ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಜಯಚಾಮರಾಜೇಂದ್ರ ವೃತ್ತದಲ್ಲಿ ರಾಜ್‌ಕುಮಾರ್ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಮುಖಂಡರು, ಡಾ.ರಾಜ್‌ಕುಮಾರ್ ಅವರು ಕನ್ನಡದ ಅಸ್ಮಿತೆಯ ಸಂಕೇತ. ಪಾತ್ರಗಳ ಮೂಲಕ ಸಾಮಾಜಿಕ ಸಂದೇಶವನ್ನು ನಿರಂತರವಾಗಿ ನೀಡಿದ ಅವರು, ಎಲ್ಲ ವರ್ಗಗಳು, ಎಲ್ಲ ವಯೋಮಿತಿಯ ಜನತೆಗೆ ಮಾದರಿ ಆಲೋಚನೆಗಳನ್ನು ಬಿತ್ತಿದರು. ಕನ್ನಡ ಚಳವಳಿ, ಹೋರಾಟ, ಭಾಷಾ ಅಸ್ಮಿತೆ, ನಾಡು-ನುಡಿಯ ಚಿಂತನೆಗಳಿಗೆ ಡಾ.ರಾಜ್‌ಕುಮಾರ್ ಅನ್ವರ್ಥ ಎಂಬಂತೆ ತನ್ನ ಬದುಕನ್ನು ರೂಪಿಸಿಕೊಂಡಿದ್ದರು ಎಂದು ತಿಳಿಸಿದರು.ದೊಡ್ಡಬಳ್ಳಾಪುರದೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಡಾ.ರಾಜ್‌ಕುಮಾರ್, ಕಂಪನಿ ನಾಟಕಗಳ ಕಾಲದಿಂದಲೂ ಈ ಊರಿನ ಜೊತೆ ಬಾಂಧವ್ಯ ಬೆಸೆದುಕೊಂಡಿದ್ದರು. ಕೆಸಿಎನ್ ಗೌಡರ ಅನೇಕ ಚಿತ್ರಗಳಲ್ಲಿ ಅವರು ಪಾತ್ರ ಮಾಡಿದ್ದು, ದೊಡ್ಡಬಳ್ಳಾಪುರ ಸುತ್ತಮುತ್ತಲ ಅನೇಕ ತಾಣಗಳಲ್ಲಿ ಅವರ ಹಲವು ಚಿತ್ರಗಳು ಚಿತ್ರೀಕರಣಗೊಂಡಿದ್ದವು ಎಂಬುದು ವಿಶೇಷ ಎಂದು ತಿಳಿಸಿದರು.
ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ಹಿರಿಯ ಕನ್ನಡಪರ ಹೋರಾಟಗಾರರಾದ ಜಿ.ಸತ್ಯನಾರಾಯಣ್, ಸಂಜೀವನಾಯಕ್, ಸಂಘಟನೆಗಳ ಮುಖಂಡರಾದ ಡಿ.ಪಿ.ಆಂಜನೇಯ, ರಾಜಘಟ್ಟ ರವಿ, ವಿ.ಪರಮೇಶ್, ವೆಂಕಟೇಶ್, ಮುನಿಪಾಪಯ್ಯ, ಗುರುರಾಜಪ್ಪ, ಜೆ.ಆರ್.ರಮೇಶ್, ಅಪ್ಪಿ ವೆಂಕಟೇಶ್, ಟಿ.ಜಿ.ಮಂಜುನಾಥ್, ಪ್ರಮೀಳಾ ಮಹದೇವ್, ಮಂಜುನಾಥ್, ಜಿ.ಸುರೇಶ್, ದೃವಕುಮಾರ್, ಡಿ.ಸಿ.ಚೌಡರಾಜು, ಮರುಳಾರಾಧ್ಯ, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್, ಪುನಿತ್‌ರಾಜ್‌ಕುಮಾರ್ ಸೇರಿದಂತೆ ವಿವಿಧ ಅಭಿಮಾನಿ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಪೆಹಲ್ಗಾಂ ಹುತಾತ್ಮರಿಗೆ ಸಂತಾಪ:ಇದೇ ವೇಳೆ ಕಾಶ್ಮೀರದ ಪೆಹಲ್‌ಗಾಂನಲ್ಲಿ ಉಗ್ರಗಾಮಿಗಳು ನಡೆಸಿದ ನರಮೇಧದಲ್ಲಿ ಬಲಿಯಾದ 26 ನಾಗರಿಕರಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. ಎಲ್ಲ ಕನ್ನಡ ಸಂಘಟನೆಗಳು ಉಗ್ರರ ದುಷ್ಕೃತ್ಯವನ್ನು ಖಂಡಿಸಿ, ಕೂಡಲೇ ಸರ್ಕಾರ ಸೂಕ್ತ ಪ್ರತ್ಯುತ್ತರ ನೀಡಬೇಕು. ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.