ಕೋಳಿ ಜ್ವರಕ್ಕೆ ಬೆದರಿದ ಕುಕ್ಕುಟೋದ್ಯಮದ ತವರೂರು ಕೊಪ್ಪಳ

KannadaprabhaNewsNetwork | Published : Mar 2, 2025 1:15 AM

ಸಾರಾಂಶ

ಕೋಳಿ ಮೊಟ್ಟೆ ಉತ್ಪಾದಿಸುವ ೨೦ ಫಾರ್ಮ್ ಹಾಗೂ ೧೬ ಕೋಳಿ ಮಾಂಸ ಉತ್ಪಾದಿಸುವ ಫಾರ್ಮ್ ಸೇರಿದಂತೆ ಮನೆಯಲ್ಲಿ ಸಾಕುವ ಕೋಳಿಗಳ ಲೆಕ್ಕಾಚಾರದಲ್ಲಿ ಬರೋಬ್ಬರಿ ೪೫ ಲಕ್ಷ ಕೋಳಿಗಳು ಜಿಲ್ಲೆಯಲ್ಲಿವೆ.‌ ರಾಜ್ಯದಲ್ಲಿಯೇ ಅತೀ ಹೆಚ್ಚು ಕೋಳಿ ಮೊಟ್ಟೆಯನ್ನು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯೇ ಅಧಿಕೃತ ಮಾಹಿತಿ ನೀಡಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಬಳ್ಳಾರಿ ಜಿಲ್ಲೆಯಲ್ಲಿ ಕೋಳಿ ಜ್ವರ ದೃಢಪಟ್ಟು, 2000ಕ್ಕೂ ಹೆಚ್ಚಿನ ಕೋಳಿ ಸತ್ತಿರುವುದು ಖಚಿತವಾಗುತ್ತಿದ್ದಂತೆ ಕುಕ್ಕುಟೋದ್ಯಮದ ಊರೆಂದು ಹೆಸರಾದ ಹಾಗೂ ರಾಜ್ಯದಲ್ಲಿಯೇ ಅತಿ ಹೆಚ್ಚು ಕೋಳಿ ಸಾಕಾಣಿಕೆ ಕೇಂದ್ರ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.

ಕೋಳಿ ಮೊಟ್ಟೆ ಉತ್ಪಾದಿಸುವ ೨೦ ಫಾರ್ಮ್ ಹಾಗೂ ೧೬ ಕೋಳಿ ಮಾಂಸ ಉತ್ಪಾದಿಸುವ ಫಾರ್ಮ್ ಸೇರಿದಂತೆ ಮನೆಯಲ್ಲಿ ಸಾಕುವ ಕೋಳಿಗಳ ಲೆಕ್ಕಾಚಾರದಲ್ಲಿ ಬರೋಬ್ಬರಿ ೪೫ ಲಕ್ಷ ಕೋಳಿಗಳು ಜಿಲ್ಲೆಯಲ್ಲಿವೆ.‌ ರಾಜ್ಯದಲ್ಲಿಯೇ ಅತೀ ಹೆಚ್ಚು ಕೋಳಿ ಮೊಟ್ಟೆಯನ್ನು ಜಿಲ್ಲೆಯಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆಯೇ ಅಧಿಕೃತ ಮಾಹಿತಿ ನೀಡಿದೆ. ಆದರೆ, ಪಶುಸಂಗೋಪನಾ ಇಲಾಖೆಯ ಅನುಮತಿ ಇಲ್ಲದಿರುವ ಸಣ್ಣ-ಪುಟ್ಟ ಕೋಳಿ ಫಾರ್ಮ್ ಲೆಕ್ಕ ಹಾಕಿದರೆ ಇನ್ನು ಅಧಿಕ ಪ್ರಮಾಣದಲ್ಲಿ ಕುಕ್ಕುಟೋದ್ಯಮ ಜಿಲ್ಲೆಯಲ್ಲಿದೆ ಎನ್ನಬಹುದು. ಹೀಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಕೋಳಿ ಜ್ವರ ದೃಢಪಟ್ಟಿರುವುದು ಕೊಪ್ಪಳ ಜಿಲ್ಲಾದ್ಯಂತ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಂದ ರಾಜ್ಯದ ಮೂಲೆ ಮೂಲೆಗೂ ಕೋಳಿ ಮತ್ತು ಮೊಟ್ಟೆ ರವಾನೆ ಮಾಡಲಾಗುತ್ತದೆ. ಬಳ್ಳಾರಿ ಜಿಲ್ಲೆಯ ಕೆಲ ಭಾಗಕ್ಕೂಇಲ್ಲಿಂದಲೇ ಪೂರೈಕೆ ಮಾಡಲಾಗುತ್ತದೆ.

ಆಂಧ್ರಪ್ರದೇಶದಲ್ಲೂ ಕೋಳಿ ಜ್ವರ ದೃಢಪಟ್ಟಿದೆ. ಕೊಪ್ಪಳದ ಕೋಳಿ ಫಾರ್ಮ್ ಉದ್ಯಮಿಗಳು ಬಹುತೇಕರು ಆಂಧ್ರ ಮೂಲದವರೆ ಆಗಿದ್ದಾರೆ. ಹೀಗಾಗಿ ಬಳ್ಳಾರಿ ಹಾಗೂ ಆಂಧ್ರ ಪ್ರದೇಶದೊಂದಿಗೆ ಕೋಳಿ ವಹಿವಾಟು ಇದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ತುರ್ತು ಸಭೆ:

ಬಳ್ಳಾರಿ ಮತ್ತು ಆಂಧ್ರದಲ್ಲಿ ಕೋಳಿ ಜ್ವರ ಖಚಿತವಾಗುತ್ತಿದ್ದಂತೆ ಕೊಪ್ಪಳ ಜಿಲ್ಲಾಡಳಿತ ಕೋಳಿ ಫಾರ್ಮ್ ಮಾಲೀಕರು, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದೆ. ಕೂಡಲೇ ಕೋಳಿ ಫಾರ್ಮ್ ಮಾಲೀಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಬಳ್ಳಾರಿ ಸೇರಿದಂತೆ ಸುತ್ತಮುತ್ತಲು ಜಿಲ್ಲೆಯವರೊಂದಿಗೆ ವ್ಯವಹರಿಸುವಾಗ ನಿಗಾ ಇರಬೇಕು. ಫಾರ್ಮಗೆ ಯಾರಾದರೂ ಕೋಳಿ ನೀಡಲು ಬಂದಾಗ ಎಚ್ಚರಿಕೆ ವಹಿಸಬೇಕು. ಅದಕ್ಕಿಂತ ಮಿಗಿಲಾಗಿ ಕೋಳಿ ಸತ್ತರೆ ತಕ್ಷಣ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಗಂಭೀರ ಪ್ರಕರಣ:

ಇದು ಅತ್ಯಂತ ಗಂಭೀರ ಪ್ರಕರಣವಾಗಿದ್ದು, ಕೋಳಿ ಸತ್ತ ತಕ್ಷಣ ಆರೋಗ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ಪಶು ಸಂಗೋಪನಾ ಇಲಾಖೆ ಕೋಳಿ ಫಾರ್ಮ್‌ಗಳ ಮೇಲೆ ನಿಗಾ ಇಟ್ಟಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಮಾಲೀಕರಿಗೆ ತಿಳಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೋಳಿ ಜ್ವರ ದೃಢಪಟ್ಟಿರುವುದರಿಂದ ಕೊಪ್ಪಳದಲ್ಲಿ ವಿಶೇಷ ನಿಗಾ ಇಡಲಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕೋಳಿ ಸಾಕಾಣಿಕೆ ಮಾಡುವುದು ಕೊಪ್ಪಳದಲ್ಲಿ.‌ ಅಧಿಕೃತ ಮಾಹಿತಿಯ ಪ್ರಕಾರ ೪೨-೪೫ ಲಕ್ಷ ಕೋಳಿಗಳು ಇವೆ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಡಿಡಿ ಮಲ್ಲಯ್ಯ ಹೇಳಿದರು.

Share this article