ಪಾಳುಬಿದ್ದ ಶತಮಾನ ಕಂಡ ಸರ್ಕಾರಿ ಶಾಲೆ ಕಂಡು ಡಾ.ತಿಪ್ಪೇಸ್ವಾಮಿ ಕಿಡಿ ಆಕ್ರೋಶ

KannadaprabhaNewsNetwork | Published : Mar 20, 2024 1:20 AM

ಸಾರಾಂಶ

ಪಾಳುಬಿದ್ದ ಕಟ್ಟಡಗಳು, ಬಣ್ಣಕಂಡು ದಶಕಗಳೇ ಕಳೆದಿರುವ ಗೋಡೆಗಳು, ಮುರಿದು ಹೋದ ಕಬ್ಬಿಣದ ಶೀಟ್ ಗಳು, ಎಲ್ಲಿ ನೋಡಿದರು ದೊಳೋ ದೂಳು. ಇದೆಲ್ಲವೂ ನಗರದ ಶಕ್ತಿಕೇಂದ್ರ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಕೂಗಳತೆ ದೂರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಕಂಡುಬಂದ ಚಿತ್ರಣ.

ಕನ್ನಡಪ್ರಭ ವಾರ್ತೆ ತುಮಕೂರು

ತುಮಕೂರು ನಗರದಲ್ಲಿ 1861 ರಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ ವಾರ್ಷಿಕ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದ ಕಾಲವೊಂದಿತ್ತು. ಆದರೆ ಸದ್ಯ ಈ ಶಾಲೆಯಲ್ಲಿ ಇಂದು ಕೇವಲ 48 ಮಕ್ಕಳು ಮಾತ್ರ ದಾಖಲಾಗಿರುವುದು ಅವಸಾನವನ್ನು ಸೂಚಿಸುತ್ತದೆ. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿದ್ದು, ಅಭಿವೃದ್ಧಿಗೊಳ್ಳಬೇಕಿದ್ದ ಈ ಶಾಲೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಪರ್ಯಾಕವೇ ಸರಿ.

ಶಾಲೆಗೆ ಪೂರ್ಣ ಪ್ರಮಾಣದ ಕಾಂಪೌಡ್ ಇಲ್ಲದ ಕಾರಣ ರಾತ್ರಿ ಇದು ಅನೈತಿಕ ತಾಣವಾಗಿದ್ದು ಬೆಳಗ್ಗೆ ಸ್ವಚ್ಛಗೊಳಿಸಲು ಕಸಿವಿಸಿಯಾಗುತ್ತದೆ. ಶಾಲೆಯ ಬಾಗಿಲು, ಕಿಟಕಿಗಳನ್ನು ಹೊಡೆಯುವುದು, ನೀರಿನ ಸಿಂಟೆಕ್ಸ್ ಹೊಡೆದುಹಾಕುವುದು, ನೀರಿನ ನಲ್ಲಿ ಮುರಿಯುವುದು ಹೀಗೆ ರಕ್ಷಣೆಯಿಲ್ಲದೆ ಸಮಸ್ಯೆಯಲ್ಲಿ ನಲುಗುತ್ತಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಸದಸ್ಯರ ಬಳಿ ತಮ್ಮ ಅಳಲು ತೋಡಿಕೊಂಡರು.

ಸದಸ್ಯರ ಭೇಟಿಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ತುಮಕೂರು ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಸೂರ್ಯಕಲಾ, ಶಾಲೆಯ ಮೂಲಭೂತ ಸೌಕರ್ಯ ಒದಗಿಸಲು ತಾವು ಮಾಡಿರುವ ಪ್ರಯತ್ನಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಈ ಎಲ್ಲಾ ಅಂಶಗಳನ್ನು ಗಮನಿಸಿದ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಈ ಶಾಲೆಯ ಬಗ್ಗೆ ದೂರು ದಾಖಲಾಗಿದ್ದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಕಾನೂನು ಕೋಶದ ಅಧಿಕಾರಿಗಳಿಗೆ ಸೂಚಿಸಿದರು.

Share this article