ಹಾವೇರಿ: ಮನುಷ್ಯ ಪ್ರಕೃತಿಯ ಭಾಗ. ಪ್ರಕೃತಿ ಸಹಜ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಜೀವನ ಸಾಗಿಸಬಹುದು ಎಂದು ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಅಭಿಪ್ರಾಯಪಟ್ಟರು.
ಭಾರತದ ಸನಾತನ ಋಷಿಪರಂಪರೆ ನಮಗೆ ಯೋಗ, ಪ್ರಾಣಾಯಾಮದಂಥ ಅಪೂರ್ವ ವಿದ್ಯೆಯನ್ನು ಬಳುವಳಿಯಾಗಿ ನೀಡಿದೆ. ಔಷಧ ರಹಿತವಾಗಿ, ಸನಾತನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಮಗೆ ರೋಗಗಳು ಬರದಂತೆ ಹಾಗೂ ಬಂದ ರೋಗಗಳನ್ನು ಗುಣಪಡಿಸಲು ಕೂಡಾ ಪ್ರಕೃತಿ ಚಿಕಿತ್ಸೆಯಲ್ಲಿ ಅವಕಾಶವಿದೆ. ಪಾಶ್ಚಾತ್ಯ ಶೈಲಿಯ ಅಂಧಾನುಕರಣೆಯನ್ನು ತೊರೆದು ನಮ್ಮ ಸಹಜ, ಸುಂದರ ಜೀವನಶೈಲಿ ಅಳವಡಿಸಿಕೊಳ್ಳಿ ಎಂದು ಸಲಹೆ ಮಾಡಿದರು.
ನಮ್ಮ ಪಾರಂಪರಿಕ ಯೋಗ ಮತ್ತು ಜೀವನ ಪದ್ಧತಿ ಇಂದು ವಿಶ್ವಾದ್ಯಂತ ಜನಪ್ರಿಯವಾಗುತ್ತಿದೆ. ಔಷಧ ರಹಿತ ಚಿಕಿತ್ಸಾ ಪದ್ಧತಿ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಯೋಗ ನಮ್ಮ ಜೀವನಕ್ರಮವಾಗಬೇಕು. ಆಗ ಯಾವುದೇ ರೋಗ ನಮ್ಮನ್ನು ಬಾಧಿಸುವುದಿಲ್ಲ. ಇದರ ಜತೆಗೆ ನಮ್ಮ ಆಚಾರ- ವಿಚಾರ, ಆಹಾರ-ವಿಹಾರ, ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ರೋಗ ಬಾರದಂತೆ ತಡೆಯಬಹುದು ಎಂದರು.
ಲಯನ್ಸ್ ಅಧ್ಯಕ್ಷ ಎ.ಎಚ್. ಕಬ್ಬಿಣಕಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಶಿವರಾಜ ಮರ್ತೂರು, ರಮೇಶ ಪಾಟೀಲ, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಿ.ಡಿ.ಶಿರೂರು, ಎಸ್.ಎಸ್. ಮುಷ್ಟಿ, ವಿ.ಆರ್. ಹಾವನೂರು, ಸುಭಾಸ್ ಉಲ್ಲಾಳದ, ನಿತಿನ್ ಹೊರಡಿ, ಪಿ.ಸಿ. ಹಿರೇಮಠ, ಪೊಲೀಸ್ ವೃತ್ತ ನಿರೀಕ್ಷಕ ಮೋತಿಲಾಲ್ ಪವಾರ್, ಯೋಗ ಪ್ರಾಧ್ಯಾಪಕ ಡಾ. ಜಯರಾಂ ಭಾಗವಹಿಸಿದ್ದರು. 200ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.