ನಿವೃತ್ತರು ಉತ್ತಮ ಆಹಾರ ಪದ್ಧತಿ ಅನುಸರಿಸಲು ವೈದ್ಯೆ ಡಾ.ರಾಜಲಕ್ಷ್ಮೀ ಸಲಹೆ

KannadaprabhaNewsNetwork | Published : Jan 26, 2025 1:33 AM

ಸಾರಾಂಶ

ನಿವೃತ್ತ ಸರ್ಕಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ನೌಕರರ ಹಿತದೃಷ್ಟಿಯಿಂದ ಪ್ರತಿ ತಿಂಗಳಲ್ಲೂ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಇಂತಹ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಆರೋಗ್ಯವಾಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಿವೃತ್ತರು ತಮ್ಮ ಇಳಿ ವಯಸ್ಸಿನಲ್ಲಿ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುತ್ತಾ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ನಗರದ ಜೀವನ್ ಆಸ್ಪತ್ರೆಯ ಎಂಡಿ ಹಾಗೂ ವೈದ್ಯೆ ಡಾ.ರಾಜಲಕ್ಷ್ಮೀ ತಿಳಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ತಿಂಗಳಿಗೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಡಯಾಬಿಟಿಕ್ ನಿಯಂತ್ರಣ , ಆಹಾರ ಪದ್ಧತಿ ಹಾಗೂ ಔಷಧೋಪಚಾರದ ಬಗ್ಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ನೀವು ಇದ್ದ ಕಡೆಯೇ ಇರುವುದಕ್ಕಿಂತ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು ಎಂದು ಹೇಳಿದರು.

ಮಧುಮೇಹಿಗಳಲ್ಲಿ ಕೆಲವರಿಗೆ ಹೃದಯಾಘಾತವಾದಾಗ ಎದೆ ನೋವು ಕಾಣಿಸುವುದಿಲ್ಲ. ಅಂತಹ ಸಮಯದಲ್ಲಿ ಮಧುಮೇಹಿಗಳು ಬಹಳ ಎಚ್ಚರಿಕೆ ವಹಿಸಬೇಕು. ಮನುಷ್ಯನಿಗೆ ಕಂಡು ಬರುವ ಆರೋಗ್ಯ ಸಮಸ್ಯೆಗಳು, ಕೆಲವೊಂದು ತಾತ್ಕಾಲಿಕವಾದರೆ ಇನ್ನು ಕೆಲವು ದೀರ್ಘಕಾಲ ಕಾಡುವ ಮಾರಕ ಸಮಸ್ಯೆಗಳಾಗಿ ತೊಂದರೆ ಕೊಡುತ್ತವೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ, ಇಂದಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವ ಜನತೆ, ಹಿರಿಯರು ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಹೃದಯಾಘಾತ. ಈ ಕಾಯಿಲೆಗೆ ಬಡವ ಬಲ್ಲಿದ ಎನ್ನುವ ಯಾವುದೇ ಭೇದವಿಲ್ಲ. ಅವರ ದೈನಂದಿನ ಜೀವನಶೈಲಿಯ ಆಧಾರದ ಮೇಲೆ ಅಥವಾ ಅವರಿಗೆ ಇರುವ ಕೆಲವೊಂದು ರೋಗ ಲಕ್ಷಣಗಳ ಆಧಾರದ ಮೇಲೆ ಹೃದಯಾಘಾತ ಉಂಟಾಗುತ್ತದೆ ಎಂದರು.

ನಿವೃತ್ತ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ. ಕೃಷ್ಣ ಮಾತನಾಡಿ, ನಿವೃತ್ತ ಸರ್ಕಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ನೌಕರರ ಹಿತದೃಷ್ಟಿಯಿಂದ ಪ್ರತಿ ತಿಂಗಳಲ್ಲೂ ಈ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಇಂತಹ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಆರೋಗ್ಯವಾಗಿ ತಮ್ಮ ಜೀವನ ರೂಪಿಸಿಕೊಳ್ಳಬೇಕಿದೆ ಎಂದರು.

ಈ ವೇಳೆ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ತಿರುಮಳಪ್ಪ, ಖಜಾಂಚಿ ಶ್ರೀನಿವಾಸರೆಡ್ಡಿ, ಸಂಘಟನಾ ಕಾರ್ಯದರ್ಶಿ ದಸ್ತಗಿರಿ ಸಾಬ್, ಡಾ.ಮುನಿಯಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಮತ್ತಿತರರು ಇದ್ದರು.

Share this article