ಕನ್ನಡಪ್ರಭ ವಾರ್ತೆ ತಿಪಟೂರು
ಧರ್ಮಾತೀತ, ಜಾತ್ಯಾತೀತ ತತ್ವಗಳ ತಳಹದಿಯ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಗಲಿರುಳು ಕಾಯಕ ಮಾಡುತ್ತಾ ಜೀವನ ನವೆಸಿದ ಸಂತ ಶ್ರೇಷ್ಠ ಶರಣರೇ ಡಾ. ಶಿವಕುಮಾರಸ್ವಾಮೀಜಿಗಳೆಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.ನಗರದ ಎಸ್‌ವಿಪಿ ಪದವಿ ಪೂರ್ವ ಕಾಲೇಜು ಹಾಗೂ ಸುಮತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಡಾ. ಶಿವಕುಮಾರಸ್ವಾಮೀಜಿ ಅವರ ೫ನೇ ವರ್ಷದ ಪುಣ್ಯಸಂಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಶಿವಕುಮಾರಸ್ವಾಮೀಜಿ ಅವರು ಸಿದ್ಧಗಂಗ ಸುಕ್ಷೇತ್ರದ ಏಳಿಗೆಗೆ ಕಂಕಣಬದ್ದರಾಗಿದ್ದರು. ಸಮಾಜದ ಸರ್ವಾಂಗೀಣ ಏಳಿಗೆಗೆ ಶಿಕ್ಷಣವೇ ಮೂಲ ಎಂಬುದನ್ನು ಮನಗಂಡು ಶ್ರೀಮಠದಲ್ಲಿ ಉಚಿತ ಅನ್ನ, ಆಶ್ರಯ, ವಿದ್ಯಾದಾನ ಕೊಟ್ಟು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದರು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಸರ್ವ ಜನಾಂಗದವರಿಗೆ ಸಾಮರಸ್ಯದ ಭಾವನೆಗಳನ್ನ ಬೆಳೆಗೆ ಅವಿಮುಕ್ತ ಸುಕ್ಷೇತ್ರವನ್ನಾಗಿಸಿದ್ದರು. ಹನ್ನೆರಡನೆ ಶತಮಾನದ ಬಸವಾದಿ ಪ್ರಮಥರ ಕಾಯಕ ನಿಷ್ಠೆ, ಶರಣರ ಸಂಸ್ಕೃತಿ, ಸಮ ಸಮಾಜದ ಪರಿಕಲ್ಪನೆಗಳನ್ನು ಅಳವಡಿಸಿಕೊಂಡು ಆಧುನಿಕ ಬಸವಣ್ಣನೆನಿಸಿಕೊಂಡಿದ್ದಾರೆ ಎಂದರು.
ದೈಹಿಕ ಶಿಕ್ಷಕ ಬಿ.ಆರ್. ಉದಯ್‌ಶಂಕರ್ ಮಾತನಾಡಿ, ಸಿದ್ಧಗಂಗಾ ಶ್ರೀಗಳವರು ಜ್ಞಾನದ ಸಿದ್ಧಿಯನ್ನು ಪಡೆದುಕೊಂಡಿದ್ದರು. ಬದುಕಿನಲ್ಲಿ ಬರುವ ಕಷ್ಟಕೋಟಲೆಗಳನ್ನು ಹೇಗೆ ಎದುರಿಸಬೇಕು ಎಂಬ ಪಾಠವನ್ನು ಸರಳವಾಗಿ ತಿಳಿಸಿಕೊಟ್ಟಿದ್ದರು. ವಿಘಟಿತ ಸಮಾಜಗಳನ್ನು ಒಗ್ಗೂಡಿಸಲು ಆಧ್ಯಾತ್ಮದ ತಿಳುವಳಿಕೆಗಳನ್ನು ನೀಡಿದ್ದರು. ದಾಸೋಹದ ಪರಿಕಲ್ಪನೆಯನ್ನು ಜಾರಿಗೆ ತಂದು ಜಗತ್ತಿಗೆ ಮಾದರಿಯಾದರು. ಹಣ, ಸಂಪತ್ತಗಳನ್ನ ಕೂಡಿಡದೆ ಸಮಾಜದ ಏಳಿಗೆಗೆ ವಿನಿಯೋಗಿಸಿದ ತ್ಯಾಗಮಯಿಗಳಾದರು ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ವಿಜಯಕುಮಾರಿ, ವಿಜಯಕುಮಾರ, ಶಿಕ್ಷಕರಾದ ಸಿದೇಶ್, ಸಂತೋಷ್, ಬಸವರಾಜು, ವೀರೇಶ್, ಪ್ರದೀಪ್, ಪದ್ಮಾ, ದೇವರಾಜು, ಜುಂಜಯ್ಯ, ಮಂಜಯ್ಯ, ಶಾಂತಕುಮಾರ್, ಇಂದ್ರಮ್ಮ, ವೆಂಕಟೇಶ್ ಮತ್ತಿತರರಿದ್ದರು.