೆಯಲ್ಲಿ ಉತ್ತಮ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕಳೆದ 12 ವರ್ಷದಲ್ಲಿ ಸಂಶೋಧನಾ ಹೊತ್ತಿಗೆ, ಪ್ರಬಂಧ, ಲೇಖನ, ಕಲೆ, ಸಂಸ್ಕೃತಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ 80ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿವೆ. ಹಾಗೆಯೇ ತ್ರೈಮಾಸಿಕ ಪತ್ರಿಕೆ ‘ಹಿಂಗಾರ’ 34 ಸಂಚಿಕೆ ಪ್ರಕಟಗೊಂಡಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಮಾಹಿತಿ ನೀಡಿದರು.
ಸರ್ಕಾರದ ನಿರ್ದೇಶನದಂತೆ ನಾಮಫಲಕಗಳಲ್ಲಿ ಕನ್ನಡ ಅನುಷ್ಠಾನ ಕಡ್ಡಾಯವಾಗಿ ಜಾರಿಯಾಗಬೇಕು. ಆಹಾರ ಪೊಟ್ಟಣಗಳಲ್ಲಿಯೂ ಸಹ ಕನ್ನಡ ಬಳಕೆ ಆಗಬೇಕು. ಈ ಸಂಬಂಧ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದ್ದು, ಅದರಂತೆ ಕ್ರಮವಹಿಸಬೇಕು ಎಂದರು.ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಅವರು ಕನ್ನಡ ಅನುಷ್ಠಾನ ಬಗ್ಗೆ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹಲವು ಬಾರಿ ಸಭೆ ನಡೆಸಲಾಗಿದೆ. ಕನ್ನಡ ಅನುಷ್ಠಾನ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ. ಜೊತೆಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.