ಪುಸ್ತಕೋದ್ಯಮದ ನೆರವಿಗೆ ಸರ್ಕಾರ ಧಾವಿಸಲಿ

KannadaprabhaNewsNetwork | Published : Jan 8, 2025 12:16 AM

ಸಾರಾಂಶ

ಗುಣಮಟ್ಟದ ಪುಸ್ತಕಗಳು ಓದುಗರಿಗೆ ಸುಲಭವಾಗಿ ದೊರೆಯುವಂತಾಗಬೇಕು. ಇಲ್ಲದಿದ್ದರೇ ಭಾಷಾ ಸಂಸ್ಕೃತಿಯೇ ನಶಿಸಿ ಹೋಗುವ ಆತಂಕ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಆಧುನಿಕ ಯುಗದಲ್ಲಿ ಕೃತಿಗಳನ್ನು ಓದುವ ಜನ, ಬರವಣಿಗೆಯನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಮಾರಾಟ ಮಾಡುವ ಪ್ರಕಾಶಕರು ಬೇಕಾಗಿದ್ದಾರೆ. ಹೀಗಾಗಿ, ಸಂಕಷ್ಟದಲ್ಲಿರುವ ಪುಸ್ತಕೋದ್ಯಮ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಎ. ಶಂಕರ್ ತಿಳಿಸಿದರು.

ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಕಲಾಕೂಟ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಸಿಪಿಕೆ ಅವರ ‘ಚಿಂತನ ಚಿಂತಾಮಣಿ’ ಬೃಹತ್ ಗ್ರಂಥವನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಗುಣಮಟ್ಟದ ಪುಸ್ತಕಗಳು ಓದುಗರಿಗೆ ಸುಲಭವಾಗಿ ದೊರೆಯುವಂತಾಗಬೇಕು. ಇಲ್ಲದಿದ್ದರೇ ಭಾಷಾ ಸಂಸ್ಕೃತಿಯೇ ನಶಿಸಿ ಹೋಗುವ ಆತಂಕ ಇದೆ. ಭಾಷೆ ಬಳಕೆ, ಸಮೃದ್ಧ ಬರವಣಿಗೆ ಮತ್ತು ಅದನ್ನು ಮುದ್ರಿಸಿ ಜನರಿಗೆ ತಲುಪಿಸದಿದ್ದರೆ ಭಾಷಾ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಪುಸ್ತಕ ಪ್ರಕಾಶನ ಮತ್ತು ಮಾರಾಟ, ಗ್ರಂಥಾಲಯ ಕ್ಷೇತ್ರ ಅಡೆತಡೆಗಳಲ್ಲಿ ಹೊಯ್ದಾಡುತ್ತಿದೆ. ಇದು ಸಂಕಷ್ಟದ ಕಾಲ. ಕೃತಿಗಳು ಮಾರಾಟವಾಗುತ್ತಿಲ್ಲ. ಓದುಗರಿಗೂ ತಲುಪುತ್ತಿಲ್ಲ. ಜನರಲ್ಲಿ ಓದುವ ಹವ್ಯಾಸವೂ ಕಡಿಮೆಯಾಗಿದೆ. ಹೀಗಾದರೆ, ಭಾಷಾ ಸಂಸ್ಕೃತಿ ಬೆಳವಣಿಗೆ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಮುದ್ರಣ ರೂಪದಲ್ಲಿ ಹೊರಬಂದ ಮೇಲೆ ಕೃತಿಗಳು ಲೇಖಕರ ಸ್ವತ್ತಲ್ಲ. ಅದು ಓದುಗರ ಮತ್ತು ಭಾಷಾ ಸಂಸ್ಕೃತಿಯ ಸ್ವತ್ತು. ಅದಕ್ಕೆ ಕೃತಿ ಲೋಕಾರ್ಪಣೆ ಎಂದು ಹೇಳುವುದು. ಡಾ. ಸಿಪಿಕೆ ರಚಿಸಿರುವ ‘ಚಿಂತನ ಚಿಂತಾಮಣಿ’ ಒಂದು ಗ್ರಂಥವಲ್ಲ, ಹಲವು ಲೇಖನಗಳನ್ನು ಒಳಗೊಂಡಿದೆ. ಒಂದೊಂದು ಲೇಖನದಲ್ಲಿ ಒಂದೊಂದು ವಿಷಯ ವಸ್ತುವಿದೆ. ಇದು ಒಂದು ಗ್ರಂಥವಲ್ಲ. ಒಬ್ಬ ಲೇಖಕ ಏಕಾಂಗಿಯಾಗಿ ಸೃಷ್ಟಿ ಮಾಡಿರುವ ವಿಶ್ವಕೋಶ. ಇಲ್ಲಿರುವ ವಸ್ತುವಿಷಯ ಬೇರೆ ಕಡೆ ಸಿಗುವುದಿಲ್ಲ ಎಂದು ಅವರು ತಿಳಿಸಿದರು.

ಸಿಪಿಕೆ ಅವರು ಓದಿದ ವಿಚಾರಗಳನ್ನು ಟಿಪ್ಪಣಿ ಮಾಡಿಕೊಂಡು ಅದರ ಆಧಾರದಲ್ಲಿ ತಾಳ್ಮೆಯಿಂದ ಶಿಸ್ತಿನಿಂದ ಈ ಬೃಹತ್ ಗ್ರಂಥವನ್ನು ರಚಿಸಿದ್ದಾರೆ. ವಿಶ್ವವಿದ್ಯಾಲಯದ ಅಧ್ಯಯನ ವಿಭಾಗಗಳು ಮಾಡುವ ಕೆಲಸವನ್ನು ಡಾ. ಸಿಪಿಕೆ ಅವರು ಏಕಾಂಗಿಯಾಗಿ ಮಾಡಿದ್ದಾರೆ. ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ದೊಡ್ಡ ಕಾಣಿಕೆ ಎಂದು ಅವರು ಹೇಳಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ವಾಂಸ ಎಚ್.ವಿ. ನಾಗರಾಜ್‌ ರಾವ್, ಹಿರಿಯ ಸಾಹಿತಿ ಡಾ. ಸಿಪಿಕೆ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ಇದ್ದರು.

Share this article