ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಸುಕ್ಷೇತ್ರ ಯರನಾಳ ಗ್ರಾಮದ ವಿರಕ್ತಮಠದ ಲಿಂ.ಪಂಪಾಪತಿ ಶಿವಯೋಗಿ ಜಾತ್ರಾಮಹೋತ್ಸವ ಹಾಗೂ ಗುರುಸಂಗನಬಸವ ಸ್ವಾಮೀಜಿಗಳ ಜನ್ಮಸುವರ್ಣ ಮಹೋತ್ಸವದಂಗವಾಗಿ ೧೭ ದಿನ ಕಾಲ ಹಮ್ಮಿಕೊಂಡಿರುವ ಸೊನ್ನಲಾಪೂರದ ಶಿವಯೋಗಿ ಸಿದ್ದರಾಮೇಶ್ವರ ಚರಿತ್ರೆ ಪುರಾಣದಲ್ಲಿ ಸೋಮವಾರ ಸಂಜೆ ದಾಸೋಹ ದಿನದಂಗವಾಗಿ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಡಾ.ಶಿವಕುಮಾರ ಸ್ವಾಮೀಜಿ ಅವರು ತಮಗಾಗಿ ಬದುಕದೇ ಇಡೀ ಸಮಾಜಕ್ಕಾಗಿ ಬದುಕಿದ ಸಂತ. ಇನ್ನೊಬ್ಬರ ಬದುಕು ಸುಂದರ ಮಾಡಬೇಕೆಂಬ ಸದುದ್ದೇಶದಿಂದ ನಾಡಿನ ಲಕ್ಷಾಂತರ ಮಕ್ಕಳಿಗೆ ಬೆಳಕಾದರು. ಇಡೀ ಸಮಾಜದ ಒಳಿತಿಗಾಗಿ ಶ್ರಮಿಸಿದರು. ಬಂಥನಾಳದ ಸಂಗನಬಸವ ಶಿವಯೋಗಿಗಳಂತೆ ಶಿವಕುಮಾರ ಸ್ವಾಮೀಜಿಯವರು ದಾಸೋಹಕ್ಕೆ ಮಹತ್ವ ನೀಡಿದ್ದರು. ಬಸವ ಪರಂಪರೆಯನ್ನು ಯಡಿಯೂರ ಸಿದ್ದಲಿಂಗೇಶ್ವರರು ಜಾಗೃತಿಗೊಳಿಸಿದರು. ದಾಸೋಹ, ಕಾಯಕ, ಶೈಕ್ಷಣಿಕ ಸೇವೆ ವಿರಕ್ತಮಠದ ಪರಂಪರೆಯಾಗಿದೆ ಎಂದರು.
ನಾವೆಲ್ಲರೂ ಆರ್ಯ ಪದ್ಧತಿ ಕೈಬಿಡಬೇಕಿದೆ. ಪುರುಷ ಪ್ರಧಾನ ಸಮಾಜ ಅಳಿದು ತಾಯಿಂದಿರಿಗೂ ಗೌರವ ಸಿಗುವಂತಾಗಬೇಕು. ಅಂದಾಗ ಬಸವೇಶ್ವರರ ಸಮಾನತೆಗೆ ಒಂದು ಮೌಲ್ಯ ಬರಲು ಸಾಧ್ಯ. ಲಿಂಗ ಕಟ್ಟಿಕೊಂಡ ಎಲ್ಲ ಮಹಿಳೆಯರೂ ಸುಮಂಗಲೆಯರೇ ಆಗಿದ್ದಾರೆ. ನಮ್ಮ ಜಾತ್ರಾಮಹೋತ್ಸವದಲ್ಲಿ ಲಿಂಗ ಕಟ್ಟಿಕೊಂಡ ಎಲ್ಲ ಮಹಿಳೆಯರಿಗೆ ಏ.13 ರಂದು ಉಡಿ ತುಂಬುವ ಕಾರ್ಯಕ್ರಮ ಮಾಡಲಾಗುವುದು. ನಮ್ಮ ಜನ್ಮ ಸುವರ್ಣ ಮಹೋತ್ಸವದಂಗವಾಗಿ ೫೦ ಸಾವಿರ ಸಸಿಗಳನ್ನು ನೆಡುವ ಸಂಕಲ್ಪ ಇದೆ. ನಾವು ಮುಂಬರುವ ದಿನಗಳಲ್ಲಿ ಪ್ರಸಾದ ರೂಪದಲ್ಲಿ ಭಕ್ತರಿಗೆ ಸಸಿಗಳನ್ನು ನೀಡಿ ಅವು ಬೆಳೆಯುವಂತೆ ನೋಡಿಕೊಳ್ಳಬೇಕೆಂದು ಹೇಳುವುದಾಗಿ ಹೇಳಿದರು.ಹೂವಿನಹಿಪ್ಪರಗಿ ಪತ್ರಿವನ ಮಠದ ದ್ರಾಕ್ಷಾಯಿಣಿ ಅಮ್ಮನವರು ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರು ಮಕ್ಕಳನ್ನು ದೇವರೆಂದು ಭಾವಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನುಪಮ. ನಾಡಿನ ವಿವಿಧ ಭಾಗಗಳಲ್ಲಿ ಸಿದ್ದಗಂಗಾ ಮಠದಲ್ಲಿ ಅಧ್ಯಯನ ಮಾಡಿದವರನ್ನು ಕಾಣುತ್ತೇವೆ ಎಂದ ಅವರು, ಅನ್ನದಾನ ಭಗವಂತನಿಗೆ ತಲುಪುತ್ತದೆ. ಪ್ರಸಾದದಿಂದ ಪ್ರಸನ್ನತೆ ಉಂಟಾಗಿ ಬುದ್ದಿ ಪರಿವರ್ತನೆಯಾಗಿ ನಮ್ಮಲ್ಲಿರುವ ದುರ್ಗುಣ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದಾಸೋಹ ಸೇವೆ ಮಾಡಬೇಕೆಂದರು.
ವಿಜಯಪುರದ ಶಾಂತಾಶ್ರಮದ ಗುರುಶಾಂತೇಶ್ವರ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಪ್ರತಿಯೊಬ್ಬರೂ ಪರಮಶಾಂತಿಯನ್ನು ಅರಸುತ್ತಾರೆ. ಈ ಪರಮಶಾಂತಿ ಸಿಗಬೇಕಾದರೆ ದಾಸೋಹ ಸೇವೆ ಮಾಡಬೇಕು. ಪ್ರತಿಯಾಗಿ ಏನನ್ನು ಬಯಸದೇ ಇರುವುದೇ ದಾಸೋಹ. ಪ್ರತಿಯೊಬ್ಬರೂ ಕೊಡುವುದನ್ನು ಕಲಿಯಬೇಕು. ಪ್ರಕೃತಿ ನಮಗೆ ಸಾಕಷ್ಟು ಕೊಡುತ್ತದೆ. ನಮ್ಮಿಂದ ಅದು ಎಂದಿಗೂ ಏನನ್ನು ಬಯಸುವುದಿಲ್ಲ. ಈ ತತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದರು.ವೇದಿಕೆಯಲ್ಲಿ ಪ್ರವಚನಕಾರ ಕೊಡೆಕಲ್ಲದ ಗಂಗಾಧರ ಶಾಸ್ತ್ರೀಜಿ, ಬಸವರಾಜ ಮಣ್ಣೂರ ಇದ್ದರು. ವಿರೇಶ ವಾಲಿ, ಸಿದ್ದಾರ್ಥ ಬೈಚಬಾಳ, ಬಾಗೇಕುಮಾರ ಗಂಗಾಪೂರ, ಪುನೀತ ತಾವರಖೇಡ ಅವರಿಂದ ಸಂಗೀತ ಸುಧೆ ಹರಿಯಿತು. ಶರಣಬಸು ಹಳೆಮನಿ ನಿರೂಪಿಸಿದರು.