ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಕಾಲದಲ್ಲಿ ಗರ್ಭಿಣಿ ತಾಯಂದಿರು ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಮರಣದ ಶಂಕೆಯನ್ನು ದೂರ ಮಾಡಬೇಕೆಂದು ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಬಿ.ವಿ. ಗಿರೀಶ್ ಸಲಹೆ ನೀಡಿದರು.ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಗರ್ಭಿಣಿ ತಾಯಂದಿರುಗಳಿಗೆ ಮಾಹಿತಿ ನೀಡಿದರು.
ಪ್ರತಿ ತಿಂಗಳು 9ನೇ ತಾರೀಕು ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದು. ಗರ್ಭಿಣಿ ತಾಯಂದಿರು ಪರೀಕ್ಷೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು. ಒಂದು ಲಕ್ಷ ಜೀವಂತ ಜನನಕ್ಕೆ ರಾಜ್ಯದಲ್ಲಿ ತಾಯಿ ಮರಣ ದರ 70 ಇದೆ. ಚಿತ್ರದುರ್ಗ ಜಿಲ್ಲೆಯಲ್ಲಿ ತಾಯಿ ಮರಣ ದರ 69 ಇದ್ದು ಯಾವುದೇ ತಾಯಿಯು ಗರ್ಭವತಿ ಎಂಬ ಕಾರಣದಿಂದ ಮರಣ ಹೊಂದಬಾರದು. ತಾಯಿ ಮರಣ ತಗ್ಗಿಸಲು ವೈದ್ಯರಲ್ಲಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೇಗೌಡ ಮಾತನಾಡಿ, ಸರ್ಕಾರದ ಯೋಜನೆಗಳು ಗ್ರಾಮಾಂತರ ಪ್ರದೇಶದ ಕಟ್ಟ ಕಡೆಯ ತಾಯಿಗೂ ತಲುಪಿಸುವ ನಿಟ್ಟಿನಲ್ಲಿ ಜನನಿ ಸುರಕ್ಷಾ ಯೋಜನೆ, ಜೆಎಸ್ಎಸ್‌ಕೆ ಉಪಯುಕ್ತ ಯೋಜನೆಗಳಾಗಿವೆ. ಗರ್ಭಿಣಿ ತಾಯಂದಿರುಗಳು ಪ್ರತಿ ತಿಂಗಳು ಒಂಬತ್ತನೇ ತಾರೀಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೊಳಪಟ್ಟು ಇದರ ಪ್ರಯೋಜನ ಪಡೆಯಬೇಕೆಂದರು.
ಮಧುಮೇಹ, ರಕ್ತದೊತ್ತಡ, ಅಸ್ತಮಾ, ಹಿಂದಿನ ಹೆರಿಗೆ ಸಿಜರಿನ್ ಆದವರು, ಅವಳಿ ಮಕ್ಕಳ ಹೊಂದಿದವರಿಗೆ ಪ್ರತಿ ತಿಂಗಳು 24 ನೇ ತಾರೀಖಿನಂದು ವಿಶೇಷ ಗರ್ಭಿಣಿಯರ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುವುದು, ರಕ್ತ ಹೀನತೆ ತಡೆಯಲು ಕಬ್ಬಿನಾಂಶ ಮಾತ್ರೆ ಹಾಗೂ ಇತರೆ ಸೇವಾ ಸೌಲಭ್ಯ ಪಡೆದು ತಾಯಂದಿರು ಆರೋಗ್ಯವಂತ ಮಗುವನ್ನು ಹೆತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದರು.ಪ್ರಸೂತಿ ತಜ್ಞೆ ಡಾ. ಪವಿತ್ರ ಮಾತನಾಡಿ, ಕೇಂದ್ರ ಸ್ಥಾನದಲ್ಲಿ ಇರುವ ನಾವು ನಿಮ್ಮೊಂದಿಗಿದ್ದೇವೆ, ತಮ್ಮ ಗ್ರಾಮಗಳ ಸಮೀಪವೇ ಹೆರಿಗೆ ಸೇವಾ ಸೌಲಭ್ಯ ಇರುವುದು ತಮಗೆಲ್ಲಾ ಸಂತೋಷದ ವಿಷಯ. ಗ್ರಾಮಾಂತರ ಪ್ರದೇಶದಲ್ಲಿ ಹೆರಿಗೆ ಮಾಡಿಸಿ ಜಿಲ್ಲಾ ಆಸ್ಪತ್ರೆಯಲ್ಲಿನ ಹೊರೆ ತಗ್ಗಿಸಿ. ತುರ್ತು ಸಂದರ್ಭದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗೆ ಕಳುಹಿಸಲು ಆಂಬುಲೆನ್ಸ್ ವ್ಯವಸ್ಥೆ ಇರುವುದರಿಂದ ಯಾರೂ ಭಯಭೀತರಾಗದೆ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆಯೂ ಹೆರಿಗೆ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ತುಳಸಿ ರಂಗನಾಥ್, ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್, ಶುಶ್ರೂಷತಾಧಿಕಾರಿ ತಾರ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಪರ್ವೀನ್, ಸುಶೀಲ, ಆಶಾ ಕಾರ್ಯಕರ್ತೆಯರು ಮೂವತ್ತಕ್ಕೂ ಹೆಚ್ಚು ಗರ್ಭಿಣಿ ತಾಯಂದಿರು ಭಾಗವಹಿಸಿದ್ದರು.