ಡಾ.ಯಾಕೊಳ್ಳಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

KannadaprabhaNewsNetwork | Published : Mar 11, 2025 12:52 AM

ಸಾರಾಂಶ

ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ವೈ.ಎಂ. ಯಾಕೊಳ್ಳಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ವೈ.ಎಂ. ಯಾಕೊಳ್ಳಿ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಡಾ.ವೈ.ಎಂ.ಯಾಕೊಳ್ಳಿ ಅವರು ಮೂಲತಃ ಬಾದಾಮಿ ತಾಲೂಕಿನ ನೀರಬೂದಿಹಾಳ ಗ್ರಾಮದವರು. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಖಾಂಡ ವಾಗ್ಮಿಗಳಾಗಿ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ವಿದ್ವತ್ ಪೂರ್ಣ ಭಾಷಣಗಳಿಂದ ಜನಮನ್ನಣೆ ಗಳಿಸಿದ್ದಾರೆ. ಕಥೆ, ಕಾವ್ಯ, ಚುಟುಕ, ಹೈಕು, ನಾಟಕ, ವಿಮರ್ಶೆ, ಜಾನಪದ ಪ್ರಕಾರಗಳು ಸೇರಿದಂತೆ ಕನ್ನಡ ಸಾರಸ್ವತ ಲೋಕಕ್ಕೆ 50ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ.

ಇವರ ಸುದೀರ್ಘ ಸಾಹಿತ್ಯ ಸೇವೆ ಪರಿಗಣಿಸಿ, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾದಾಮಿ ಇವರ ಸಹಯೋಗದಲ್ಲಿ ಮಾ.22, 23ರಂದು ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ನಡೆಯುವ ಬಾಗಲಕೋಟೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ತಿಳಿಸಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಧ್ವಜಾರೋಹಣ, ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಸಾಹಿತ್ಯ, ಕಲೆ, ಇತಿಹಾಸ, ಸಂಸ್ಕೃತಿ, ಜಾನಪದ, ಕೃತಿ ಲೋಕಾರ್ಪಣೆ, ಸಮೂಹ ಮಾಧ್ಯಮ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಕವಿಗೋಷ್ಠಿ, ಸಾಧಕರ ಸನ್ಮಾನ, ಮುಂತಾದ ವಿಷಯಗಳ ಮೇಲೆ ಗೋಷ್ಠಿ , ಉಪನ್ಯಾಸ , ಸಂವಾದ ಹಾಗೂ ಪ್ರಸಾರ ಕಾರ್ಯಕ್ರಮ ನಡೆಯಲಿವೆ.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ, ಸಂಘಟನಾ ಕಾರ್ಯದರ್ಶಿಗಳಾದ ಶಂಕರ ಹೂಲಿ, ಸಿ.ಎಸ್. ನಾಗನೂರ, ಬಾದಾಮಿ ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ, ತಾಲೂಕು ಕಾರ್ಯದರ್ಶಿ ಮಹಾಂತೇಶ ಇಳಗೇರಿ, ರಾಮು ಸಾರವಾಡ, ಪಿ.ಎಸ್. ನೀಲಗುಂದ, ಕೆರೂರು ಹೋಬಳಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article