ಡಾ.ರಾಜ್‌ಕುಮಾರ್ ಜನಸಮೂಹದ ಸಾಂಸ್ಕೃತಿಕ ರಾಯಭಾರಿ: ಸಂದೇಶ್‌

KannadaprabhaNewsNetwork |  
Published : Apr 25, 2026, 01:30 AM IST
24ಕೆಎಂಎನ್ ಡಿ19 | Kannada Prabha

ಸಾರಾಂಶ

ಅಮೋಘ ಅಭಿನಯ ಮತ್ತು ಸಹಜ ನಡವಳಿಕೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಡಾ.ರಾಜ್‌ಕುಮಾರ್ ಜನಸಮೂಹದ ಸಾಂಸ್ಕೃತಿಕ ರಾಯಭಾರಿ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಮೋಘ ಅಭಿನಯ ಮತ್ತು ಸಹಜ ನಡವಳಿಕೆ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಡಾ.ರಾಜ್‌ಕುಮಾರ್ ಜನಸಮೂಹದ ಸಾಂಸ್ಕೃತಿಕ ರಾಯಭಾರಿ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಬಣ್ಣಿಸಿದರು. ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಶೆಟ್ಟಿ ಬಣ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆಯಲ್ಲಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ವ್ಯಕ್ತಿತ್ವ ಮತ್ತು ಪಾತ್ರಗಳ ಮೂಲಕ ಚಿತ್ರರಂಗದ ಒಳಗೆ ಮತ್ತು ಸಾರ್ವಜನಿಕವಾಗಿ ನಾಯಕತ್ವವನ್ನು ರೂಢಿಸಿಕೊಂಡ ಡಾ.ರಾಜ್‌ಕುಮಾರ್ ಅವರು, ಕನ್ನಡ ಚಿತ್ರರಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಚೇತನ ಎಂದು ಹೇಳಿದರು. 1954ರ ಸುಮಾರಿಗೆ ಚಿತ್ರರಂಗವನ್ನು ಪ್ರವೇಶಿಸಿ 14 ವರ್ಷಗಳಲ್ಲೇ 100ಕ್ಕೂ ಹೆಚ್ಚು ಚಿತ್ರಗಳನ್ನು ನೀಡಿದ ಡಾ.ರಾಜ್‌ಕುಮಾರ್ ಅವರ ಬಗ್ಗೆ ಇದುವರೆಗೂ 150ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದೆ. ಇದು ರಾಜ್‌ಕುಮಾರ್ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ರಾಜಕೀಯ ಪ್ರವೇಶ ಮತ್ತು ಪರಭಾಷಾ ಚಿತ್ರಗಳ ಅವಕಾಶಗಳು ಮನೆ ಬಾಗಿಲಿಗೆ ಬಂದರೂ ಅದನ್ನು ನಯವಾಗಿ ತಿರಸ್ಕರಿಸಿ ಕನ್ನಡದಲ್ಲೇ ಉಳಿಯುವ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಿದ್ದರು ಎಂದು ಬಣ್ಣಿಸಿದರು. ಕುವೆಂಪು ಅವರು ಪ್ರಕೃತಿಯಲ್ಲಿ ದೇವರನ್ನು ಕಂಡಂತೆ ರಾಜ್‌ಕುಮಾರ್ ಅವರು ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಅವರ ಎಲ್ಲ ಪಾತ್ರಗಳೂ ಸಮಾಜಕ್ಕೆ ಪೂರಕವಾಗಿ ಮತ್ತು ಸಾಮಾಜಿಕ ಬದಲಾವಣೆಗೆ ಪ್ರೇರಕವಾಗಿ ಇದ್ದವು. ಅವರ ಆದರ್ಶ ಇಂದಿನ ಕಲಾಜಗತ್ತಿಗೆ ಪ್ರಸ್ತುತವಾಗಿದೆ ಎಂದು ಹೇಳಿದರು. ಕರವೇ ಜಿಲ್ಲಾಧ್ಯಕ್ಷ ಡಿ. ಅಶೋಕ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮಂಡ್ಯ ನಗರದಲ್ಲಿ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿದ್ದೇವೆ. ಅವರ ಕಲೆಗೆ ಬೆಲೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪುತ್ಥಳಿ ನವೀಕರಣಕ್ಕೆ ಜನಪ್ರತಿನಿಧಿಗಳು ಸ್ಪಂಧಿಸಬೇಕು ಎಂದು ಹೇಳಿದರು.

ಡಾ. ರಾಜ್‌ಕುಮಾರ್ ಅವರ ಸುಧೀರ್ಘ ಕಲಾಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು. ಆ ಮೂಲಕ ಡಾ. ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಆಟೋ ಚಾಲಕರ ಘಟಕದ ಅಧ್ಯಕ್ಷ ಚಂದ್ರು, ಯುವ ಘಟಕದ ಅಧ್ಯಕ್ಷ ದರ್ಶನ್, ತಾಲೂಕು ಅಧ್ಯಕ್ಷೆ ರೇಣುಕಮ್ಮ, ಮುಖಂಡರಾದ ಎಂ. ಕೃಷ್ಣ, ಎಂ.ವಿ. ಮಂಚಶೆಟ್ಟಿ, ಶಿಕ್ಷಕ ಗೋಪಿನಾಥ್, ಮಂಜುಳಾ, ವೀಣಾ ಮಂಜುನಾಥ್, ಧನಂಜಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ: ವಿ.ಕೆ.ಜಗದೀಶ್
ಡಾ.ರಾಜ್‌ ಇಂದಿಗೂ ಪ್ರತಿಯೊಬ್ಬರ ಮನಸ್ಸಲ್ಲಿ ಜೀವಂತ: ದೊಡ್ಡಯ್ಯ