ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಜಮಖಂಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ತೆರಳುವ ಮುನ್ನ ನಗರದ ಶ್ಯಾಮ್ ಜಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದೂಗಳ ಜನಸಂಖ್ಯೆ ಹೆಚ್ಚಾಗಬೇಕಿದೆ. ಅದಕ್ಕಾಗಿ ಹಿಂದೂ ದಂಪತಿಗಳು ಕನಿಷ್ಠ ಮೂರು ಮಕ್ಕಳನ್ನು ಹೆರಬೇಕೆಂದು ಕರೆ ನೀಡಿದರು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಜೂ.21ರಿಂದ ಹಿಂದೂ ಸುರಕ್ಷಾ ಅಭಿಯಾನ ಆರಂಭಿಸಲಾಗುತ್ತಿದೆ. ಪ್ರತಿ ಶನಿವಾರ ದೇವಸ್ಥಾನ ಹಾಗೂ ಮನೆಗಳಲ್ಲಿ ಹನುಮಾನ್ ಚಾಲಿಸಾ ಪಠಣ ನಡೆಸಲಾಗುತ್ತದೆ. ಸಂಘಟನೆಯಿಂದ ಹಿಂದು ಬಡ ವಿದ್ಯಾರ್ಥಿಗಳಿಗೆ ಶಾಲೆಯ ಶುಲ್ಕ ಭರಿಸಲು ನೆರವು ನೀಡಲಾಗುತ್ತದೆ. ಹಿಂದುಗಳಿಂದ ಖರೀದಿ, ಹಿಂದುಗಳಿಗೆ ಮಾರಾಟ ಹಾಗೂ ಹಿಂದುಗಳಿಗೆ ಉದ್ಯೋಗ ಒದಗಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಅಭಿಯಾನ ಬ್ರಹ್ಮೋಸ್ ಮಿಸೈಲ್‌ನಂತೆ ಹಿಂದುಗಳಿಗೆ ಶಕ್ತಿ ನೀಡಲಿದೆ ಎಂದರು.2018ರಲ್ಲಿ ನಮ್ಮ ಸಂಘಟನೆಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 1 ಲಕ್ಷ ಜನರನ್ನು ಸೇರಿ ಹೋರಾಟ ಮಾಡಲಾಯಿತು. 578 ಸ್ಥಳಗಳಲ್ಲಿ ಉಚಿತ ಆಹಾರ ಒದಗಿಸುವ ಕೇಂದ್ರ ತೆರೆಯಲಾಗಿತ್ತು. ಕುಂಭಮೇಳದಲ್ಲಿ ಒಂದೂವರೆ ಕೋಟಿ ಜನರಿಗೆ ಊಟದ ವ್ಯವಸ್ಥೆ, 5 ಲಕ್ಷ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇಶದೆಲ್ಲೆಡೆ ಹಿಂದೂಗಳ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ ದೊರೆತ ನಂತರ ಭಾರತ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿದೆ. ಆದರೆ ಶಿಕ್ಷಣ ದುಬಾರಿಯಾಗುತ್ತಿದೆ. ನಿರುದ್ಯೋಗ ಹೆಚ್ಚಾಗಿದೆ. ರೈತರ ಬೆಳೆಗಳಿಗೆ ಬೆಲೆ ದೊರೆಯುತ್ತಿಲ್ಲ. ಇಂದು ವೈದ್ಯಕೀಯ ಸೀಟ್‌ಗಾಗಿ ₹50 ಲಕ್ಷ ಭರಿಸುವ ಸ್ಥಿತಿಯಿದೆ. ಹೀಗಾದರೆ ಬಡವರು ವೈದ್ಯರಾಗುವುದು ಕಷ್ಟದ ವಿಷಯ ಎಂದಷ್ಟೇ ಉತ್ತರಿಸಿದರು.
ಬಿಜೆಪಿಯೊಂದಿಗೆ ನಂಟು ಬೆಳೆಸುತ್ತೀರಾ? ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಆಡಳಿತದ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಹಿಂದುತ್ವಕ್ಕೆ ಗೌರವ ನೀಡುತ್ತೇನೆ. ಎಲ್ಲ ಹಿಂದುಗಳು ನನ್ನ ಸಹೋದರರು. ನನ್ನ ಹೃದಯ ವಿಶಾಲವಾಗಿದೆ. ಎಲ್ಲರನ್ನೂ ಸ್ವಾಗತಿಸುತ್ತೇನೆ ಎಂದು ಮಾತಿಗೆ ವಿರಾಮ ಹೇಳಿದರು.ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ಕುಲಕರ್ಣಿ, ಮುಖಂಡರಾದ ಘನಶ್ಯಾಂ ಭಾಂಡಗೆ, ಶಿವು ಓಬಳಿ, ರಾಘವೇಂದ್ರ ಬಿಸನಾಳ, ಅಶೋಕ ಮುತ್ತಿನಮಠ, ಬಸವರಾಜ ಕಟಗೇರಿ ಇತರರು ಇದ್ದರು.